ಅನುಭಾವಿಯ ಅಸಾಧಾರಣ ಶಕ್ತಿಯನ್ನು ಕಟ್ಟಿಕೊಡುವ ರೂಮಿಯ ಕವಿತೆಗಳು

Update: 2019-03-17 18:44 GMT

ಪರ್ಶಿಯನ್ ಸೂಫಿ ಸಂತ, ಕವಿ ಜಲಾಲುದ್ದೀನ್ ರೂಮಿ ಎಲ್ಲ ಗಡಿಗಳನ್ನು ಮೀರಿ ಜನಮಾನಸವನ್ನು ತಲುಪಿದಾತ. ದೇಶ, ಕಾಲ, ಧರ್ಮ, ವರ್ಗಗಳನ್ನು ಮೀರಿ ಆತ ಮತ್ತೆ ಮತ್ತೆ ಎಲ್ಲರನ್ನು ತಲುಪುತ್ತಲೇ ಇದ್ದಾನೆ. ರೂಮಿಯನ್ನು ಕನ್ನಡಕ್ಕಿಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ಹಲವು ಲೇಖಕರು ರೂಮಿಯನ್ನು ಕನ್ನಡಕ್ಕೆ ತಂದಿದ್ದಾರೆ. ರೂಮಿಯ ಅನುವಾದದ ದೊಡ್ಜ ದೌರ್ಬಲ್ಯವೆಂದರೆ, ಕನ್ನಡಕ್ಕೆ ಬಂದ ಬಹುತೇಕ ಅನುವಾದಗಳು ಇಂಗ್ಲಿಷ್ ಮೂಲಕ ಬಂದವುಗಳು. ಪರ್ಷಿಯನ್ ಭಾಷೆಯಿಂದ ಇಂಗ್ಲಿಷ್‌ಗೆ ಇಳಿದು ಅಲ್ಲಿಂದ ಇನ್ನೊಂದು ಭಾಷೆಗೆ ತಲುಪುವಷ್ಟರಲ್ಲಿ ರೂಮಿ ಕವಿತೆಗಳ ಮೂಲ ಸ್ವರೂಪಕ್ಕೆ ಸಾಕಷ್ಟು ಧಕ್ಕೆಯಾಗಿರುತ್ತದೆ. ಇಲ್ಲಿ ಉದಯಕುಮಾರ್ ಹಬ್ಬು ಅವರು ಮತ್ತೆ ರೂಮಿಯನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ. ರೆನಾಲ್ಡ್ ಎ. ನಿಕಾಲಸ್ ಅವರ ‘ರೂಮಿ ಮಿಸ್ಟಿಕ್ ಆ್ಯಂಡ್ ಪೊಯೆಟ್’ ಎಂಬ ಅನುವಾದಿತ ಕೃತಿಯನ್ನು ಆಧರಿಸಿ ಕನ್ನಡಕ್ಕೆ ತರಲಾಗಿದೆ. ರೆನಾಲ್ಡ್ ಪರ್ಶಿಯನ್ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರವೀಣರಾಗಿರುವುದರಿಂದ ಭಾವಕ್ಕೆ ದೊಡ್ಡ ಧಕ್ಕೆಯೇನೂ ಆಗಿಲ್ಲ.
ಇಲ್ಲಿನ ಕವಿತೆಗಳು ಹೆಚ್ಚಾಗಿ ಆಧ್ಯಾತ್ಮಿಕ ಅನುಭೂತಿಗೆ ಪ್ರಾಶಸ್ತ್ಯ ನೀಡಿದ್ದರೂ ಮನುಷ್ಯ ಸಂಬಂಧಗಳ ಸಂಕೀರ್ಣ ಚಿತ್ರಗಳೂ, ದೇವರು ಮತ್ತು ಭಕ್ತನ ನಡುವಿನ ಸಂಬಂಧಗಳೂ ಮತ್ತು ಸಾಮಾಜಿಕ ಆಯಾಮವುಳ್ಳ ಕವಿತೆಗಳೂ ಇಲ್ಲಿವೆ. ಸಾವಿನ ಸೌಂದರ್ಯದ ಕುರಿತಂತೆ ಬರೆಯುತ್ತಾ ರೂಮಿ ಹೇಳುತ್ತಾನೆ ‘‘ಪ್ರತಿಯೊಬ್ಬನ ಸಾವು ಅವನಂತಹದ್ದೆ ಗುಣವನ್ನು ಹೊಂದಿದೆ, ನನ್ನ ಮಗುವೆ: ದೇವರ ವೈರಿಗೆ ವೈರಿಯೆಂದು, ದೇವರ ಗೆಳೆಯನಿಗೆ ಗೆಳೆಯನೆಂದು....’’
‘ಭಯ ಮತ್ತು ಪ್ರೀತಿ’ಯಲ್ಲಿ ರೂಮಿ ಹೀಗೆ ಹೇಳುತ್ತಾನೆ ‘‘ಅನುಭಾವಿ ಸಿಂಹಾಸನವನು ಒಂದು ಕ್ಷಣದೊಳಗೆ ಏರುವನು, ವಿರಕ್ತನಿಗೆ ಒಂದು ತಿಂಗಳು ಬೇಕು ಒಂದು ದಿನದ ಪಯಣಕೆ...’’ವಿರಕ್ತನನ್ನು ಅಂಜುಬುರುಕನೆಂದು ಕರೆಯುವ ರೂಮಿ, ಅನುಭಾವಿಯ ಅಸಾಧಾರಣ ಶಕ್ತಿಯನ್ನು ಈ ಕವಿತೆಯಲ್ಲಿ ಬಣ್ಣಿಸುತ್ತಾನೆ.
ಇಲ್ಲಿ ಕವಿ ಮೂಲಕ ಕವಿತೆಯನ್ನು ಆಧರಿಸಿ ಅನುವಾಸಿದ್ದೇನೆ ಎನ್ನುವ ಮೂಲಕ, ಮೂಲ ಕವಿತೆಯ ಯಥಾವತ್ ಸ್ವಾದ ನಮಗೆ ಸಿಗುವಂತಿಲ್ಲ. ಆದರೆ ಇಂಗ್ಲಿಷ್ ಅನುವಾದಕ್ಕೆ ಗರಿಷ್ಠ ಮಟ್ಟದಲ್ಲಿ ನಿಷ್ಠರಾಗಿ ಸರಳವಾಗಿ ರೂಮಿಯ ಅನುಭಾವಿ ಚಿಂತನೆಯನ್ನು ಲೇಖಕ ಹಬ್ಬು ಕಟ್ಟಿಕೊಟ್ಟಿದ್ದಾರೆ. ಲೇಖಕರೇ ಕೃತಿಯನ್ನು ಪ್ರಕಟಿಸಿದ್ದು, ಕೃತಿಯ ಒಟ್ಟು ಪುಟಗಳು 100. ಮುಖಬೆಲೆ 90 ರೂ. ಆಸಕ್ತರು 99027 61720 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News