ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಧ್ವರಾಜ್ ಸ್ಪರ್ಧೆ ಬಗ್ಗೆ ಚರ್ಚೆ: ಸಿಎಂ ಕುಮಾರಸ್ವಾಮಿ

Update: 2019-03-18 12:18 GMT

ಚಿಕ್ಕಮಗಳೂರು, ಮಾ.18: ಚುನಾವಣೆ ಎಂಬುದು ಯುದ್ಧ, ಯುದ್ಧ ಗೆಲ್ಲಲು ಶೃಂಗೇರಿ ಶಾರದಾಂಬೆಯ ಆಶೀರ್ವಾದ ಪಡೆಯಲು ಬಂದಿದ್ದೇನೆ. ರಾಜ್ಯದ 28 ಕ್ಷೇತ್ರಗಳಲ್ಲೂ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗಾಗಿ ತಾಯಿಯ ಆಶೀರ್ವಾದ ಬೇಡಿದ್ದೇನೆಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ಶೃಂಗೇರಿ ಶಾರದಾಂಬೆ ಸನ್ನಿಧಿಗೆ ಎಚ್.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯೊಂದಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಸ್ಪರ್ಧೆ ಮಾಡಲಿದ್ದು, ನಾಮಪತ್ರ ಸಲ್ಲಿಸುವ ಮುನ್ನ ದೇವಿಯ ಆಶೀರ್ವಾದ ಪಡೆಯಲು ಬಂದಿದ್ದೇವೆ. ಕೇವಲ ನಿಖಿಲ್‍ಗಾಗಿ ಮಾತ್ರ ಇಲ್ಲಿಗೆ ಬಂದಿಲ್ಲ. ರಾಜ್ಯದ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಾರ್ಥಿಸಲು ಬಂದಿದ್ದೇವೆ. ನನ್ನ ಕುಟುಂಬದವರು ಶಾರದಾಂಬೆಯ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ. ಈ ನಂಬಿಕೆಯ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಲು ಬಂದಿದ್ದೇವೆ ಎಂದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಮೋದ್ ಮಧ್ವರಾಜ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಮೋದ್ ಮಧ್ವರಾಜ್ ಬೇರೆಯವರಲ್ಲ, ಅವರು ನಮ್ಮವರೇ. ಅವರ ಸ್ಪರ್ಧೆ ಬಗ್ಗೆ ಎರಡೂ ಪಕ್ಷಗಳ ವರಿಷ್ಠರು ಕೂತು ಚರ್ಚಿಸುತ್ತೇವೆ ಎಂದರು.

ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪಕ್ಷೇತರವಾಗಿ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸುಮಲತಾ ಸ್ಪರ್ಧೆ ಬಗ್ಗೆ ತಲೆಕೆಡಿಸಿಕೊಳ್ಳುವ ಆವಶ್ಯಕತೆ ಇಲ್ಲ. ಅವರ ಬಗ್ಗೆ ಪ್ರಚಾರಕ್ಕೆ ಎಲ್ಲ ಸಿನೆಮಾದವರು ಈಗ ಬಂದಿದ್ದಾರೆ. ರಾಜ್ಯದ ಜನರ ಬಗ್ಗೆ ಸಿನೆಮಾ ನಟರಿಗೆ ಈಗ ಕಾಳಜಿ ಬಂದಿದೆ. ಅವರು ಬಂದರೆ ಸಂತೋಷ, ಮಂಡ್ಯ ಜನರ ಬಗ್ಗೆ ಸಿನೆಮಾ ನಟರು ಏನು ಮಾಡತ್ತಾರೋ ನೋಡೋಣ. ನಿಖಿಲ್ ವಿರುದ್ಧವಾಗಿ ಪ್ರಚಾರ ಮಾಡಲು ಎಲ್ಲ ನಟರು ಬಂದರೂ ನನಗೇನೂ ಆತಂಕವಿಲ್ಲ. ನಾನು ಚಿತ್ರರಂಗದಿಂದಲೇ ಬಂದವನು, ನಾನು ಕಾಣದೇ ಇರುವ ಚಿತ್ರನಟರು ಯಾರೂ ಇಲ್ಲ. ಸುಮಲತಾ ಪರ ಯಾರು ಬಂದು ಪ್ರಚಾರ ಮಾಡಿದರೂ ನನಗೇನೂ ಆತಂಕವಿಲ್ಲ ಎಂದ ಅವರು, ನಿಖಿಲ್ ಪರವಾಗಿ ಮಂಡ್ಯದಲ್ಲಿ ಆರಂಭದಿಂದಲೂ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ ಎಂದರು.

ಇದಕ್ಕೂ ಮುನ್ನ ಸಿಎಂ ಕುಮಾರಸ್ವಾಮಿ ತಮ್ಮ ಪತ್ನಿ ಹಾಗೂ ಪುತ್ರ ನಿಖಿಲ್ ಜತೆ ಶಾರದಾಂಬೆ ದರ್ಶನ ಪಡೆದು ನಂತರ ಮಠದ ಗುರು ನಿವಾಸದಲ್ಲಿ ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧು ಶೇಖರ್ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಇದೇ ವೇಳೆ ನಿಖಿಲ್‍ ಕುಮಾರಸ್ವಾಮಿ ತಮ್ಮ ನಾಮಪತ್ರವನ್ನು ಸ್ವಾಮೀಜಿಗಳ ಮುಂದಿರಿಸಿ ಆಶೀರ್ವಾದ ಪಡೆದರು. ಶೃಂಗೇರಿ ಭೇಟಿಯ ನಂತರ ಕುಮಾರಸ್ವಾಮಿ ಕುಟುಂಬಸ್ಥರು ಧರ್ಮಸ್ಥಳಕ್ಕೆ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News