ದಾವಣಗೆರೆ: ಅರ್ಜಿ ತ್ವರಿತ ವಿಲೇವಾರಿಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಯಿಂದ ಧರಣಿ

Update: 2019-03-18 14:01 GMT

ದಾವಣಗೆರೆ,ಮಾ.18: ಸೌಲಭ್ಯಗಳ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಹೊಡೆಯುವ ಕೋರೆ ಕಾರ್ಮಿಕರ ಸಂಘಟನೆಯ ಆಶ್ರಯದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. 

ಜಯದೇವವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿ ತಲುಪಿ ಮನವಿ ಸಲ್ಲಿಸಿದರು.
ಕಾರ್ಮಿಕ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸುಮಾರು 7500 ಕೋಟಿ ಗೂ ಅಧಿಕ ಹಣವಿದೆ. ಮಂಡಳಿಯಲ್ಲಿ ನೊಂದಣಿಗೊಂಡಿರುವ ಫಲಾನುಭವಿಗಳಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ, ಇದಕ್ಕೆ ಕಾರಣ ಮೇಲಾಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಿಬ್ಬಂದಿಯ ಕೊರತೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಕೇವಲ ಶೈಕ್ಷಣಿಕ ಸಹಾಯಧನದ ಅರ್ಜಿಗಳು ಎರಡು ಮೂರು ವರ್ಷಗಳು ಇತ್ಯರ್ಥವಾಗದೆ ಉಳಿದಿವೆ. ಇನ್ನು ಉಳಿದ ಸೌಲಭ್ಯ ತಲುಪಿಸುವಲ್ಲಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಮಂಡಳಿ ಕೊಡುವ ಸೌಲಭ್ಯ ಮೂಗಿಗೆ ತುಪ್ಪ ಸವರಿದಂತಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ, ಆದ್ದರಿಂದ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಮತ್ತು ಕಾರ್ಮಿಕ ಸಂಘಟನೆಯ ನಾಯಕರುಗಳ ಸಭೆ ಕರೆಯಬೇಕು. ಕಲ್ಯಾಣ ಮಂಡಳಿಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಯ ಪ್ರತಿನಿಧಿಗಳನ್ನು ಸದಸ್ಯರಾಗಿ ನೇಮಿಸಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಬೇಕು. ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಮರಳು ಡಿಪೋ ಪ್ರಾರಂಭಿಸಬೇಕು. ನಿವೇಶನ ನೀಡಬೇಕು. ಇಎಸ್‍ಐ, ಸಕಾಲದಲ್ಲಿ ಸಹಾಯಧನ, ಪಿಂಚಣಿ ಸಹಾಯಧನ, ಹೆರಿಗೆ ಸೌಲಭ್ಯ ಸೇರಿದಂತೆ ಮಂಡಳಿಯಿಂದ ನೀಡುವ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಪಾಲಿಕೆ ಸದಸ್ಯರಾದ ಪಿ.ಕೆ.ಲಿಂಗರಾಜ್, ಹೆಚ್.ಜಿ.ಉಮೇಶ್,  ಮುಖಂಡರಾದ ಪಿ.ಷಣ್ಮುಖಸ್ವಾಮಿ, ಭಜನೆ ಹನುಮಂತಪ್ಪ, ವಿ.ಲಕ್ಷ್ಮಣ್, ಅಬ್ದುಲ್ ರೆಹಮಾನ್ ಸಾಬ್, ತಿಪ್ಪೇಸ್ವಾಮಿ, ಭೀಮಾರೆಡ್ಡಿ, ಹಾಲೇಶ್, ಸೈಯದ್ ಗೌಸ್ ಪೀರ್, ಸುರೇಶ್ ಸೇರಿದಂತೆ ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News