ಅಕ್ರಮ ಸಂಬಂಧ ಹಿನ್ನೆಲೆ ಪತಿ ಕೊಲೆ ಪ್ರಕರಣ: ಪತ್ನಿ, ಪ್ರಿಯಕರ ಬಂಧನ

Update: 2019-03-18 14:39 GMT

ಬೆಂಗಳೂರು, ಮಾ.18: ಅಕ್ರಮ ಸಂಬಂಧ ಬೆಳಕಿಗೆ ಬಂದ ಹಿನ್ನೆಲೆ, ಪತಿಯನ್ನೆ ಕೊಲೆಗೈದಿದ್ದ ಪತ್ನಿ, ಪ್ರಿಯಕರ ಸೇರಿದಂತೆ ಇಬ್ಬರನ್ನು ಬಂಧಿಸುವಲ್ಲಿ ಇಲ್ಲಿನ ಸೋಲದೇವನಹಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೆಸರುಘಟ್ಟದ ದಾಸೇನ ಹಳ್ಳಿಯ ಸುಖಿತಾ(30), ಶ್ರೀನಿವಾಸ್(31) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾರೆ ಕೆಲಸ ಮಾಡುತ್ತಿದ್ದ ಉಮಾಶಂಕರ್‌ನನ್ನು 10 ವಷರ್ಗಳ ಹಿಂದೆ ವಿವಾಹವಾಗಿದ್ದ ಸುಖಿತಾಗೆ ಇಬ್ಬರು ಮಕ್ಕಳಿದ್ದಾರೆ. ಬಾಡಿಗೆ ಮನೆ ಮಾಡಿಕೊಂಡು ಸುಖಿತಾ, ಉಮಾಶಂಕರ್ ದಂಪತಿ ವಾಸಿಸುತ್ತಿದ್ದು, ಎರಡು ವರ್ಷಗಳ ಹಿಂದೆ ಪಕ್ಕದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಕಾರು ಚಾಲಕ ಶ್ರೀನಿವಾಸ್ ಎಂಬಾತನೊಂದಿಗೆ ಸುಖಿತಾ, ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಚಾರ ಪತಿ ಉಮಾಶಂಕರ್‌ಗೆ ಗೊತ್ತಾಗಿ, ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕಳೆದ 2018ರ ಫೆಬ್ರವರಿ 25 ರಂದು ರಾತ್ರಿ ಉಮಾಶಂಕರ್ ಪಾನಮತ್ತನಾಗಿ ಮಲಗಿದ್ದ ವೇಳೆ ಉಸಿರುಗಟ್ಟಿಸಿ ಕೊಲೆ ಮಾಡಿ, ಶ್ರೀನಿವಾಸ್ ಅಲ್ಲಿಂದ ಹೊರಟು ಹೋಗಿದ್ದ ಎಂದು ತಿಳಿದುಬಂದಿದೆ.

ಮರುದಿನ ಬೆಳಗ್ಗೆ ಸುಖಿತಾ ನಾಟಕವಾಡಿ ಕುಡಿದ ಅಮಲಿನಲ್ಲಿ ಪತಿ ಉಮಾಶಂಕರ್ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರಿಗೆ ತಿಳಿಸಿ ಅಂತ್ಯಕ್ರಿಯೆಗೆ ಮುಂದಾಗಿದ್ದಳು.

ಈ ಬಗ್ಗೆ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸೋಲದೇವನಹಳ್ಳಿ ಪೊಲೀಸರು ಮೃತದೇಹವನ್ನು ಪರಿಶೀಲಿಸಿದಾಗ ದೇಹದ ಯಾವುದೇ ಭಾಗದಲ್ಲಿ ಗಾಯದ ಗುರುತುಗಳಾಗಲಿ, ಕತ್ತು ಹಿಸುಕಿರುವ ಕಲೆಗಳಾಗಲಿ ಇರಲಿಲ್ಲ.

ಇದೊಂದು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿ ಮೃತದೇಹವನ್ನು ವೈದ್ಯಕೀಯ ಪರೀಕ್ಷೆ ನಡೆಸಿ ಶವವನ್ನು ಪತ್ನಿಗೆ ನೀಡಿದ್ದರು. ಈ ನಡುವೆ ಉಮಾಶಂಕರ್ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ, ಅವರ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದರು.

ತನಿಖೆಯನ್ನು ಚುರುಕುಗೊಳಿಸಿದ ಸೋಲದೇವನಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ವೆಂಕಟೇಗೌಡ ಮತ್ತವರ ಸಿಬ್ಬಂದಿ, ಸುಖಿತಾಳ ಮೊಬೈಲ್ ಕರೆಗಳನ್ನು ಪರಿಶೀಲಿಸಿ ಆಕೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಪ್ರಿಯಕರ ಶ್ರೀನಿವಾಸ್ ಜೊತೆ ಸೇರಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News