ಪ್ರಧಾನಿ ಮೋದಿ ದೇಶದ ಪಾಲಿಗೆ ‘ಚೌಕಿದಾರ್ ಚೋರ್ ಹೈ’: ಕಲಬುರಗಿಯಲ್ಲಿ ರಾಹುಲ್ ಗಾಂಧಿ

Update: 2019-03-18 15:36 GMT

ಕಲಬುರಗಿ, ಮಾ.18: ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದಾಗ ನನ್ನನ್ನು ಪ್ರಧಾನಿ ಅಲ್ಲ, ಚೌಕಿದಾರ್ ಮಾಡಿ ಎಂದು ಹೇಳಿದ್ದರು. ಈಗ ‘ಚೌಕಿದಾರ್ ಚೋರ್ ಹೈ’ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಆದುದರಿಂದ, ಇಡೀ ದೇಶವನ್ನೆ ಚೌಕಿದಾರ್ ಮಾಡಲು ಹೊರಟಿದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ನಗರದ ಎನ್.ವಿ.ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ‘ಪರಿವರ್ತನಾ ಯಾತ್ರೆ’ಯನ್ನುದ್ದೇಶಿಸಿ ಮಾತನಾಡಿದ ಅವರು, ಮೆಹುಲ್ ಚೋಕ್ಸಿ, ನೀರವ್ ಮೋದಿ, ಲಲಿತ್ ಮೋದಿ, ವಿಜಯ್‌ಮಲ್ಯ ಪಾಲಿಗೆ ಚೌಕಿದಾರ್ ಆಗಿರುವ ಮೋದಿ, ಪುಲ್ವಾಮಾದಲ್ಲಿ ನಮ್ಮ ಯೋಧರ ಮೇಲೆ ನಡೆದ ದಾಳಿ ದಿನವೇ ದೇಶದ ಆರು ವಿಮಾನ ನಿಲ್ದಾಣಗಳನ್ನು ಅದಾನಿ ಸಂಸ್ಥೆಗೆ ನೀಡಿದ್ದಾರೆ ಎಂದು ಟೀಕಿಸಿದರು. ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದವು ವಿಶ್ವದ ಅತೀ ದೊಡ್ಡ ರಕ್ಷಣಾ ಒಪ್ಪಂದವಾಗಿದೆ. ಯುಪಿಎ ಸರಕಾರದ ಅವಧಿಯಲ್ಲಿ ಬೆಂಗಳೂರು, ಓಡಿಶಾ ಸೇರಿದಂತೆ ದೇಶದ ಇನ್ನಿತರ ನಗರಗಳಲ್ಲಿ ಎಚ್‌ಎಎಲ್ ಮೂಲಕ ವಿಮಾನಗಳು ತಯಾರಿಸಲು ನಿರ್ಧರಿಸಲಾಗಿತ್ತು. ಅಲ್ಲದೇ, ಅಂದಿನ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಒಂದು ವಿಮಾನದ ದರ 526 ಕೋಟಿ ರೂ.ಗಳೆಂದು ತಿಸಿದ್ದರು ಎಂದು ಅವರು ಹೇಳಿದರು.

ಆದರೆ, ಚೌಕಿದಾರ್ ತನ್ನ ಜೊತೆ ಅನಿಲ್ ಅಂಬಾನಿಯನ್ನು ಕರೆದುಕೊಂಡು ಫ್ರಾನ್ಸ್‌ಗೆ ಹೋಗಿ ಇಡೀ ಒಪ್ಪಂದವನ್ನೇ ಬದಲಾಯಿಸಿಬಿಟ್ಟರು. 526 ಕೋಟಿ ರೂ.ಗಳ ವಿಮಾನವನ್ನು 1600 ಕೋಟಿ ರೂ.ಗಳಿಗೆ ಖರೀದಿಸಲು ಒಪ್ಪಂದ ಮಾಡಿಕೊಂಡರು. ಎಚ್‌ಎಎಲ್‌ಗೆ ನೀಡಿದ್ದ ಒಪ್ಪಂದ ರದ್ದು ಪಡಿಸಿ, ಕರ್ನಾಟಕದ ಯುವಕರಿಗೆ ಉದ್ಯೋಗ ಅವಕಾಶಗಳಿಂದ ವಂಚಿತರನ್ನಾಗಿಸಿದರು ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಒಪ್ಪಂದ ಸಿಗುವ 10 ದಿನಗಳ ಮುನ್ನ ಸ್ಥಾಪನೆಯಾದ ಅನಿಲ್ ಅಂಬಾನಿ ಸಂಸ್ಥೆಗೆ ವಿಶ್ವದ ಅತೀ ದೊಡ್ಡ ರಕ್ಷಣಾ ಒಪ್ಪಂದ ನೀಡಲಾಯಿತು. ಇದರಿಂದಾಗಿ, ಅನಿಲ್ ಅಂಬಾನಿಗೆ ನೇರವಾಗಿ 30 ಸಾವಿರ ಕೋಟಿ ರೂ.ಗಳ ಲಾಭ ಸಿಕ್ಕಿತು. ಅಂಬಾನಿಗೆ ಒಪ್ಪಂದ ಸಿಗಬೇಕೆಂದು ಮೋದಿ ಹೇಳಿದರೆಂದು ಫ್ರಾನ್ಸ್‌ನ ರಾಷ್ಟ್ರಪತಿ ತಿಳಿಸಿದ್ದಾರೆ ಎಂದು ಅವರು ತಿಳಿಸಿದರು.

ಸಿಬಿಐ ನಿದೇರ್ಶಕರನ್ನು ಕಿತ್ತೊಗೆಯುತ್ತಾರೆ. ಸುಪ್ರೀಂಕೋರ್ಟ್ ಸೂಚನೆ ಕೊಟ್ಟ ನಂತರ ಸಿಬಿಐ ನಿರ್ದೇಶಕರನ್ನು ವಾಪಸ್ ಅವರ ಸ್ಥಾನಕ್ಕೆ ನೇಮಿಸಿ, ಕೆಲವೇ ಗಂಟೆಗಳಲ್ಲಿ ಚೌಕಿದಾರ್ ವಜಾ ಮಾಡುತ್ತಾರೆ. ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳೇ ಮಾಧ್ಯಮಗಳಲ್ಲಿ ಬರೆದಿದ್ದಾರೆ ದೇಶದ ‘ಚೌಕಿದಾರ್ ಚೋರ್ ಹೈ’ ಎಂದು ರಾಹುಲ್ ಗಾಂಧಿ ಹೇಳಿದರು.

ಹೈದರಾಬಾದ್-ಕರ್ನಾಟಕ ಭಾಗದ ಜನರಿಗೆ ನಾವು ಈ ಹಿಂದೆ ನೀಡಿದ್ದ ವಾಗ್ದಾನದಂತೆ 371 ಜೆ ಜಾರಿ ಮಾಡಿದೆವು. ಇದರಿಂದಾಗಿ, ಐದು ವರ್ಷಗಳಲ್ಲಿ 30 ಸಾವಿರ ಯುವಕರಿಗೆ ಉದ್ಯೋಗ ಅವಕಾಶ ಸಿಕ್ಕಿದೆ. ಪ್ರತಿ ವರ್ಷ 6 ಸಾವಿರ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ, 800 ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಅವಕಾಶ ಸಿಗುತ್ತಿದೆ ಎಂದು ಅವರು ತಿಳಿಸಿದರು.

ಪ್ರತಿಯೊಬ್ಬರ ಖಾತೆಗಳಿಗೆ 15 ಲಕ್ಷ ರೂ., ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆಯನ್ನು ಚೌಕಿದಾರ್ ನೀಡಿದ್ದರು. ಆದರೆ, ಯಾವುದನ್ನು ಮಾಡಿಲ್ಲ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ತಾನ್, ಪಂಜಾಬ್‌ನಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.

ಕಾರ್ಪೋರೇಟ್ ಸಂಸ್ಥೆಗಳ 15-20 ಜನರ 3.50 ಲಕ್ಷ ಕೋಟಿ ರೂ.ಗಳನ್ನು ಮನ್ನಾ ಮಾಡುವ ಕೇಂದ್ರ ಸರಕಾರ, ರೈತರ ಸಾಲ ಮನ್ನಾ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಕಾಂಗ್ರೆಸ್ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರತಿಯೊಬ್ಬರಿಗೂ ಕನಿಷ್ಠ ಆದಾಯದ ಭದ್ರತೆ ನೀಡುತ್ತೇವೆ. ಬಡವರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡುವ ಐತಿಹಾಸಿಕ ನಿರ್ಣಯವನ್ನು ಮಾಡಿದ್ದೇವೆ ಎಂದು ಅವರು ಹೇಳಿದರು.

ಗಬ್ಬರ್‌ಸಿಂಗ್ ಟ್ಯಾಕ್ಸ್(ಜಿಎಸ್‌ಟಿ) ಅನ್ನು ಸರಳೀಕೃತಗೊಳಿಸಿ, ಭವಿಷ್ಯದಲ್ಲಿ ನಿಮಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಸಣ್ಣ ವ್ಯಾಪಾರಿಗಳನ್ನು ರಕ್ಷಿಸುತ್ತೇವೆ. ಒಂದೇ ಮಾದರಿಯ ತೆರಿಗೆಯನ್ನು ಪರಿಚಯಿಸಿ, ಸರಳ ರೀತಿಯ ವಿಧಾನವನ್ನು ಅಳವಡಿಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News