ಸುಳ್ಳು-ಮೋಸಗಳಿಂದ ಜನರನ್ನು ದಿಕ್ಕು ತಪ್ಪಿಸುತ್ತಿರುವ ಬಿಜೆಪಿ: ಬಸವರಾಜ ಹೊರಟ್ಟಿ

Update: 2019-03-18 15:45 GMT

ಹುಬ್ಬಳ್ಳಿ, ಮಾ.18: ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ನಾಯಕರು ಎಲ್ಲೆಡೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಜನರಿಗೆ ಮೋಸ ಮಾಡುವುದು ಹೇಗೆ ಎಂಬುದನ್ನು ಬಿಜೆಪಿಯಿಂದ ನೋಡಿ ಕಲಿಯಬೇಕು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಟೀಕಿಸಿದರು.

ಸೋಮವಾರ ನಗರದಲ್ಲಿ ಆಯೋಜಿಸಿದ್ದ ಧಾರವಾಡ ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕರ್ತರೊಂದಿಗೆ ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಬಿಜೆಪಿಯವರು ಕೇವಲ ಭಾಷಣ ಮಾಡುತ್ತಾರೆ ವಿನಃ ಯಾವುದೇ ಕೆಲಸ ಕಾರ್ಯ ಮಾಡುತ್ತಿಲ್ಲ. ಒಳ್ಳೆಯ ಕೆಲಸ ಕಾರ್ಯ ಮಾಡುವವರಿಗೆ ಪ್ರಚಾರಗಳ ಫಲ, ಜಾಹೀರಾತು ಬೇಕಿಲ್ಲ. ಆದರೆ, ಬಿಜೆಪಿ ನಾಯಕರು ಸುಳ್ಳು ಹೇಳಿಕೆಗಳನ್ನು ನೀಡಿ, ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಹೀಗಾಗಿ, ಎಲ್ಲರೂ ಎಚ್ಚರಿಕೆಯಿಂದ ಮತ ಚಲಾಯಿಸಬೇಕು ಎಂದು ತಿಳಿಸಿದರು.

ಮಂಡ್ಯ ಲೋಕಸಭಾ ಚುನಾವಣೆ ಕುರಿತು ಮಾತನಾಡಿ, ನಿಖಿಲ್ ಕುಮಾರಸ್ವಾಮಿ ಒಬ್ಬ ಪ್ರತಿಭಾವಂತ ವ್ಯಕ್ತಿ. ಅವರಿಗೆ ರಾಜಕೀಯ ಜೀವನದಲ್ಲಿ ಉಜ್ವಲ ಭವಿಷ್ಯವಿದೆ. ಸುಮಲತಾ ಅವರು ತಮಗೆ ಸಹೋದರಿಯ ಸಮಾನ, ಈ ಹಿನ್ನೆಲೆಯಲ್ಲಿ ನಾವು ಯಾರ ಬಗ್ಗೆ ಕೂಡ ಟೀಕೆ ಟಿಪ್ಪಣಿ ಮಾಡುವುದಿಲ್ಲ ಎಂದು ಹೇಳಿದರು.

ತಾಲೂಕು, ಜಿಲ್ಲಾ ಮಟ್ಟದಲ್ಲಿ ಘಟಕಗಳನ್ನು ಸೃಷ್ಟಿಸುವ ಮೂಲಕ ಕಾರ್ಯಕರ್ತರ ಸಹಕಾರದಿಂದ ಸಾರ್ವಜನಿಕ ಸಹಭಾಗಿತ್ವಕ್ಕೆ ಶ್ರಮಿಸಲಾಗುತ್ತದೆ. ಅಲ್ಲದೆ ಪ್ರತಿಯೊಬ್ಬರು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳ ಜಯಕ್ಕೆ ಬೆಂಬಲ ಸೂಚಿಸಬೇಕು ಎಂದು ಕೋರಿದರು.

‘ನಿಖಿಲ್ ಅಭಿವೃದ್ಧಿ ಮಾಡುತ್ತಾರೆ’

ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಗೆಲವು ಸಾಧಿಸಬೇಕು. ಏಕೆಂದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಅಭಿವೃದ್ಧಿ ಮಾಡುತ್ತಾರೆ.

-ಬಸವರಾಜ ಹೊರಟ್ಟಿ, ಮಾಜಿ ಸಭಾಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News