ಜನ ಹೋರಾಟ, ಸುಪ್ರೀಂ ಒತ್ತಡಕ್ಕೆ ಮಣಿದು ಲೋಕಪಾಲ್ ನೇಮಕ: ಅಣ್ಣಾ ಹಝಾರೆ

Update: 2019-03-18 15:46 GMT

ರಾಳೆಗಣ ಸಿದ್ದಿ, ಮಾ. 18: ಜನ ಚಳವಳಿ ಹಾಗೂ ಸುಪ್ರೀಂ ಕೋರ್ಟ್ ಒತ್ತಡದಿಂದ ಕೇಂದ್ರ ಸರಕಾರ ಲೋಕಪಾಲರನ್ನು ನಿಯೋಜಿಸಿದೆ ಎಂದು ಭ್ರಷ್ಟಾಚಾರ ವಿರೋಧಿ ಚಳವಳಿಯ ನಾಯಕ ಅಣ್ಣಾ ಹಝಾರೆ ಸೋಮವಾರ ಹೇಳಿದ್ದಾರೆ.

ವರದಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ ಅವರನನ್ನು ಒಳಗೊಂಡ ಶೋಧನಾ ಸಮಿತಿ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರ ಹೆಸರನ್ನು ಅಂತಿಮಗೊಳಿಸಿದೆ ಎಂದು ವರದಿ ಹೇಳಿದೆ.

ಲೋಕಪಾಲ ಕುರಿತ ಜನರ ಚಳವಳಿ ಲೋಕಪಾಲರನ್ನು ನಿಯೋಜಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ಲೋಕಪಾಲ್ ನೇಮಕ ಕುರಿತಂತೆ ಮೂರ್ನಾಲ್ಕು ಬಾರಿ ಕೇಂದ್ರ ಸರಕಾರಕ್ಕೆ ಚಾಟಿ ಬೀಸಿದೆ ಎಂದು ಅಣ್ಣಾ ಹಝಾರೆ ಹೇಳಿದ್ದಾರೆ.

ಚಳವಳಿ ಆರಂಭವಾದ 9 ವರ್ಷಗಳ ಬಳಿಕ ಲೋಕಪಾಲರ ನೇಮಕವಾಗುತ್ತಿದೆ. ಸಾರ್ವಜನಿಕರು ಎಷ್ಟು ಪ್ರಭಾವಶಾಲಿ ಎಂಬುದು ಈಗ ಜಗತ್ತಿಗೆ ತಿಳಿಯುತ್ತಿದೆ. ಸುಪ್ರೀಂ ಕೋರ್ಟ್ ಕೂಡ ತುಂಬಾ ಪ್ರಭಾವಶಾಲಿ ಎಂದು ಹಝಾರೆ ತಿಳಿಸಿದ್ದಾರೆ.

ಲೋಕಪಾಲ್ ಹಾಗೂ ಲೋಕಾಯುಕ್ತ ವಿಷಯದ ಕುರಿತು ಕೇಂದ್ರ ಸರಕಾರ ಭರವಸೆ ನೀಡಿದ 7 ದಿನಗಳ ಬಳಿಕ ಫೆಬ್ರವರಿ 5ರಂದು ಹಝಾರೆ ಉಪವಾಸ ಮುಷ್ಕರ ನಿಲ್ಲಿಸಿದ್ದರು. ಭ್ರಷ್ಟಾಚಾರ ನಿಗ್ರಹಕ್ಕಾಗಿ ಕೇಂದ್ರದಲ್ಲಿ ಲೋಕಪಾಲ ಹಾಗೂ ರಾಜ್ಯದಲ್ಲಿ ಲೋಕಾಯುಕ್ತರನ್ನು ನೇಮಕ ಮಾಡುವಂತೆ ಆಗ್ರಹಿಸಿ ಅಣ್ಣಾ ಹಝಾರೆ ಅವರು ಜನವರಿ 30ರಂದು ಉಪವಾಸ ಮುಷ್ಕರ ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News