ಬಿಜೆಪಿ, ಆರೆಸೆಸ್ಸ್‌ನವರಿಗೆ ಸಂವಿಧಾನ ಮುಟ್ಟಲು ಕಾಂಗ್ರೆಸ್ ಬಿಡುವುದಿಲ್ಲ: ರಾಹುಲ್ ಗಾಂಧಿ

Update: 2019-03-18 16:12 GMT

ಕಲಬುರಗಿ, ಮಾ.18: ಕರ್ನಾಟಕದಲ್ಲಿ ನಾವು ಜೆಡಿಎಸ್ ಜೊತೆ ಸೇರಿ ಲೋಕಸಭಾ ಚುನಾವಣೆ ಎದುರಿಸಲು ಹೊರಟಿದ್ದೇವೆ. ಬೂತ್‌ಮಟ್ಟದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಿ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

ಸೋಮವಾರ ನಗರದ ಎನ್.ವಿ.ಮೈದಾನದಲ್ಲಿ ಕೆಪಿಸಿಸಿ ಆಯೋಜಿಸಿದ್ದ ಪರಿವರ್ತನಾ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಚುನಾವಣೆಯು ವಿಚಾರಧಾರೆಗಳ ನಡುವಿನ ಹೋರಾಟ. ನಾವು ಇಲ್ಲಿ ಜೆಡಿಎಸ್ ಜೊತೆ ಕೆಲಸ ಮಾಡಿ ಎಲ್ಲ ಕ್ಷೇತ್ರಗಳನ್ನು ಗೆಲ್ಲಬೇಕಿದೆ ಎಂದರು.

ನಾವು ಕೊಟ್ಟ ಭರವಸೆಯಂತೆ ರೈತರ ಸಾವಿರಾರು ಕೋಟಿ ರೂ.ಸಾಲ ಮನ್ನಾ ಮಾಡಿದ್ದೇವೆ. ಚೌಕಿದಾರ್ ಸಾಲ ಮನ್ನಾ ಮಾಡದೇ, ನಮ್ಮ ವಿರುದ್ಧ ಟೀಕೆಗಳನ್ನು ಮಾಡುತ್ತಾರೆ. ರೈತರು ಕಟ್ಟುವ ವಿಮಾ ಹಣವನ್ನು ನರೇಂದ್ರಮೋದಿ ತಮ್ಮ ಸ್ನೇಹಿತರಿಗೆ ನೀಡಿದ್ದಾರೆ ಎಂದು ಅವರು ದೂರಿದರು.

ಸಾಲ ಮನ್ನಾದಿಂದ ರೈತರಿಗೆ ಸ್ವಲ್ಪ ಸಹಾಯವಾಗುತ್ತದೆ. ಆದರೆ, ನಮ್ಮ ಸಂಕಲ್ಪ ಹೊಲಗಳ ಸಮೀಪವೇ ಆಹಾರ ಸಮಸ್ಕರಣಾ ಘಟಕಗಳು ಸ್ಥಾಪನೆಯಾಗಬೇಕು. ಕರ್ನಾಟಕ, ಪಂಜಾಬ್, ರಾಜಸ್ಥಾನ್, ಛತ್ತೀಸ್‌ಗಡ, ಮಧ್ಯಪ್ರದೇಶದಲ್ಲಿ ಈ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.

ನಮಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಇತಿಹಾಸದಲ್ಲೇ ಮೊದಲ ಬಾರಿಗೆ ಜನರ ಬಳಿ ಬಂದು ನ್ಯಾಯ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್‌ಬಿಐ ಅನುಮತಿಯಿಲ್ಲದೇ ನೋಟುಗಳ ರದ್ಧತಿ, ಚುನಾವಣಾ ಆಯೋಗದ ಮೇಲೆ ಪ್ರಭಾವ, ಒಬ್ಬ ವ್ಯಕ್ತಿಯೇ ರಾಜ್ಯ ಆಳಬೇಕು ಎಂಬ ಮನಸ್ಥಿತಿಯನ್ನು ನರೇಂದ್ರಮೋದಿ ಹೊಂದಿದ್ದಾರೆ ಎಂದು ಅವರು ಕಿಡಿಗಾರಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಮ್ಮ ಕಾರ್ಯಕರ್ತರು ಈ ಬಾರಿ ದೃಢವಾದ ಸಂಕಲ್ಪ ಮಾಡಿ, ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರದ ಆಡಳಿತವನ್ನು ಕೊನೆಗಾಣಿಸಬೇಕು. ಮೋದಿ ಮಾತನಾಡುವುದು, ಭಾಷಣ ಮಾಡುವುದು, ಮನ್ ಕೀ ಬಾತ್ ಹೇಳುವುದು ಬಿಟ್ಟರೆ, ಐದು ವರ್ಷಗಳಲ್ಲಿ ಬಾಯಿ ಬಡಾಯಿ, ಸಾಧನೆ ಶೂನ್ಯ ಎಂದು ಟೀಕಿಸಿದರು.

ಕಲಬುರಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಆಶೀರ್ವಾದ ಮಾಡಿ. ಮಲ್ಲಿಕಾರ್ಜುನ ಖರ್ಗೆ ಸೋಲಿಲ್ಲದ ಸರದಾರ, ಅಭಿವೃದ್ಧಿ ಚಿಂತಕ. ಅವರನ್ನು ಲೋಕಸಭೆಗೆ ಕಳುಹಿಸಿಕೊಡಿ. 9 ಬಾರಿ ವಿಧಾನಸಭೆ, ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿ, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿ, ನರೇಂದ್ರಮೋದಿಗೆ ಸಿಂಹ ಸ್ವಪ್ನವಾಗಿದ್ದಾರೆ. ಅದಕ್ಕಾಗಿ ಮೋದಿಗೆ ಖರ್ಗೆ ಮೇಲೆ ಕೆಂಗಣ್ಣು ಎಂದು ಅವರು ಹೇಳಿದರು.

ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಇತ್ತೀಚೆಗೆ ಕಲಬುರಗಿಗೆ ಬಂದಿದ್ದ ನರೇಂದ್ರಮೋದಿ ತಮ್ಮ 40 ನಿಮಿಷಗಳ ಭಾಷಣದಲ್ಲಿ ಕಲಬುರಗಿ ಜನತೆಗೆ ಏನು ಕೊಟ್ಟಿದ್ದೇನೆ, ಏನು ಕೊಡುತ್ತೇನೆ ಎಂದು ಒಂದು ಶಬ್ಧವನ್ನು ಹೇಳಲಿಲ್ಲ. ಈ ಭಾಗದ ಜನರ ಬಗ್ಗೆ ಅವರಿಗೆ ಕಾಳಜಿಯಿಲ್ಲ ಎಂದರು. ಬಿಜೆಪಿ ಹಾಗೂ ಮೋದಿಗೆ ಇಲ್ಲಿನ ಜನತೆಯ ಮತ ಕೇಳುವ ನೈತಿಕತೆಯಿಲ್ಲ. ಐದು ವರ್ಷಗಳಲ್ಲಿ ಏನು ಕೆಲಸ ಮಾಡಿದ್ದೀರಾ? ಅದರ ಲೆಕ್ಕ ಕೊಟ್ಟು ಮುಂದೆ ಹೋಗಿ, ಚುನಾವಣೆ ಪ್ರಣಾಳಿಕೆಯಲ್ಲಿ ಏನು ಹೇಳಿದ್ದೀರಾ, ಅದನ್ನು ಎಷ್ಟು ಅನುಷ್ಟಾನ ಮಾಡಿದ್ದೀರಾ ಹೇಳಿ ಎಂದು ಮೋದಿಗೆ ಖರ್ಗೆ ಪ್ರಶ್ನಿಸಿದರು.

ನನ್ನ ವಿರುದ್ಧ ದಿಲ್ಲಿಯಿಂದ ಗಲ್ಲಿಯವರೆಗೆ ಸಂಚು ಮಾಡುತ್ತಿದ್ದಾರೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಇರುವವರೆಗೆ ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಎಷ್ಟು ಜನ ಮೋದಿಗಳು ಬಂದು ಇಲ್ಲಿ ಭಾಷಣ ಮಾಡಿದರೂ, ಜನ ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್, ಸಚಿವ ರಹೀಮ್‌ ಖಾನ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಡಾ.ಆಜಯ್‌ ಸಿಂಗ್, ಶಾಸಕಿ ಕನಿಝ್ ಫಾತಿಮಾ, ಸಂಸದರಾದ ಕೆ.ಎಚ್.ಮುನಿಯಪ್ಪ, ವಿ.ಎಸ್.ಉಗ್ರಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಂವಿಧಾನವನ್ನು ಬದಲಾವಣೆ ಮಾಡಬೇಕೆಂಬುದು ಇವರ ಲಕ್ಷವಾಗಿದೆ. ನೋಟುಗಳನ್ನು ಬದಲಾವಣೆ ಮಾಡಿದಂತೆ ದೇಶದ ಸಂವಿಧಾನ ಬದಲಾವಣೆ ಮಾಡಲು ಬಯಸಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ, ಆರೆಸೆಸ್ಸ್‌ನವರಿಗೆ ಸಂವಿಧಾನ ಮುಟ್ಟಲು ಕಾಂಗ್ರೆಸ್ ಬಿಡುವುದಿಲ್ಲ.

-ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ

ಪಾರಿಕ್ಕರ್‌ಗೆ ಶ್ರದ್ಧಾಂಜಲಿ

ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್‌ಗೆ ಕಾಂಗ್ರೆಸ್ ಸಮಾವೇಶದಲ್ಲಿ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News