ಹಾಲಿನ ಪ್ಯಾಕೆಟ್ ಮೇಲೆ ಮತದಾನ ಜಾಗೃತಿ ಸಂದೇಶ

Update: 2019-03-18 17:06 GMT

ಬೆಂಗಳೂರು, ಮಾ.18: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಹಾಲು ಮಹಾ ಮಂಡಳಿ(ಕೆಎಂಎಫ್) ವತಿಯಿಂದ ವಿತರಣೆ ಮಾಡುವ ಹಾಲು ಮತ್ತು ಮೊಸರಿನ ಪ್ಯಾಕೆಟ್ ಮೇಲೆ ಮತದಾನ ಮಾಡುವಂತೆ ಜಾಗೃತಿ ಸಂದೇಶಗಳನ್ನು ಮುದ್ರಿಸಲಾಗುತ್ತಿದೆ.

ಎಪ್ರಿಲ್ 18 ಚುನಾವಣೆ ನಿಗದಿಯಾಗಿರುವ ದಕ್ಷಿಣ ಕರ್ನಾಟಕದ 14 ಜಿಲ್ಲೆಗಳು ಹಾಗೂ 23 ರಂದು ನಡೆಯಲಿರುವ ಉಳಿದ ಜಿಲ್ಲೆಗಳಲ್ಲೂ ಹಾಲಿನ ಉತ್ಪನ್ನಗಳನ್ನು ಪೂರೈಕೆ ಮಾಡಲಾಗುತ್ತದೆ. ಕೆಎಂಎಫ್ 38 ಲಕ್ಷ ಲೀಟರ್ ಹಾಲನ್ನು ಪ್ಲಾಸ್ಟಿಕ್ ಪ್ಯಾಕೆಟ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಬಹುತೇಕ ಗ್ರಾಮಾಂತರ ಸೇರಿದಂತೆ ನಗರ ಪ್ರದೇಶ ಅಧಿಕ ಪ್ಯಾಕೆಟ್ ಹಾಲು ಹಾಗೂ ಮೊಸರು ಖರೀದಿ ಮಾಡುತ್ತಾರೆ. ಅವರಿಗೆ ಈ ಸಂದೇಶ ತಲುಪಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2014 ರ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಕೆಎಂಎಫ್ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪ್ರಜಾಪ್ರಭುತ್ವ ಹಬ್ಬದಲ್ಲಿ ಜನರು ಪಾಲ್ಗೊಳ್ಳುವಂತೆ ಅರಿವು ಮೂಡಿಸಿ ಮೆಚ್ಚುಗೆಯನ್ನು ಪಡೆದಿತ್ತು.

ಕೆಎಸ್ಸಾರ್ಟಿಸಿ ಬಸ್ ಟಿಕೆಟ್‌ಗಳ ಮೇಲೆ ಮತದಾನದ ಬಗ್ಗೆ ಈಗಾಗಲೇ ಜಾಗೃತಿ ಸಂದೇಶ ರವಾನಿಸಲಾಗುತ್ತಿದ್ದು, ಮತದಾರ ಪಟ್ಟಿಯಲ್ಲಿ ಹೆಸರು ನೋಂದಣಿ ಬಗ್ಗೆಯೂ ಪ್ರಯಾಣಿಕರಿಗೆ ನೆನಪು ಮಾಡಿಕೊಡಲಾಗುತ್ತಿದೆ. 8700 ಕೆಎಸ್ಸಾರ್ಟಿಸಿ ಕಾರ್ಯಾಚರಿಸುತ್ತಿದ್ದು, 29 ಲಕ್ಷ ಜನರು ಈ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ.

ಅಲ್ಲದೆ, ಎಲ್ಲ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿನ ಎಲ್‌ಇಡಿ ಪರದೆ ಮೇಲೆಯೂ ಈ ಸಂದೇಶ ಬಿತ್ತರಿಸುತ್ತಿದ್ದಾರೆ. ಅಲ್ಲದೆ, ಮೆಟ್ರೋ ನಿಲ್ದಾಣಗಳು ಹಾಗೂ ರೈಲು ನಿಲ್ದಾಣಗಳಲ್ಲಿಯೂ ಇದೇ ರೀತಿ ಜಾಗೃತಿ ಮೂಡಿಸುವ ಸಂದೇಶ ಪ್ರಕಟಿಸಲು ಚಿಂತನೆ ನಡೆಸಲಾಗುತ್ತಿದೆ. ಒಟ್ಟಾರೆಯಾಗಿ ಸಾರ್ವಜನಿಕ ಜಾಗೃತಿ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಲು ಶ್ರಮಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News