ಕಾಫಿ ತೋಟಗಳಿಗೆ ನದಿಗಳಿಂದ ನೀರು ಅಕ್ರಮ ಪೂರೈಕೆ ಆರೋಪ: ವಿವಿಧೆಡೆ ದಾಳಿ, ಪಂಪ್‌ಸೆಟ್‌ಗಳ ವಶ

Update: 2019-03-18 17:42 GMT

ಚಿಕ್ಕಮಗಳೂರು, ಮಾ.18: ನದಿಗಳ ತೀರದಲ್ಲಿ ಅಕ್ರಮವಾಗಿ ಪಂಪ್ ಸೆಟ್‌ಗಳನ್ನು ಅಳವಡಿಸಿ ಕಾಫಿತೋಟಗಳಿಗೆ ನೀರು ಹಾಯಿಸುತ್ತಿದ್ದ ಬಗ್ಗೆ ಸೋಮವಾರ ವಾರ್ತಾಭಾರತಿಯಲ್ಲಿ ‘ಕುಡಿಯುವ ನೀರಿಗೆ ಹಾಹಾಕಾರ: ಕ್ರಮಕ್ಕೆ ಒತ್ತಾಯ’ ಎಂಬ ಶಿರ್ಷಿಕೆಯಡಿ ವರದಿ ಪ್ರಕಟಿಸಿದ್ದರಿಂದ ಎಚ್ಚೆತ್ತ ತಾಲೂಕು ಆಡಳಿತ ವಿವಿಧೆಡೆ ದಾಳಿ ನಡೆಸಿ, ಪಂಪ್‌ಸೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. 

ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಹೇಮಾವತಿ ಹಾಗೂ ಜಪಾವತಿ ನದಿಗಳಿಗೆ ಕೆಲ ಪ್ರಭಾವಿಗಳು ಹಾಗೂ ರಾಜಕಾರಣಿಗಳು ಅಕ್ರಮವಾಗಿ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡು ಕಾಫಿತೋಟಗಳಿಗೆ ನೀರು ಹಾಯಿಸುತ್ತಿದ್ದರು. ಇದರಿಂದ ನದಿಗಳಲ್ಲಿ ನೀರು ಬತ್ತಿ ಹೋಗಿ ಕೆಲ ಗ್ರಾಮಗಳಿಗೆ ಕುಡಿಯಲೂ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಹಾಗೂ ನದಿ ತೀರದ ಕಾಡಿನಲ್ಲಿ ವನ್ಯಜೀವಿಗಳಿಗೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ವಾರ್ತಾಭಾರತಿ ಸೋಮವಾರ ವಿಸ್ತಾರವಾದ ವರದಿಯನ್ನು ಪ್ರಕಟಿಸಿತ್ತು.

ವರದಿ ಪ್ರಕಟವಾದ ಬೆನ್ನಲ್ಲೆ ಮೂಡಿಗೆರೆ ತಹಶೀಲ್ದಾರ್ ಪದ್ಮನಾಭ ಶಾಸ್ತ್ರಿ ಹಾಗೂ ಸಿಬ್ಬಂದಿ ಸೋಮವಾರ ಮಧ್ಯಾಹ್ನ ತಾಲೂಕಿನ ಕಿರುಗುಂದ, ಹುರುಡಿ, ಶೀಗೇಹಳ್ಳಿ, ಚಕ್ಕುಡಿಗೆ ಗ್ರಾಮಗಳಿಗೆ ದಾಳಿ ನಡೆಸಿ ನದಿ ತೀರದಲ್ಲಿ ಅಕ್ರಮವಾಗಿ ಪಂಪ್‌ಸೆಟ್ ಅಳವಡಿಸಿ ಕಾಫಿ ತೋಟಗಳಿಗೆ ನೀರು ಹಾಯಿಸುತ್ತಿದ್ದವರ ಕೆಲ ಪಂಪ್‌ಸೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಹುರುಡಿ ನೀಲಕಂಠ ಎಂಬವರು ಅಕ್ರಮವಾಗಿ ಅಳವಡಿಸಿದ್ದ ಮೋಟರ್‌ಪಂಪ್‌ಅನ್ನು ತಹಶೀಲ್ದಾರ್ ವಶ ಪಡಿಸಿಕೊಂಡು, ಪ್ರಕರಣ ದಾಖಲಿಸಲು ಕಿರುಗುಂದ ಗ್ರಾಪಂ ಕಾರ್ಯದರ್ಶಿಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.

ಇನ್ನು ತಾಲೂಕಿನ ಚಕ್ಕುಡಿಗೆ ಎಂಬಲ್ಲಿ ಮೂವರು ಪ್ರಭಾವಿ ರಾಜಕಾರಣಿಗಳೂ ಸೇರಿದಂತೆ ಮತ್ತಿಬ್ಬರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ತಹಶೀಲ್ದಾರ್ ನೇತೃತ್ವದ ತಂಡ ಕಡಿತಗೊಳಿಸಿ ಎಚ್ಚರಿಕೆ ನೀಡಿದ್ದಾರೆಂದು ತಿಳಿದು ಬಂದಿದ್ದು, ತಾಲೂಕಿನ ಶೀಗೇಹಳ್ಳಿ ಎಸ್ಟೇಟ್‌ನ ಡೀಸೆಲ್ ಪಂಪ್‌ಸೆಟ್ ಅನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News