ನ್ಯೂಝಿಲ್ಯಾಂಡ್‌ನ ಮಸೀದಿಯಲ್ಲಿ ದಾಳಿ: ಅಮೆರಿಕ ಮಿತ್ರ ರಾಷ್ಟ್ರಗಳ ಫ್ಯಾಶಿಸ್ಟ್ ನೀತಿಗಳ ಪರಿಣಾಮ

Update: 2019-03-19 09:52 GMT

ಭಯೋತ್ಪಾದನೆ ವಿರುದ್ಧ ಸಮರ ಎಂದು ಬೊಬ್ಬಿರಿದು ಅಫ್ಘಾನಿಸ್ಥಾನ ಸೇರಿದಂತೆ ಮಧ್ಯ ಪ್ರಾಚ್ಯದ ಹಲವು ರಾಷ್ಟ್ರಗಳ ಮೇಲೆ ಯುದ್ಧಗಳನ್ನು ಮಾಡಿದ ಅಮೆರಿಕ ನೇತೃತ್ವದ ರಾಷ್ಟ್ರಗಳು ನ್ಯೂಝಿಲ್ಯಾಂಡ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸಿದ್ದನ್ನು ಹಾಗೆಂದು ಕರೆಯದೆ ಒಬ್ಬ ವ್ಯಕ್ತಿ ಮಾಡಿದ ಕಗ್ಗೊಲೆಯೆಂದು ಮಾತ್ರ ಗುರುತಿಸುತ್ತಿರುವುದು ಮಾಧ್ಯಮಗಳ ಇಬ್ಬಗೆ ನೀತಿಗಳನ್ನು ಮತ್ತೊಮ್ಮೆ ತೆರೆದಿಡುತ್ತದೆ. ಕೇವಲ ಕೃತ್ಯದ ಬಗ್ಗೆ ಖಂಡನೆಗಳನ್ನು ಮಾಡುತ್ತಾ ಸಂತಾಪ ಸೂಚಿಸುತ್ತಾ ಜಾಗತಿಕ ಅಪಾಯವಾಗಿ ಬೆಳೆಯುತ್ತಿರುವ ಫ್ಯಾಶಿಸ್ಟ್ ಬಿಳಿಜನಾಂಗೀಯವಾದದ ಏರುಗತಿಯ ಬೆಳವಣಿಗೆಯನ್ನು ಮರೆಮಾಚಿ ಇಡಲು ಇವು ಶ್ರಮಿಸುತ್ತಿವೆ.


ನ್ಯೂಝಿಲ್ಯಾಂಡ್‌ನ ಕ್ರೈಸ್ಟ್ ಚರ್ಚ್ ಎಂಬ ನಗರದ ಎರಡು ಮಸೀದಿಗಳಲ್ಲಿ ದಿನಾಂಕ 15/03/2019ರ ಶುಕ್ರವಾರದಂದು ಪ್ರಾರ್ಥನೆಯಲ್ಲಿದ್ದ ಮುಸ್ಲಿಂ ಸಮುದಾಯದವರ ಮೇಲೆ ಗುಂಡಿನ ಮಳೆಗೆರೆದು 50 ಜನರನ್ನು ಕಗ್ಗೊಲೆ ಮಾಡಿದ ಧಾರುಣ ಘಟನೆ ನಡೆಯಿತು. ನ್ಯೂಝಿಲ್ಯಾಂಡ್‌ನ ಅಲ್ ನೂರ್ ಮತ್ತು ಲಿನ್ ವುಡ್ ಮಸೀದಿಗಳು ಈ ದಾಳಿಗೆ ಒಳಗಾದವು. ಇದಲ್ಲದೆ 34ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡವರಿದ್ದಾರೆ. ಇದರ ಸೂತ್ರದಾರ 28 ವರ್ಷದ ಆಸ್ಟ್ರೇಲಿಯಾದ ಪೌರನೆಂದು ಹೇಳಲಾಗಿದೆ. ಈತ ಬಿಳಿ ಜನಾಂಗೀಯ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಫ್ಯಾಶಿಸ್ಟ್ ಗುಂಪಿಗೆ ಸೇರಿದವನು ಎಂಬ ವರದಿಯಿದೆ. ಅಲ್ಲದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಬಿಳಿಯರ ಅಸ್ಮಿತೆಯ ನಾಯಕನನ್ನಾಗಿ ಬಿಂಬಿಸಿ ಈತನ ಬಳಿಯಿದ್ದ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಈತನ ಬಳಿ ದೊರೆತ ಕರಪತ್ರದಲ್ಲಿ ವಲಸೆ ಬಂದಿರುವವರ ಬಗ್ಗೆ, ಬಿಳಿಯರೇತರ ಸಮುದಾಯಗಳ ಬಗ್ಗೆ ದ್ವೇಷದ ಹಾಗೂ ಸೇಡಿನ ಮಾತುಗಳಿವೆ. ಬಿಳಿಯರಿಗೆ ಇಂದು ಒದಗಿರುವ ಸಮಸ್ಯೆಗಳಿಗೆ ಬಿಳಿಯೇತರರೇ ಕಾರಣ, ಇವರಿಂದಾಗಿಯೇ ಬಿಳಿಯರ ಸಂಸ್ಕೃತಿ ಕೂಡ ನಶಿಸುತ್ತಿದೆ ಎಂದೆಲ್ಲಾ ಹೇಳಲಾಗಿದೆ. ಈತ ಗುರಿ ಮಾಡಿ ಕೊಂದಿದ್ದು ಮುಸ್ಲಿಮರನ್ನು. ಅವರೆಲ್ಲರೂ ಬಹುತೇಕವಾಗಿ ವಿದೇಶಿ ಮೂಲದವರೇ ಆಗಿದ್ದಾರೆ.

ಅಫ್ಘಾನಿಸ್ತಾನ , ಪಾಕಿಸ್ತಾನ, ಈಜಿಪ್ಟ್, ಬಾಂಗ್ಲಾ ದೇಶ, ಆಸ್ಟ್ರೇಲಿಯಾಕ್ಕೆ ಸೇರಿದವರೇ ಹೆಚ್ಚಿನವರು. ಭಾರತಕ್ಕೆ ಸೇರಿದ 5 ಜನರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮೇಲ್ನೋಟಕ್ಕೆ ಇದೊಂದು ಬಿಳಿಯ ಜನಾಂಗೀಯವಾದಿ ಫ್ಯಾಶಿಸ್ಟ್ ಭಯೋತ್ಪಾದಕ ಗುಂಪಿನ ದಾಳಿಯಾಗಿ ಕಾಣುತ್ತಿದ್ದರೂ ಆ ರೀತಿಯಾಗಿ ಗುರುತಿಸಲು ಅಮೆರಿಕ ಸೇರಿದಂತೆ ಜಾಗತಿಕವಾಗಿ ಬಹುತೇಕ ಸರಕಾರಗಳು ಹಾಗೂ ನೇತಾರರು ತಯಾರಿಲ್ಲ. ಇದರ ಕರಾಳತೆ ಹಾಗೂ ಅಪಾಯ ಬಹಳ ಗಂಭೀರವಾಗಿದ್ದರೂ ಅಂತರ್‌ರಾಷ್ಟ್ರೀಯ ಮಾಧ್ಯಮಗಳೂ ಸೇರಿದಂತೆ ಭಾರತದ ಮಾಧ್ಯಮಗಳು ಆ ಮಟ್ಟದಲ್ಲಿ ನೋಡದೇ ಹೋದವು. ಅಮೆರಿಕ, ಯುನೈಟೆಡ್ ಕಿಂಗ್ ಡಂ, ಫ್ರಾನ್ಸ್, ಜರ್ಮನಿ, ರಶ್ಯಾ, ಚೀನಾ ಸೇರಿದಂತೆ ಹಲವು ಜಾಗತಿಕ ನಾಯಕರೆನಿಸಿಕೊಂಡವರು ಬಿಳಿ ಜನಾಂಗೀಯ ಫ್ಯಾಶಿಸ್ಟ್ ದಾಳಿಯನ್ನು ಸ್ಪಷ್ಟವಾಗಿ ಗುರುತಿಸಿ ಕಟುವಾದ ನಿಲುವು ತಳೆದು ಖಂಡಿಸದೆ ಹೋದರು. ನಾಮ ಮಾತ್ರದ ಸಂತಾಪಗಳನ್ನು ಕೆಲವರು ಮಾಡಿದರು. ಭಾರತದ ಪ್ರತಿಕ್ರಿಯೆ ಕೂಡ ತಣ್ಣಗಿತ್ತು. ಅಮೆರಿಕದ ಡೊನಾಲ್ಡ್ ಟ್ರಂಪ್ ಟ್ವಟರ್ ಮೂಲಕ ಸಂತಾಪ ಸೂಚಿಸಿದ್ದು ಬಿಟ್ಟರೆ ಖಂಡನೆಯನ್ನೂ ಕೂಡ ಮಾಡಲಿಲ್ಲ. ಅಲ್ಲದೆ ಬಿಳಿ ರಾಷ್ಟ್ರೀಯತೆಯ ಏರುಗತಿ ಬೆಳವಣಿಗೆಯ ಬಗೆಗಿನ ಚರ್ಚೆಯನ್ನು ಅವರು ನಿರಾಕರಿಸಿದರು.

 ಆದರೆ ಅಮೆರಿಕದಲ್ಲೇ 3,000ಕ್ಕೂ ಹೆಚ್ಚು ಇಂತಹ ಬಿಳಿಯ ಜನಾಂಗೀಯವಾದಿ ಫ್ಯಾಶಿಸ್ಟ್ ಗುಂಪುಗಳಿವೆ ಮತ್ತು ಇವುಗಳ ಸಂಖ್ಯೆ ಮತ್ತೂ ಹೆಚ್ಚುತ್ತಾ ಹೋಗುತ್ತಿವೆ ಎಂಬ ವರದಿ ಕೂಡ ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಬಂದಿತ್ತು. ಆರ್ಥಿಕ ಬಿಕ್ಕಟ್ಟು ಶುರುವಾದಾಗಿನಿಂದ ನವನಾಝಿ ಗುಂಪುಗಳ ಬೆಳವಣಿಗೆಗಳು ಅಮೆರಿಕ ಯೂರೋಪುಗಳಲ್ಲಿ ತೀವ್ರ ತರದ ಹೆಚ್ಚಳ ಕಾಣುತ್ತಾ ಬರುತ್ತಿವೆ. ಅಮೆರಿಕದ ಕ್ಲು ಕ್ಲಕ್ಸ್ ಕ್ಲಾನ್‌ಎಂಬ ನವನಾಝಿ ಗುಂಪಿನ ಚಟುವಟಿಕೆಗಳ ಹೆಚ್ಚಳ ಶುರುವಾಗಿ ಹಲವು ದಶಕಗಳಾಗಿವೆ.

ನ್ಯೂಝಿಲ್ಯಾಂಡ್‌ನಲ್ಲಿರುವ ಅಮೆರಿಕದ ರಾಯಭಾರಿ ಸ್ಕಾಟ್ ಬ್ರೊವ್ನ್ ಮಾತ್ರ ಬಿಳಿ ಮೇಲರಿಮೆ ಮತ್ತು ಕಗ್ಗೊಲೆಯ ಬಗ್ಗೆ ಖಂಡನಾ ಹೇಳಿಕೆ ನೀಡಿದರು. ಅವರು ತಮ್ಮ ಹೇಳಿಕೆಯಲ್ಲಿ ಮುಸ್ಲಿಮರ ಬಗ್ಗೆ ಬೇರೆಯವರಿಗೆ ಹೆದರಿಕೆ ಹುಟ್ಟಿಸುವ ಅಂದರೆ ಇಸ್ಲಾಮೋಫೋಬಿಯಾ ಬಗ್ಗೆಯೂ ಪ್ರಸ್ತಾಪಿಸಿದರು. ಆದರೆ ಈ ಕರಾಳ ಘಟನೆಯ ಬಗ್ಗೆ ಮಾಡುತ್ತಿರುವ ಪಕ್ಷಪಾತಿ ನೀತಿ ಮಾತ್ರ ಎದ್ದು ಕಾಣುತ್ತಿರುವ ವಿಚಾರ. ಪಾಶ್ಚಿಮಾತ್ಯ ಮಾಧ್ಯಮಗಳು ಮಾರಣಹೋಮ ಮಾಡಿದ ಕೊಲೆಗಡುಕನಿಗೆ ಮಾನವೀಯ ಸ್ಪರ್ಶ ನೀಡುವ ಮೂಲಕ ಆತನ ಮೇಲೆ ಅನುಕಂಪಪೂರಿತ ವರದಿಗಳನ್ನು ಮಾಡಿವೆ. ಈ ಮಾಧ್ಯಮಗಳ ಈ ನೀತಿ ಸಾಮಾಜಿಕ ಜಾಲ ತಾಣಗಳಲ್ಲಿ ಹಲವರ ಖಂಡನೆಗೆ ಒಳಗಾಗಿವೆ. ಈ ಮಾಧ್ಯಮಗಳು ಬಿಳಿ ಜನಾಂಗೀಯವಾದಿ ಫ್ಯಾಶಿಸ್ಟ್ ಗುಂಪುಗಳನ್ನು ಹಾಗೆಂದು ಗುರುತಿಸಲು ಕೂಡ ಸಿದ್ಧವಿಲ್ಲದ ಸ್ಥಿತಿಯಲ್ಲಿರುವುದು ಸ್ಪಷ್ಟವಾಗಿಯೇ ಕಾಣುತ್ತಿದೆ. ಆದರೆ ಮುಸ್ಲಿಮರ ವಿಚಾರದಲ್ಲಿ ಮಾತ್ರ ‘ಭಯೋತ್ಪಾದನೆಗೆ ಮತ್ತೊಂದು ಹೆಸರು’ ಎನ್ನುವಷ್ಟರ ಮಟ್ಟಿಗೆ ಈ ಮಾಧ್ಯಮಗಳು ಬರೆದು ಪ್ರಚಾರ ಮಾಡುತ್ತವೆ. ಪಾಶ್ಚಿಮಾತ್ಯ ಸರಕಾರಗಳ ನೀತಿ ಕೂಡ ಇದೇ ಆಗಿದೆ.

ಭಯೋತ್ಪಾದನೆ ವಿರುದ್ಧ ಸಮರ ಎಂದು ಬೊಬ್ಬಿರಿದು ಅಫ್ಘಾನಿಸ್ಥಾನ ಸೇರಿದಂತೆ ಮಧ್ಯ ಪ್ರಾಚ್ಯದ ಹಲವು ರಾಷ್ಟ್ರಗಳ ಮೇಲೆ ಯುದ್ಧಗಳನ್ನು ಮಾಡಿದ ಅಮೆರಿಕ ನೇತೃತ್ವದ ರಾಷ್ಟ್ರಗಳು ನ್ಯೂಝಿಲ್ಯಾಂಡ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸಿದ್ದನ್ನು ಹಾಗೆಂದು ಕರೆಯದೆ ಒಬ್ಬ ವ್ಯಕ್ತಿ ಮಾಡಿದ ಕಗ್ಗೊಲೆಯೆಂದು ಮಾತ್ರ ಗುರುತಿಸುತ್ತಿರುವುದು ಮಾಧ್ಯಮಗಳ ಇಬ್ಬಗೆ ನೀತಿಗಳನ್ನು ಮತ್ತೊಮ್ಮೆ ತೆರೆದಿಡುತ್ತದೆ. ಕೇವಲ ಕೃತ್ಯದ ಬಗ್ಗೆ ಖಂಡನೆಗಳನ್ನು ಮಾಡುತ್ತಾ ಸಂತಾಪ ಸೂಚಿಸುತ್ತಾ ಜಾಗತಿಕ ಅಪಾಯವಾಗಿ ಬೆಳೆಯುತ್ತಿರುವ ಫ್ಯಾಶಿಸ್ಟ್ ಬಿಳಿಜನಾಂಗೀಯವಾದದ ಏರುಗತಿಯ ಬೆಳವಣಿಗೆಯನ್ನು ಮರೆಮಾಚಿ ಇಡಲು ಇವು ಶ್ರಮಿಸುತ್ತಿವೆೆ. ವಾಸ್ತವದಲ್ಲಿ ಅಮೆರಿಕ ಮೊದಲಿನಿಂದಲೂ ಮಾಡುತ್ತಾ ಬಂದಿದ್ದು ಜಾಗತಿಕ ಭಯೋತ್ಪಾದನೆಯೇ ವಿನಃ ಬೇರೇನಲ್ಲ. ಆದರೆ ಅದನ್ನು ಹಾಗೆಂದು ಗುರುತಿಸಲು ಮೊದಲಿನಿಂದಲೂ ಈ ಬಹುತೇಕ ಜಾಗತಿಕ ಮಾಧ್ಯಮಗಳು ತಯಾರಿರಲಿಲ್ಲ. ‘ಇಸ್ಲಾಮಿಕ್ ಭಯೋತ್ಪಾದನೆ’ ಎಂದು ಗುರುತಿಸಲು ತೋರುವ ಅತೀವ ಉತ್ಸಾಹ ಬಲವಾದಿ ಹಾಗೂ ಬಿಳಿ ಜನಾಂಗೀಯವಾದಿ ಭಯೋತ್ಪಾದನೆಯನ್ನು ಗುರುತಿಸಲು ತೋರದಿರುವುದು ಎದ್ದು ಕಾಣುವ ವಿಚಾರ.

ವಾಸ್ತವದಲ್ಲಿ ಇಂತಹ ಫ್ಯಾಶಿಸ್ಟ್ ಗುಂಪುಗಳನ್ನು ಈ ಎಲ್ಲ ಸರಕಾರಗಳು ಮತ್ತವುಗಳ ಗೂಢಚಾರ ಸಂಸ್ಥೆಗಳು ನೇರ ಹಾಗೂ ಪರೋಕ್ಷವಾಗಿ ಎಲ್ಲ ರೀತಿಯ ನೆರವು ನೀಡಿ ಬೆಳೆಸುತ್ತಿವೆ. ಅಮೆರಿಕದ ಸಿಐಎ, ಇಸ್ರೇಲಿನ ಮೊಸ್ಸಾದ್ ಸೇರಿದಂತೆ ಹಲವು ಇಂತಹ ಸಂಸ್ಥೆಗಳು ಇಂದು ಬಹಳ ವ್ಯಾಪಕವಾಗಿ ಫ್ಯಾಶಿಸ್ಟ್ ಗುಂಪುಗಳನ್ನು ಪ್ರಾಯೋಜನೆ ಮಾಡುವುದರಲ್ಲಿ ಮುಂಚೂಣಿಯಲ್ಲಿವೆ. ಜಾಗತಿಕವಾಗಿ ಮುಸ್ಲಿಂ ದ್ವೇಷವನ್ನು ಹರಡಿ ಇಸ್ಲಾಮ್‌ನ ಬಗ್ಗೆ ಕಲ್ಪಿತ ಭಯವನ್ನು (ಇಸ್ಲಾಮೋಫೋಬಿಯಾವನ್ನು) ಬೆಳೆಸಿ ಇತರ ಜನಸಾಮಾನ್ಯರು ಮುಸ್ಲಿಮರ ಬಗ್ಗೆ ಭಯಗೊಳ್ಳುವಂತೆ, ದ್ವೇಷಿಸುವಂತೆ ಮಾಡುವುದರಲ್ಲಿ ಒಂದು ಮಟ್ಟದ ಯಶಸ್ಸನ್ನು ಅವರು ಸಾಧಿಸಿದ್ದಾರೆ. ಅಲ್ಲದೆ ಇದನ್ನು ಸಾಧಿಸಲು ಹಲವು ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳನ್ನೂ ಇವುಗಳು ಪ್ರಾಯೋಜಿಸಿ ಪೋಷಿಸುತ್ತಿರುವುದು ಕೂಡ ಸುಳ್ಳಲ್ಲ.

ನ್ಯೂಝಿಲ್ಯಾಂಡ್‌ನ ಘಟನೆ ಇವೆಲ್ಲದರ ಪರಿಣಾಮಗಳಲ್ಲಿ ಒಂದನ್ನಾಗಿಯೇ ನಾವು ಗ್ರಹಿಸಬೇಕಾಗುತ್ತದೆ. ಭಾರತವೂ ಇದಕ್ಕೆ ಹೊರತಾಗಿಲ್ಲ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ ತಾನೆ. ಇಲ್ಲಿ ನಡೆಯುತ್ತಾ ಬಂದ ಮುಸ್ಲಿಮರ ಮಾರಣಹೋಮಗಳು, ಕೋಮು ಗಲಭೆಗಳು, ಗೋವಿನ ರಾಜಕೀಯಗಳು, ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಹಿಂದೂವಾದವನ್ನು ಆಕ್ರಮಣಕಾರಿಯಾಗಿ ಹರಡುತ್ತಿರುವ ಸಂಘಟನೆಗಳ ಬೆಳವಣಿಗೆಗಳು ಅವುಗಳಿಗೆ ದೊಡ್ಡ ಕಾರ್ಪೊರೇಟುಗಳು ಹಾಗೂ ಸರಕಾರದ ಬೆಂಬಲಗಳು ಹೀಗೆ ಸಾಕಷ್ಟಿವೆಯಲ್ಲವೆ. ಭಾರತದಲ್ಲೂ ಇಂತಹ ಫ್ಯಾಶಿಸ್ಟ್ ಗುಂಪುಗಳು ಕಗ್ಗೊಲೆಗಳನ್ನು ಮಾಡುವುದು ಸೇರಿದಂತೆ ಹತ್ತು ಹಲವು ವಿಧ್ವಂಸಕ ಕೃತ್ಯಗಳನ್ನು ಮಾಡುತ್ತಿರುವುದು ಕೂಡ ಅನುಭವದ ವಿಚಾರ ತಾನೆ. ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್‌ರಂತಹ ವಾಸ್ತವವಾದಿ ವೈಚಾರಿಕರ ಕಗ್ಗೊಲೆಗಳು ಹಾಗೆಯೇ ನಡೆದಿರುವುದು.

ಮೊದಲೆಲ್ಲಾ ಗೂಂಡಾಗಳನ್ನು ಬಳಸುತ್ತಾ ಅಧಿಕಾರ ಸೂತ್ರ ತಮ್ಮ ಕೈಗೆ ತೆಗೆದುಕೊಳ್ಳಲು ಶ್ರಮಿಸುತ್ತಿದ್ದ ರಾಜಕೀಯ ಪಕ್ಷಗಳು ಹಾಗೂ ಆಳುವ ಶಕ್ತಿಗಳು ಇಂದು ಧರ್ಮ, ಜನಾಂಗ ಮೊದಲಾದ ಹೆಸರುಗಳಲ್ಲಿ ಕಾರ್ಯಾಚರಿಸುವ ಇಂತಹ ಫ್ಯಾಶಿಸ್ಟ್ ಗುಂಪುಗಳನ್ನು ತಮ್ಮ ಪರವಾಗಿ ಸಿದ್ಧಗೊಳಿಸಿ ಮತಬೇಟೆಗೆ ಇಳಿಯುತ್ತಿವೆ.

ಮೊದಲನೇ ಹಾಗೂ ಎರಡನೇ ಮಹಾಯುದ್ಧ ಕಾಲದಲ್ಲೂ ಇಂತಹ ಫ್ಯಾಶಿಸ್ಟ್ ಗುಂಪುಗಳು ದೊಡ್ಡ ಮಟ್ಟದಲ್ಲಿ ಕಾರ್ಯಾಚರಿಸಿರುವ ಉದಾಹರಣೆಗಳು ನಮಗೆ ದೊರಕುತ್ತವೆ. ಆ ಎರಡೂ ಜಾಗತಿಕ ಮಹಾ ಯುದ್ಧಗಳಿಗೂ ಬಂಡವಾಳಶಾಹಿ ವ್ಯವಸ್ಥೆಯ ವಾರಸುದಾರರ ಮಿತಿ ಮೀರಿದ ಸಂಪತ್ತಿನ ದುರಾಶೆ ಹಾಗೂ ಎಗ್ಗಿಲ್ಲದೆ ನಡೆಸಿದ ಪೈಪೋಟಿಗಳೇ ಪ್ರಧಾನ ಕಾರಣಗಳಾಗಿದ್ದವು. ಇಂದಿನ ಜಗತ್ತನ್ನು ಹಿಂದೆಂದಿಗಿಂತಲೂ ತೀವ್ರವಾಗಿರುವ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿಸಲಾಗಿದೆ. ಇದಕ್ಕೆ ಕೆಲವೇ ಕಾರ್ಪೊರೇಟುಗಳು ಜಾಗತಿಕ ಆಸ್ತಿಪಾಸ್ತಿಯ ಮೇಲೆ ಏಕಸ್ವಾಮ್ಯ ಹಿಡಿತ ಹೊಂದಿ ಮತ್ತಷ್ಟು ಹೊಂದಲು ನಡೆಸುತ್ತಿರುವ ಕಿತ್ತಾಟಗಳು ಪ್ರಧಾನ ಕಾರಣವಾಗಿವೆ. ಅದೆಲ್ಲದರ ಪರಿಣಾಮ ಜನಾಂಗೀಯ, ಕೋಮು, ಧಾರ್ಮಿಕ ಇತ್ಯಾದಿ ಫ್ಯಾಶಿಸ್ಟ್ ಗುಂಪುಗಳನ್ನು ಎಗ್ಗಿಲ್ಲದೆ ಮುನ್ನೆಲೆಗೆ ತರಲಾಗುತ್ತಿದೆ. ಹೀಗಾಗಿ ಭಾರತದಲ್ಲಿ ದಲಿತ ದಮನಿತರು, ಆದಿವಾಸಿಗಳು, ಮುಸ್ಲಿಂ ಅಲ್ಪಸಂಖ್ಯಾತರು, ಮಹಿಳೆಯರು ಸೇರಿದಂತೆ ಜನಸಾಮಾನ್ಯರು ದಿನನಿತ್ಯವೂ ಭಯಭೀತಿಯಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ. ಹಾಗಾಗಿ ದಾಳಿ ದೌರ್ಜನ್ಯಗಳು, ಅತ್ಯಾಚಾರಗಳು, ಕೊಲೆ ಸುಲಿಗೆಗಳಂತಹ ಅಪರಾಧಿ ಕೃತ್ಯಗಳು ಹೆಚ್ಚಾಗುತ್ತಿವೆ.

ಹತ್ತಾರು ಸಾವಿರ ರೂಪಾಯಿಗಳಿಗೆ ಕಗ್ಗೊಲೆಗಳನ್ನೇ ಮಾಡುವ ಅಪರಾಧಿ ತಂಡಗಳು ಇಂದು ಸಾಕಷ್ಟು ಸಂಖ್ಯೆಯಲ್ಲಿ ಕರ್ನಾಟಕದಲ್ಲೂ ಕೂಡ ಕಾರ್ಯಾಚರಿಸುತ್ತಿವೆ. ಇಂತಹ ತಂಡಗಳನ್ನು ಬ್ರಾಹ್ಮಣಶಾಹಿ ಕೋಮುವಾದಿ ಹಿಂದೂ ಫ್ಯಾಶಿಸ್ಟ್ ಸಂಘಟನೆಗಳು ಬಳಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಜನಸಾಮಾನ್ಯರನ್ನು ಬೆದರಿಸಿ ಬಾಯಿ ಮುಚ್ಚಿಸಲು ಇಂತಹ ಗುಂಪುಗಳನ್ನು ಬಳಸುತ್ತಿರುವುದು ಗೊತ್ತಿರುವ ವಿಚಾರ ತಾನೆ. ಆಳುವ ಶಕ್ತಿಗಳು ನಡೆಸುವ ಇಂತಹ ಎಲ್ಲವುಗಳ ಹಿಂದೆ ಆರ್ಥಿಕ, ರಾಜಕೀಯ, ಸಾಮಾಜಿಕ ವಿಚಾರಗಳಿವೆ. ಕೇವಲ ಭಾವನಾತ್ಮಕ ಇಲ್ಲವೇ ನಂಬಿಕೆಯ ವಿಚಾರವಲ್ಲ. ಎಚ್ಚೆತ್ತ ಜನಸಾಮಾನ್ಯರ ಸಂಘಟಿತ ಹೋರಾಟ ಮಾತ್ರ ಇಂತಹವುಗಳನ್ನು ಅರ್ಥಮಾಡಿಕೊಂಡು ತಡೆಯಲು ಸಾಧ್ಯ ಬಿಟ್ಟರೆ ಬೇರೆ ಮಾರ್ಗ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ನ್ಯೂಝಿಲ್ಯಾಂಡ್‌ನಂತಹ ಘಟನೆಗಳು ಹೆಚ್ಚು ಹೆಚ್ಚು ಸಂಭವಿಸಬಹುದು. ಅದನ್ನು ತಡೆಯುವ ರೀತಿಯಲ್ಲಿ ಜನಸಾಮಾನ್ಯರು ಒಗ್ಗೂಡುವುದೊಂದೇ ಅದಕ್ಕಿರುವ ಪರಿಹಾರ.


ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News