'ವಾರ್ತಾಭಾರತಿ' ವರದಿ ಫಲಪ್ರದ: ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಉರಿಯುತ್ತಿರುವ ವಿದ್ಯುತ್ ದೀಪಗಳು

Update: 2019-03-18 18:33 GMT

ಮೈಸೂರು,ಮಾ.18: ನಂಜನಗೂಡು ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಒಂದು ತಿಂಗಳಿನಿಂದ ಕೆಟ್ಟುಹೋಗಿದ್ದ ವಿದ್ಯುತ್ ದೀಪಗಳ ಬಗ್ಗೆ 'ವಾರ್ತಾಭಾರತಿ' ಮಾ.16 ರಂದು ಬೆಳಕು ಚೆಲ್ಲಿದ್ದ ಪರಿಣಾಮ ರವಿವಾರದಿಂದ ವಿದ್ಯುತ್ ದೀಪಗಳು ಉರಿಯುತ್ತಿವೆ.

ನಂಜನಗೂಡು ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅನೇಕ ಕಡೆಗಳಲ್ಲಿ ಮರ್ಕುರಿ ಲೈಟಿಗಳನ್ನು ಹಾಕಲಾಗಿತ್ತು. ಅವುಗಳು ಕೆಟ್ಟು ಒಂದು ತಿಂಗಳು ಕಳೆದರೂ ಅಧಿಕಾರಿಗಳು ಜನಪ್ರತಿನಿಧಿಗಳು ಗಮನ ಹರಿಸಿರಲಿಲ್ಲ. ಹಾಗಾಗಿ ಮಾ.16 ರಂದು “ವಾರ್ತಾಭಾರತಿ”ಯಲ್ಲಿ ಕೆಟ್ಟು ಹೋದ ವಿದ್ಯುತ್ ದೀಪಗಳು, ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕತ್ತಲೆಯೋ ಕತ್ತಲೆ. ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಹೇಳೋರ್ಯಾರು ಕೇಳೋರ್ಯಾರು ಎಂಬ ಶೀರ್ಷಿಕೆಯಡಿ ವರದಿ ಮಾಡಲಾಗಿತ್ತು. 

ಜೊತೆಗೆ ಪ್ರಸಿದ್ದ ಯಾತ್ರಾ ಸ್ಥಳವಾಗಿರುವುದರಿಂದ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಹಾಗೆ ಮಾ.19 ರಂದು ನಂಜನಗೂಡು ಶ್ರೀಶ್ರೀಕಂಠೇಶ್ವರ ಸ್ವಾಮಿಯವರ ದೊಡ್ಡ ಜಾತ್ರೆ ಬೇರೆ ಇದೆ. ಈ ಸಂಬಂಧ ವರದಿ ಪ್ರಕಟಿಸಲಾಗಿತ್ತು.

ಪತ್ರಿಕೆ ವರದಿಗೆ ಸ್ಪಂಧಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ಹೇಮಲತಾ ಅವರು ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣ ವಿದ್ಯುತ್ ದೀಪಗಳು ಉರಿಯಬೇಕು ಇಲ್ಲದಿದ್ದರೆ ಕ್ರಮ ಕೈಗೊಳ್ಳವ ಎಚ್ಚರಿಕೆ ನೀಡಿದ್ದರು. ಇದರಿಂದ ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ವಿದ್ಯುತ್ ದೀಪ ಉರಿಯುವಂತೆ ಮಾಡಿದ್ದಾರೆ.

ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರರಿಗೆ ವಿದ್ಯುತ್ ದೀಪಗಳ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿತ್ತು. ಅವರ ನಿಗದಿತ ಅವಧಿ ಮುಗಿದ ತಕ್ಷಣ ಚೆಸ್ಕಾಂ ಮತ್ತು ನಗರಸಭೆಯವರ ಸುಪರ್ದಿಗೆ ವಹಿಸಬೇಕಿತ್ತು. ಅದು ವಿಳಂಬವಾಗಿರುವ ಹಿನ್ನಲೆಯಲ್ಲಿ ಗುತ್ತಿಗೆದಾರ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿರಲಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರೆ ಹೇಮಲತಾ ತಿಳಿಸಿದರು.

“ವಾರ್ತಾಭಾರತಿ”ಯೊಂದಿಗೆ ಮಾತನಾಡಿದ ಅವರು, ಈ ವಿಚಾರ ತಿಳಿಯುತ್ತಿದ್ದಂತೆ ಸಂಬಂಧಪಟ್ಟರಿಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದೇನೆ. ಇನ್ನು ಮುಂದೆ ಇಂತಹ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News