ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ: ವಿ.ಶ್ರೀನಿವಾಸಪ್ರಸಾದ್ ಘೋಷಣೆ

Update: 2019-03-18 18:39 GMT

ಮೈಸೂರು,ಮಾ.18: ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತೇನೆ ಎಂದು ಮೈಸೂರಿನಲ್ಲಿಂದು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಘೋಷಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನನಗೆ ಚುನಾವಣೆಗೆ ನಿಲ್ಲುವ ಆಸೆ ಇರಲಿಲ್ಲ. ಅಭಿಮಾನಿಗಳು, ಕಾರ್ಯಕರ್ತರ ಒತ್ತಾಯದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಕಾರ್ಯಕರ್ತರ ಅಭಿಮಾನಕ್ಕೆ ಧನ್ಯವಾದಗಳು. ಲೋಕಸಭಾ ಚುನಾವಣೆಗೆ ನಿಂತು 20 ವರ್ಷಗಳಾಗಿತ್ತು. 2004 ಮತ್ತು 2009 ರಲ್ಲೂ ಸ್ಪರ್ಧೆ ಮಾಡಲು ಒತ್ತಾಯ ಬಂದಿತ್ತು. ಅಂದು ಅದನ್ನು ನಿರಾಕರಿಸಿದ್ದೆ. 13 ಚುನಾವಣೆ ಸ್ಪರ್ಧೆ ಮಾಡಿ ಸಾಕಾಗಿತ್ತು. ಬೇಡ ಅಂತಲೇ ಈ ಬಾರಿಯೂ ಇದ್ದೆ. ಆದರೆ ಅವರು ಯಾರೂ ಒಪ್ಪದೆ ಚುನಾವಣೆಗೆ ನಿಲ್ಲುವಂತೆ ಮಾಡಿದೆ. 26ರ ಒಳಗೆ ನಾಮಪತ್ರ ಸಲ್ಲಿಸಲೇಬೇಕಿದೆ. ಎಲ್ಲರ ಜೊತೆ ಮಾತನಾಡಿ ಒಳ್ಳೆಯ ದಿನ ನಾಮಪತ್ರ ಸಲ್ಲಿಸುತ್ತೇನೆ ಎಂದರು.

ಕಾಂಗ್ರೆಸ್ ಇತಿಹಾಸದಲ್ಲೇ ರಾಜ್ಯದಲ್ಲಿ ಈ ರೀತಿ ದಿವಾಳಿಯಾಗಿರಲಿಲ್ಲ. ಇನ್ನೊಬ್ಬರ ಜೊತೆಯಲ್ಲಿ ಸೇರಿಕೊಂಡು ಲೋಕಸಭಾ ಚುನಾವಣೆ ಎದುರಿಸಿರಲಿಲ್ಲ. ಮೊದಲೆಲ್ಲ ತ್ರಿಕೋನ ಸ್ಪರ್ಧೆ ನಡೆಯುತಿತ್ತು. ಈಗ ನೇರ ಸ್ಪರ್ಧೆ ನಡೆಯುತ್ತಿದೆ. ನನಗೆ ಈಗ ಎದುರಾಳಿ ಕಾಂಗ್ರೆಸ್ ಪಕ್ಷದವರು. ಅವರ ವಿರುದ್ಧ ನನ್ನ ಸ್ಪರ್ಧೆ. ಸಹಜವಾಗಿ ಕಾಂಗ್ರೆಸ್ ಪಕ್ಷದಲ್ಲಿರುವ ಮುಖಂಡರು ಅನ್ಯಾಯ ಮಾಡಿದ್ದಾರೆ. ಅವರ ಅನ್ಯಾಯವನ್ನು ಚುನಾವಣೆಯಲ್ಲಿ ಹೇಳುತ್ತೇನೆ ಎಂದರು.

ಪ್ರಸಾದ್ ವಿರುದ್ಧ ವಿರೋಧಿಗಳು ಒಂದಾದ ವಿಚಾರಕ್ಕೆ ಪ್ರತಿಕ್ರಿಯಿಸಿ ಎಲ್ಲರೂ ಒಂದಾಗಲಿ ಬಿಡಿ. ಹಾಗಂತ ನಾವೇನು ಹೆದರಿಕೊಂಡು ಓಡಿಹೋಗಲ್ಲ. ಯುದ್ಧಕ್ಕೆ ಹೋಗುತ್ತಿರುವವರು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಜನರ ಪ್ರೀತಿ ವಿಶ್ವಾಸ ಗಳಿಸಿ ಗೆದ್ದೇ ಗೆಲ್ಲುವ ಆತ್ಮವಿಶ್ವಾಸ ನನಗಿದೆ. ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದೆ. ಈಗ ಕಾಂಗ್ರೆಸ್ ದೇಶದಲ್ಲಿ ದುರ್ಬಲವಾಗಿದೆ. ರಾಜ್ಯದಲ್ಲೂ ದುರ್ಬಲವಾಗಿದೆ. ಸ್ವತಃ ಸಿದ್ದರಾಮಯ್ಯ ಸೋತಿದ್ದಾರೆ. ಹೀಗಾಗಿ ಗೆಲುವಿನ ವಿಶ್ವಾಸವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News