ಮಾ.20 ರಂದು ಸುಮಲತಾ ಅಂಬರೀಷ್ ಶಕ್ತಿ ಪ್ರದರ್ಶನ

Update: 2019-03-18 18:50 GMT

ಮಂಡ್ಯ, ಮಾ.18: ಮಂಡ್ಯ ಲೋಕಸಭಾ ಕ್ಷೇತ್ರ ಮೈತ್ರಿ ಪಕ್ಷ ಜೆಡಿಎಸ್ ಪಾಲಾಗಿರುವ ಹಿನ್ನೆಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸುವ ಮೂಲಕ ತನ್ನ ಸ್ಪರ್ಧೆ ಊಹಾಪೋಹಳಿಗೆ ತೆರೆ ಎಳೆದಿರುವ ಸುಮಲತಾ ಅಂಬರೀಷ್, ಮಾ.20 ರಂದು ತಮ್ಮ ಶಕ್ತಿ ಪ್ರದರ್ಶನಕ್ಕೂ ಮುಂದಾಗಿದ್ದಾರೆ.

ಮಾ.20ರಂದು ನಾಮಪತ್ರ ಸಲ್ಲಿಸಲಿರುವ ಅವರು, ಅದೇ ದಿನ ಮಧ್ಯಾಹ್ನ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್‍ನಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ. ಈಗಾಗಲೇ ಸಮಾವೇಶಕ್ಕೆ ಜಿಲ್ಲಾ ಚುನಾವಣಾಧಿಕಾರಿಗೆ ಕೋರಲಾಗಿದೆ.

ಅಂದು ಮಧ್ಯಾಹ್ನ 1.30ರಿಂದ ಸಂಜೆ 6.30ರವರೆಗೆ ಸಮಾವೇಶ ನಡೆಸಲು ಚುನಾವಣಾಧಿಕಾರಿಗಳು ಅನುಮತಿ ನೀಡಿದ್ದಾರೆ ನೀಡಿದ್ದಾರೆ ಎನ್ನಲಾಗಿದೆ.

ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಅನುಮತಿಗೆ ಅರ್ಜಿ ಸಲ್ಲಿಸಿದ್ದರು. ಸುಮಲತಾ ಅವರು ನಾಮಪತ್ರ ಸಲ್ಲಿಕೆ ವೇಳೆ ಸಮಾವೇಶಕ್ಕೆ ಹಲವು ಸಿನಿಮಾ ತಾರೆಯರು ಸಾಥ್ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಅಂದಿನ ಸಮಾವೇಶದಲ್ಲಿ ಹಲವು ರಾಜಕೀಯ ಮುಖಂಡರು ಪಾಲ್ಗೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ತನ್ನ ಪ್ರವಾಸದ ವೇಳೆಯಲ್ಲೇ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದ ಹಿನ್ನೆಲೆಯಲ್ಲಿ ಸುಮಲತಾ ಅವರು, ಬಿಜೆಪಿಯಿಂದ ಸ್ಪರ್ಧೆ ಮಾಡಬಹುದೆಂದು ಜನರಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಎಚ್ಚರಿಕೆಯ ನಡೆಯೊಂದಿಗೆ ರಾಜಕೀಯ ಅಂಗಳಕ್ಕೆ ಜಿಗಿದ ಸುಮಲತಾ, ಯಾವುದೇ ಟೀಕೆ, ಆರೋಪಗಳಿಗೆ ತೀಷ್ಣ ಪ್ರತಿಕ್ರಿಯೆ ನೀಡದೆ ತನ್ನ ಎಚ್ಚರಿಕೆಯ ನಡೆಯನ್ನು ಕಾಯ್ಕುಕೊಂಡು ಬರುತ್ತಿದ್ದು, ಅಭಿಮಾನಿಗಳ ವಿಶ್ವಾಸವನ್ನು ಗಟ್ಟಿಗೊಳಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗುವುದಾಗಿ ಘೋಷಣೆ ಮಾಡುವ ಮೂಲಕ ಅಭಿಮಾನಿಗಳ ಹಾಗೂ ಮತದಾರರ ಗೊಂದಲ,ಕುತೂಹಲಗಳಿಗೆ ತೆರೆ ಎಳೆದಿದ್ದಾರೆ. ಬಿಜೆಪಿಗಿಂತ ಪಕ್ಷೇತರವಾಗಿ ನಿಲ್ಲಬೇಕೆನ್ನುವುದು ಅಭಿಮಾನಿಗಳ ಆಶಯವಾಗಿತ್ತು. ಈ ನಡುವೆ ಬಿಜೆಪಿ ಕೂಡ ಸುಮಲತಾ ಅವರಿಗೆ ಬೆಂಬಲ ಘೋಷಿಸುವ ಸಾಧ್ಯತೆಯೂ ಇದೆ. ಒಟ್ಟಾರೆ, ಮಂಡ್ಯದ ಚುನಾವಣಾ ಕಣ ರಂಗು ಪಡೆದಿದ್ದು, ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ನಡುವೆ ಪ್ರಬಲ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News