ಎಲ್ಲಿಯವರೆಗೆ ನಮ್ಮ ಮಕ್ಕಳು ಭಾರತ- ಪಾಕ್ ವಿವಾದಕ್ಕೆ ಬಲಿಯಾಗುತ್ತಿರಬೇಕು?

Update: 2019-03-19 03:33 GMT

ಲೂದಿಯಾನಾ, ಮಾ.19: ಭಾರತ- ಪಾಕಿಸ್ತಾನ ಗಡಿಯಲ್ಲಿ ಯುದ್ಧವಿರಾಮ ಉಲ್ಲಂಘನೆ ವೇಳೆ ಭಾರತದ ಯೋಧ ಕರಮಜೀತ್ ಸಿಂಗ್ (24) ಬಲಿಯಾದ ಸುದ್ದಿ ಪಂಜಾಬ್‌ನ ಮೊಗಾ ಜಿಲ್ಲೆಯ ಜನೇರ್ ಗ್ರಾಮದಲ್ಲಿದ್ದ ಅವರ ಕುಟುಂಬಕ್ಕೆ ತಲುಪುತ್ತಿದ್ದಂತೆಯೇ, ಮೃತ ಯೋಧನ ತಂದೆ ಹಾಗೂ ನಿವೃತ್ತ ಯೋಧ ಅವತಾರ್ ಸಿಂಗ್ (58) ಬಹಿರಂಗವಾಗಿ ಪ್ರಧಾನಿಗೆ ಒಂದು ಪ್ರಶ್ನೆ ಕೇಳಿದರು: "ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ಎಲ್ಲಿಯವರೆಗೆ ನಮ್ಮ ಸೈನಿಕರು ಬಲಿಯಾಗಬೇಕು?"

'ಇಂಡಿಯನ್ ಎಕ್ಸ್‌ಪ್ರೆಸ್' ಜತೆ ಮಾತನಾಡಿದ ಅವರು, "ರಾಜ್ಯದ ಇತರ ಹಲವು ಯುವಕರಂತೆ ಕರಮಜೀತ್ ಕೂಡಾ ವಿದೇಶದಲ್ಲಿ ನೆಲೆಸಲು ಬಯಸಿದ್ದ. ಆದರೆ ನಾನು ಅವನನ್ನು ತಡೆದು ಸೇನೆ ಸೇರುವಂತೆ ಸೂಚಿಸಿದೆ" ಎಂದು ರೋದಿಸಿದರು.

ರಕ್ಷಣಾ ಸಚಿವಾಲಯದ ಹೇಳಿಕೆಯ ಪ್ರಕಾರ, ಪಾಕಿಸ್ತಾನಿ ಪಡೆಗಳು ಜಮ್ಮು ಕಾಶ್ಮೀರದ ರಾಜೌರಿ ವಲಯದ ಸುಂದರ್‌ಬನಿ ಪ್ರದೇಶದಲ್ಲಿ ಮುಂಜಾನೆ 5:30ರ ವೇಳೆಗೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಕರಮಜೀತ್ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಮೃತಪಟ್ಟರು. ಮೂವರು ಇತರ ಸೈನಿಕರೂ ದಾಳಿಯಲ್ಲಿ ಗಾಯಗೊಂಡಿದ್ದಾರೆ.

ಸುದ್ದಿ ತಿಳಿದ ತಕ್ಷಣ ಸೈನಿಕನ ತಾಯಿ ಮೂರ್ಛೆ ಹೋದರು. ಕೊನೆಯ ಬಾರಿ ತಾಯಿ ಕುಲವಂತ್ ಕೌರ್ ಜತೆ ದೂರವಾಣಿಯಲ್ಲಿ ಮಾತನಾಡಿದ್ದ ಆತ ಮನೆಗೆ ಬಂದಾಗ ತನ್ನ ಪ್ರೀತಿಯ ಫ್ರೆಶ್ ಖೋಯಾ ಸಿದ್ಧಪಡಿಸಿಕೊಡಬೇಕು ಎಂದು ಕೇಳಿದ್ದ.

ಭಾರತೀಯ ಸೇನೆಯಲ್ಲಿ ನಾಯಕ್ ಆಗಿ ನಿವೃತ್ತರಾದ ಅವತಾರ್ ಸಿಂಗ್, ದೇಶಕ್ಕಾಗಿ ಹೋರಾಡಿ ಮೃತಪಟ್ಟ ಮಗನ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದರು. ಆದರೆ ಗಡಿಯಲ್ಲಿ ಪ್ರತಿದಿನ ಬಲಿದಾನವಾಗುತ್ತಿರುವ ಯುವಕರನ್ನು ರಕ್ಷಿಸುವ ಸಲುವಾಗಿ ಪಾಕಿಸ್ತಾನದ ಜತೆಗಿನ ನಮ್ಮ ಸಮಸ್ಯೆಗಳಿಗೆ ಖಾಯಂ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರಧಾನಿಯನ್ನು ಆಗ್ರಹಿಸಿದರು.

ನಮ್ಮ ಬಡಕುಟುಂಬಗಳು ಪರಿಹಾರ ಕಾಣದ ಭಾರತ- ಪಾಕಿಸ್ತಾನ ಸಂಘರ್ಷದಿಂದಾಗಿ ಏಕೆ ನರಳಬೇಕು ಎನ್ನುವುದು ಅವರ ಪ್ರಶ್ನೆ. "ಪಾಕಿಸ್ತಾನದ ಜತೆಗಿನ ಸಂಘರ್ಷಕ್ಕೆ ಖಾಯಂ ಪರಿಹಾರ ಕಂಡುಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ನಾನು ಸರ್ಕಾರವನ್ನು ಕೇಳಬಯಸುತ್ತೇನೆ. ಆ ದೇಶ ಭಯೋತ್ಪಾದನೆಯನ್ನು ಬೆಂಬಲಿಸುವುದು ಮಾತ್ರವಲ್ಲದೇ ನಮ್ಮ ಮಕ್ಕಳನ್ನು ಗಡಿಯಲ್ಲಿ ಕೊಲ್ಲುತ್ತಿದೆ. ಬಾಲಾಕೋಟ್ ಮೇಲೆ ವಾಯುದಾಳಿ ನಡೆಸಿದ್ದನ್ನು ನಾನು ಶ್ಲಾಘಿಸುತ್ತೇನೆ. ಆದರೆ ಆ ಬಳಿಕ ಕೂಡಾ ಪರಿಸ್ಥಿತಿ ಬದಲಾವಣೆಯಾಗಿಲ್ಲ. ಇದು ಎಲ್ಲಿಯವರೆಗೆ ಮುಂದುವರಿಯುತ್ತದೆ? ನಮ್ಮ ಸೇನೆಯ ಶಕ್ತಿಯನ್ನು ಸುದ್ದಿವಾಹಿನಿಗಳು ವರ್ಣಿಸುತ್ತಿವೆ. ಆದರೆ ನಮ್ಮ ಸೈನಿಕರು ಹತ್ಯೆಗೀಡಾಗುವುದಾದರೆ ಇದರಿಂದ ಏನು ಪ್ರಯೋಜನ? ನಾನು ಯುದ್ಧದ ಪರವಾಗಿಲ್ಲ. ಯುದ್ಧ ಎಂದರೆ ಹಾನಿ. ಆದರೆ ಪ್ರತಿದಿನ ನಮ್ಮ ಸೈನಿಕರು ಸಾಯುವುದಾದರೆ, ಒಂದು ಬಾರಿ ಇದಕ್ಕೆ ಏಕೆ ಪರಿಹಾರ ಕಂಡುಕೊಳ್ಳಬಾರದು? ಎಂದು ಕೋಪದಿಂದ ನಡುಗುತ್ತಿದ್ದ ಅವರು ಖಾರವಾಗಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News