5 ವರ್ಷಗಳ ಹಿಂದೆ ನರೇಂದ್ರ ಮೋದಿ ಚಾಯ್‌ವಾಲಾ,ಈಗ ಚೌಕಿದಾರ್: ಮಾಯಾವತಿ ವ್ಯಂಗ್ಯ

Update: 2019-03-19 08:17 GMT

ಹೊಸದಿಲ್ಲಿ, ಮಾ.19: 2014ರ ಲೋಕಸಭಾ ಚುನಾವಣೆಯಲ್ಲಿ ಚಾಯ್‌ವಾಲಾ(ಟೀ ಮಾರುವವ)ಅಭಿಯಾನದ ಮೂಲಕ ಭಾರೀ ಪ್ರಚಾರ ಗಿಟ್ಟಿಸಿಕೊಂಡು ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಇದೀಗ ‘ಮೈ ಭಿ ಚೌಕಿದಾರ್’ ಅಭಿಯಾನ ಆರಂಭಿಸಿದ್ದು , ತನ್ನ ಟ್ವಿಟರ್‌ನಲ್ಲಿ ‘ಚೌಕಿದಾರ್’ ಎಂಬ ಹೆಸರು ಸೇರಿಸಿಕೊಂಡಿದ್ದಾರೆ. ಬಿಜೆಪಿಯ ಈ ನಡೆಯನ್ನು ಬಹುಜನ ಸಮಾಜ ಪಕ್ಷ(ಬಿಎಸ್ಪಿ) ನಾಯಕಿ ಮಾಯಾವತಿ ತನ್ನದೇ ಶೈಲಿಯಲ್ಲಿ ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ.

ಬಿಜೆಪಿಯು ಶನಿವಾರ ‘ಮೈ ಭಿ ಚೌಕಿದಾರ್’ ಅಭಿಯಾನ ಆರಂಭಿಸಿದ ಬಳಿಕ ಪ್ರಧಾನಿ ಮೋದಿ ಹಾಗೂ ಇತರರು ತಮ್ಮ ಟ್ವಿಟರ್‌ನಲ್ಲಿ ಹೆಸರಿನ ಮುಂದೆ ಚೌಕಿದಾರ್ ಪದ ಸೇರಿಸಿದ್ದಾರೆ. ಇದೀಗ ನರೇಂದ್ರ ಮೋದಿ ‘ಚೌಕಿದಾರ್’ ಆಗಿದ್ದಾರೆ. ಇನ್ನು ಮುಂದೆ ಅವರು ‘ಚಾಯ್‌ವಾಲಾ’ ಅಲ್ಲ. ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಮೋದಿ ‘ಚಾಯ್‌ವಾಲಾ’ ಆಗಿದ್ದರು. ಬಿಜೆಪಿ ನೇತೃತ್ವದ ಸರಕಾರದಲ್ಲಿ ಭಾರತ ಎಂತಹ ಬದಲಾವಣೆಗೆ ಸಾಕ್ಷಿಯಾಗಿದೆ’’ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ತಾನು ‘ಚಾಯ್‌ವಾಲಾ’ ಎಂದು ಹೇಳಿಕೊಂಡು ಪ್ರಚಾರ ಮಾಡಿದ್ದ ಮೋದಿ ಯುವ ಮತದಾರರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದರು. 10 ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಕಿತ್ತುಹಾಕಿದ ಬಿಜೆಪಿ ಭರ್ಜರಿ ಬಹುಮತದಿಂದ ಕೇಂದ್ರದಲ್ಲಿ ಅಧಿಕಾರಕ್ಕೇರಿತ್ತು.

ಪ್ರಧಾನಿ ಮೋದಿ ಕಳೆದ ಕೆಲವು ವರ್ಷಗಳಿಂದ ಭ್ರಷ್ಟಾಚಾರ ವಿರುದ್ಧ ಹೋರಾಟದ ವಿಚಾರ ಬಂದಾಗ ತಾನೊಬ್ಬ ಚೌಕಿದಾರ್(ಕಾವಲುಗಾರ)ಎಂದು ಹೇಳುತ್ತಿದ್ದರು. ರಫೆಲ್ ಯುದ್ದ ವಿಮಾನ ಒಪ್ಪಂದದ ವಿಚಾರಕ್ಕೆ ಪ್ರಧಾನಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಲು ರಾಹುಲ್ ಗಾಂಧಿ ಇದೇ ಪದವನ್ನು ಬಳಸಿ, ‘ಚೌಕಿದಾರ್ ಚೋರ್ ಹೈ’ಎಂದು ಕರೆಯಲಾರಂಭಿಸಿದರು.

ಸಾರ್ವತ್ರಿಕ ಚುನಾವಣೆಯಲ್ಲಿ ಜನರ ಮನಸ್ಸನ್ನು ತಿರುಗಿಸುವ ಯತ್ನವಾಗಿ ಬಿಜೆಪಿ ಇದೀಗ ‘ಚೌಕಿದಾರ್’ ಅಭಿಯಾನ ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News