ಅಕ್ರಮ ಶಸ್ತ್ರಾಸ್ತ ಕಾಯ್ದೆಯಡಿ ಇಬ್ಬರ ಸೆರೆ: 14 ದಿನಗಳ ನ್ಯಾಯಾಂಗ ಬಂಧನ

Update: 2019-03-19 11:53 GMT

ಮೂಡಿಗೆರೆ, ಮಾ.19: ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿ ಹೀಚುವಳ್ಳಿ ಪ್ರಸನ್ನ ಮತ್ತು ಸತೀಶ್ ಪಟ್ಟದೂರು ಎಂಬವರನ್ನು ಗೋಣಿಬೀಡು ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ಮಂಗಳವಾರ ವರದಿಯಾಗಿದೆ.

ಕಳೆದ ಮೂರು ತಿಂಗಳ ಹಿಂದೆ ಹೀಚುವಳ್ಳಿ ಗ್ರಾಮದಲ್ಲಿ ರಂಜಿತ್ ಎಂಬವರು ತಮ್ಮ ಗದ್ದೆಯ ಪೈರನ್ನು ಹೊರುತ್ತಿದ್ದ ಸಂದರ್ಭ ಇದೇ ಗ್ರಾಮದ ಪ್ರಸನ್ನ, ಸುಶೀಲಾ ಬಾಯಿ ಎಂಬವರು ಜೆಸಿಬಿಯಿಂದ ಗದ್ದೆಯ ಕಾಲುವೆಯನ್ನು ಅತಿಕ್ರಮಣ ಮಾಡಲು ಮುಂದಾಗಿದ್ದರು. ಇದನ್ನು ಪ್ರಶ್ನಿಸಿದಾಗ ಪ್ರಸನ್ನ ಎಂಬವರು ರಂಜಿತ್‍ಗೆ ಹಲ್ಲೆಗೆ ಮುಂದಾಗಿ ಕೋವಿಯನ್ನು ತೋರಿಸಿ ಕೆಲಸದವರಿಗೆ ಇವರನ್ನು ಹೊಡೆಯಿರಿ ಎಂದು ಹೇಳಿ ಕೋವಿಯನ್ನು ತಲೆಗೆ ಹಿಡಿದಿದ್ದಲ್ಲದೇ ದೊಣ್ಣೆ ಮತ್ತು ಕೈಯಿಂದ ಹೊಡೆದಿದ್ದರು ಎನ್ನಲಾಗಿದ್ದು, ಈ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ರಂಜಿತ್ ದೂರು ದಾಖಲಿಸಿದ್ದರು.

ದೂರಿನ ಮೇರೆಗೆ ತನಿಖೆ ನಡೆಸಿದ ಪಿಎಸೈ ರಾಕೇಶ್ ನೇತೃತ್ವದ ಪೊಲೀಸರ ತಂಡ, ಮಾ.15ರಂದು ಆರೋಪಿಯ ಮನೆಗೆ ವಾರೆಂಟ್‍ನೊಂದಿಗೆ ತೆರಳಿ ಪರಿಶೀಲಿಸಿದಾಗ ಮಂಚದ ಕೆಳಗೆ ಒಂದು ಒಂಟಿ ನಳಿಕೆ ಕೋವಿ ದೊರೆತಿದ್ದು, ಇದರ ಪರವಾನಿಗೆ ಪಿ.ಎಂ.ಸತೀಶ್ ಅವರ ಹೆಸರಿನಲ್ಲಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ದುರುಪಯೋಗ ಮಾಡಿಕೊಂಡ ಮೇರೆಗೆ ಕಲಂ 25 ದಂಡ ಸಂಹಿತೆ ಕಾನೂನುನಡಿಯಲ್ಲಿ ಬೆದರಿಕೆ ಮತ್ತು ಸಾಕ್ಷ್ಯ ನಾಶದ ಸಾಧ್ಯತೆಯಡಿಯಲ್ಲಿ ಜಾಮೀನು ರಹಿತ ಕೇಸು ದಾಖಲಿಸಿ, ಪ್ರಸನ್ನ ಮತ್ತು ಸತೀಶ್ ಪಟ್ಟದೂರು ಅವರನ್ನು ಬಂಧಿಸಿದ್ದರು.

ಕೃತ್ಯದಲ್ಲಿ ಮರು ಭಾಗಿಯಾಗುವ ಸಾಧ್ಯತೆ ಹಾಗೂ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುವ ಕಾರಣವನ್ನು ನ್ಯಾಯಾಲಯಕ್ಕೆ ಪೊಲೀಸರು ಮನವರಿಕೆ ಮಾಡಿದ್ದರಿಂದ ನ್ಯಾಯಾಲಯವು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News