ನೀತಿ ಸಂಹಿತೆ ಉಲ್ಲಂಘನೆ: ಚಿಕ್ಕಮಗಳೂರು ಜಿಲ್ಲಾದ್ಯಂತ 166 ಪ್ರಕರಣ ದಾಖಲು

Update: 2019-03-19 14:58 GMT

ಚಿಕ್ಕಮಗಳೂರು, ಮಾ.19: ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆಯಡಿಯಲ್ಲಿ ಅಕ್ರಮ ಹಣ, ಮದ್ಯ ಸಾಗಾಟವನ್ನು ಜಿಲ್ಲಾದ್ಯಂತ ಜಿಲ್ಲಾಡಳಿತ ನಿರ್ಭಂಧಿಸಿದ್ದು, ಜಿಲ್ಲೆಯಲ್ಲಿ ಇದುವರೆಗೆ 166 ಪ್ರಕರಣಗಳನ್ನು ದಾಖಲಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಾ.11ರಿಂದ ಮಾ.13ರವರೆಗೆ ನಡೆದ ಕಾರ್ಯಾಚರಣೆಯಲ್ಲಿ 1 ಅಕ್ರಮ ಹಣ ಸಾಗಾಟ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಚಿಕ್ಕಮಗಳೂರು ತಾಲೂಕಿಗೆ ಒಳಪಟ್ಟು, ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಮಾಗಡಿ ಚೆಕ್‍ ಪೋಸ್ಟ್ ನಲ್ಲಿ ಮಾ.11ರಂದು ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 1,49,110 ರೂ.ಅನ್ನು ಚುನಾವಣಾಧಿಕಾರಿಗಳ ತಂಡ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದೆ.

ಇನ್ನು ಅಕ್ರಮ ಮದ್ಯ ಸಾಗಾಟ ಆರೋಪದಡಿಯಲ್ಲಿ 164 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮದ್ಯ ಸೇರಿದಂತೆ ಒಟ್ಟು 49,41,008 ರೂ. ಮೌಲ್ಯದ 13,614 ಲೀ. ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

ಉಳಿದಂತೆ ಇತರ ಸಾಮಗ್ರಿಗಳ ಸಾಗಾಟ ಆರೋಪದಡಿಯಲ್ಲಿ 2,48,190 ರೂ.ಮೌಲ್ಯದ 59 ಸೀರೆಗಳನ್ನು ಚುನಾವಣಾಧಿಕಾರಿಗಳ ತಂಡ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News