ಸಾಮರಸ್ಯದ ಸಮಾಜಕ್ಕಾಗಿ ಸಮನ್ವಯ ಸಿದ್ಧಾಂತದಿಂದ ಬಾಳಬೇಕಿದೆ: ಇಬ್ರಾಹೀಂ ಸುತಾರ

Update: 2019-03-19 12:48 GMT

ಬಾಳೆಹೊನ್ನೂರು, ಮಾ.19: ಜಗ ಬೆಳಗಲು ಸೂರ್ಯ ಬೇಕು. ಬದುಕು ಬೆಳಗಲು ಗುರುನಾಥ ಬೇಕು. ಗುರು ಮತ್ತು ಗುರಿಯಿಲ್ಲದ ಬದುಕಿಗೆ ಬೆಲೆಯಿಲ್ಲ, ಬಲವಿಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾನವ ಧರ್ಮದ ಉತ್ಕೃಷ್ಟ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಮಹಾಮುನಿ ಅಗಸ್ಯರಿಗೆ ಬೋಧಿಸಿದ ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಅಧ್ಯಾತ್ಮ ಸಂಪತ್ತಿನ ಗಣಿಯನ್ನು ಕಾಣಬಹುದು. ಈ ಹಿಂದೆ ಎಷ್ಟೋ ಪ್ರಶಸ್ತಿಗಳು ಬಂದಿರಬಹುದು. ಆದರೆ ಆ ಎಲ್ಲ ಪ್ರಶಸ್ತಿಗಳಿಗಿಂತ ಇಂದು ಪ್ರಾಪ್ತವಾದ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ನನ್ನ ಪಾಲಿಗೆ ಜಾಗತಿಕ ಪ್ರಶಸ್ತಿಯಾಗಿದೆ ಎಂದು ಮಹಲಿಂಗಪುರದ ಇಬ್ರಾಹೀಂ ಎನ್. ಸುತಾರ ಅಭಿಪ್ರಾಯಿಸಿದರು.

ಇಲ್ಲಿನ ಶ್ರೀ ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ, ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ರಂಭಾಪುರಿ ಪೀಠದಿಂದ ಕೊಡಲ್ಪಡುವ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಇದೊಂದು ಅಮೃತ ಘಳಿಗೆ. ಪರಮ ಪೂಜ್ಯರು ಶ್ರೀ ಪೀಠದ ಅತ್ಯುನ್ನತ ಪ್ರಶಸ್ತಿ ಅನುಗ್ರಹಿಸಿರುವುದು ನನ್ನ ಜೀವನದ ಸೌಭಾಗ್ಯ. ನನ್ನ ಶಕ್ತಿಯನ್ನು ಇದು ನೂರ್ಮಡಿಗೊಳಿಸಿದೆ ಎಂದ ಅವರು, ಸಮಾಜದಲ್ಲಿ ಶಾಂತಿ ಸೌಹಾರ್ದ ಅತ್ಯಗತ್ಯ. ಎಲ್ಲ ಧರ್ಮಗಳ ಸಾರ, ಮೌಲ್ಯ, ಆದರ್ಶ, ಗುರಿ ಒಂದೇ ಆಗಿದೆ. ಸಮಾಜದ ಸಾಮರಸ್ಯ-ಸೌಹಾರ್ದಕ್ಕಾಗಿ ಎಲ್ಲ ಧರ್ಮೀಯರು ಪರಿಸ್ಪರ ಸಮನ್ವಯ ಸಿದ್ಧಾಂತದಿಂದ ಬಾಳುವ ಅಗತ್ಯ ಹೆಚ್ಚು ಪ್ರಸ್ತುತವಾಗಿದೆ ಎಂದರು.

ಧರ್ಮೋತ್ತೇಜಕ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಂಸ್ಕಾರ ಸಚ್ಚಾರಿತ್ರ್ಯದಿಂದ ಬದುಕು ಸಮೃದ್ಧಗೊಳ್ಳುತ್ತದೆ. ಅಧ್ಯಾತ್ಮ ಸಾಧನೆಯಿಂದ ಜೀವನದಲ್ಲಿ ಶಾಂತಿ ಶ್ರೇಯಸ್ಸು ಕಾಣಲು ಸಾಧ್ಯ. ವಿಶ್ವ ಬಂಧುತ್ವದ ಆದರ್ಶ ಮೌಲ್ಯಗಳನ್ನು ಬೋಧಿಸಿ ಬೆಳಕಿನತ್ತ ಕರೆದೊಯ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಂದೇಶಗಳು ಸರ್ವರ ಬಾಳಿಗೆ ದಾರಿ ದೀಪ ಎಂದು ಅಭಿಪ್ರಾಯಪಟ್ಟರು.

ಸಾನಿಧ್ಯ ವಹಿಸಿದ ಸುತ್ತೂರು ಶ್ರೀ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಉಡುಪಿ ಪೇಜಾವರ ಮಠದ ಜಗದ್ಗುರು ಡಾ.ವಿಶ್ವೇಶ್ವರ ತೀರ್ಥ ಸ್ವಾಮೀಜಿ, ಎಸಳೂರು ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸೂಡಿ ಜುಕ್ತಿ ಹಿರೇಮಠದ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಶಸ್ತಿ ವಾಚನ ಮಾಡಿದರು. ಶಾಸಕರಾದ ಟಿ.ಡಿ. ರಾಜೇಗೌಡ, ಅಮೃತ ದೇಸಾಯಿ, ಟಿ.ಆರ್.ನಾಗಪ್ರಸಾದ್, ವಾಗೀಶ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಮಾತನಾಡಿದರು. ಜಗದ್ಗುರು ರೇಣುಕಾಚಾರ್ಯ ಕೃಪಾಪೋಷಿತ ಹಳೇ ವಿದ್ಯಾರ್ಥಿಗಳ ಸಂಘ ಮತ್ತು ಸೇವಾ ದೀಪ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ವೀರ ಸೈನಿಕರ ನೆನಪಿನಡಿಯಲ್ಲಿ ರಕ್ತದಾನ ಶಿಬಿರ ಮತ್ತು ಉಚಿತ ಕಣ್ಣಿನ ತಪಾಸಣಾ ಶಿಬಿರ ಜರುಗಿತು. ಸ್ಥಳೀಯ ಹಾಗೂ ಸುತ್ತ ಮುತ್ತಲಿನ ಜನತೆ ಈ ಶಿಬಿರದ ಲಾಭ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News