ಚಿಕ್ಕಮಗಳೂರು: ನದಿಗಳಿಗೆ ಅಕ್ರಮ ಪಂಪ್‍ಸೆಟ್; ಎರಡನೇ ದಿನವೂ ಮುಂದುವರಿದ ದಾಳಿ

Update: 2019-03-19 12:51 GMT

ಚಿಕ್ಕಮಗಳೂರು, ಮಾ.19: ಹೇಮಾವತಿ, ಜಪಾವತಿ ನದಿಗಳಿಗೆ ಅಕ್ರಮವಾಗಿ ಪಂಪ್‍ಸೆಟ್ ಅಳವಸಿ ಕಾಫಿ ತೋಟಗಳಿಗೆ ಅಕ್ರಮವಾಗಿ ನೀರು ಹಾಯಿಸುತ್ತಿದ್ದ ಘಟನೆ ಸಂಬಂಧ ವಾರ್ತಾಭಾರತಿ ಪ್ರಕಟಿಸಿದ್ದ ವರದಿ ಹಿನ್ನೆಲೆಯಲ್ಲಿ ಸೋಮವಾರ ಕಾರ್ಯಚರಣೆ ನಡೆಸಿ ಕೆಲ ಪಂಪ್‍ಸೆಟ್‍ಗಳನ್ನು ವಶಕ್ಕೆ ಪಡೆದ ಮೂಡಿಗೆರೆ ತಹಶೀಲ್ದಾರ್ ನೇತೃತ್ವದ ತಂಡದ ಕಾರ್ಯಾಚರಣೆ ಮಂಗಳವಾರವೂ ಮುಂದುವರೆಯಿತು.

ಸೋಮವಾರ ತಾಲೂಕಿನ ತಾಲೂಕಿನ ಹುರುಡಿ, ಶೀಗೇಹಳ್ಳಿ, ಚಕ್ಕುಡಿಗೆ, ಕಿರುಗುಂದ ಮತ್ತಿತರ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿದ ಮೂಡಿಗೆರೆ ತಹಶೀಲ್ದಾರ್ ಪದ್ಮನಾಭಶಾಸ್ತ್ರಿ ಹಾಗೂ ಸಿಬ್ಬಂದಿ ಅಕ್ರಮವಾಗಿ ಪಂಪ್‍ಸೆಟ್ ಮೂಲಕ ತೋಟಗಳಿಗೆ ನೀರು ಹಾಯಿಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಕೆಲ ಪಂಪ್‍ಸೆಟ್‍ಗಳನ್ನು ವಶಕ್ಕೆ ಪಡೆದು ದೂರು ದಾಖಲಿಸಿದ್ದರು. ಮಂಗಳವಾರವೂ ಈ ದಾಳಿ ಮುಂದುವರಿಸಿದ ತಹಶೀಲ್ದಾರ್ ಮತ್ತು ಸಿಬ್ಬಂದಿ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳ ನದಿಗಳ ತೀರಗಳಲ್ಲಿ ಪರಿಶೀಲನೆ ನಡೆಸಿದರೆಂದು ತಿಳಿದು ಬಂದಿದೆ.

ಸೋಮವಾರದ ದಾಳಿ ಬಳಿಕ ತಹಶೀಲ್ದಾರ್ ಅವರಿಗೆ ಹೇಮಾವತಿ ಸೇರಿದಂತೆ ಇತರ ನದಿಗಳಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ಪಂಪ್‍ಸೆಟ್‍ಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದರೆನ್ನಲಾಗಿದ್ದು, ಈ ದೂರಿನ ಮೇರೆಗೆ ತಹಶೀಲ್ದಾರ್ ಮಂಗಳವಾರವೂ ಪರಿಶೀಲನೆ ನಡೆಸಿದ್ದರು. ಆದರೆ ಸೋಮವಾರ ನಡೆದ ದಾಳಿಯಿಂದ ಎಚ್ಚೆತ್ತ ಕಾಫಿ ತೋಟಗಳ ಮಾಲಕರು ತಮ್ಮ ಪಂಪ್‍ಸೆಟ್‍ಗಳು ಜಪ್ತಿ ಆಗುವ ಭೀತಿಯಿಂದಾಗಿ ರಾತ್ರೋರಾತ್ರಿ ಪಂಪ್‍ಸೆಟ್‍ಗಳನ್ನು ಮನೆಗಳಿಗೆ ಸಾಗಿಸಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.

ಹೇಮಾವತಿ ಹಾಗೂ ಜಪಾವತಿ ನದಿಗಳು ತಾಲೂಕಿನ ನೂರಾರು ಗ್ರಾಮಗಳ ಕುಡಿಯುವ ನೀರಿನ ಮೂಲವಾಗಿವೆ. ಪ್ರಸಕ್ತ ಬಿರುಬೇಸಿಗೆಯಾದ್ದರಿಂದ ನದಿಯಲ್ಲಿ ನೀರು ಬತ್ತಿ ಹೋಗಿದೆ. ಇರುವ ಅಲ್ಪಸ್ವಲ್ಪ ನೀರನ್ನು ವಿವಿಧ ಗ್ರಾಮ ಪಂಚಾಯತ್‍ಗಳು ಹರಸಾಹಸಪಟ್ಟು ಗ್ರಾಮಗಳಿಗೆ ಕುಡಿಯಲು ಪೂರೈಸುತ್ತಿವೆ. ಈ ಮಧ್ಯೆ ಕಾಫಿ ತೋಟಗಳ ಮಾಲಕರು ಯಾರ ಭೀತಿ ಇಲ್ಲದೇ ನದಿಯಲ್ಲಿ ಅಳಿದುಳಿದ ನೀರನ್ನು ಅಕ್ರಮವಾಗಿ ತೋಟಗಳಿಗೆ ಹಾಯಿಸುತ್ತಿದ್ದರು. ಇದರಿಂದಾಗಿ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿ ಜನ ಜಾನುವಾರು ವನ್ಯಜೀವಿಗಳಿಗೆ ಕುಡಿಯಲು ನೀರಿದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. 

ಜಿಲ್ಲೆಯಲ್ಲಿ ಹರಿಯುವ ನದಿಗಳಿಂದ ಅಕ್ರಮವಾಗಿ ತೋಟಗಳಿಗೆ ನೀರು ಹಾಯಿಸುವ ದಂಧೆ ಜಿಲ್ಲಾದ್ಯಂತ ಹಿಂದಿನಿಂದಲೂ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಗ್ಗೆ ಯಾರೂ ಪ್ರಶ್ನೆ ಮಾಡದ ಕಾರಣ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರು. ವನ್ಯಜೀವಿಗಳ ಬಗ್ಗೆ ಕಾಳಜಿ ತೋರುವ ಪರಿಸರವಾದಿಗಳೂ ಇದರ ಪಾಲುದಾರರಾಗಿರುವುದರಿಂದ ಅವರೂ ಈ ಬಗ್ಗೆ ಸೊಲ್ಲೆತ್ತುತ್ತಿರಲಿಲ್ಲ. ಹೀಗಾಗಿ ಸಣ್ಣಪುಟ್ಟ ನದಿಗಳಲ್ಲಿ ಬೇಸಿಗೆಯಲ್ಲಿ ಹರಿಯುವ ನೀರು ಮಾಯವಾಗಿ ನೂರಾರು ನದಿ, ತೊರೆಗಳೂ ನಾಶಹೊಂದುವಂತಾಗಿದೆ ಎಂದು ಮಲೆನಾಡಿನ ಕೆಲ ರೈತರು ವಾರ್ತಾಭಾರತಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News