ಮೋದಿ ಪರ ಪ್ರಚಾರ ಭರದಲ್ಲಿ ಸಮುದಾಯದ ಬಗ್ಗೆ ಅಶ್ಲೀಲ ಕಮೆಂಟ್: ಫೇಸ್ಬುಕ್ ಖಾತೆ ವಿರುದ್ಧ ಕ್ರಮಕ್ಕೆ ಒತ್ತಾಯ

Update: 2019-03-19 15:12 GMT

ಚಿಕ್ಕಮಗಳೂರು, ಮಾ.19: ಪ್ರಧಾನಿ ನರೇಂದ್ರ ಮೋದಿ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನೀಡುವ ಭರದಲ್ಲಿ ನಗರದ ಬಿಜೆಪಿ ಕಾರ್ಯಕರ್ತೆ ಎನ್ನಲಾದ ಯುವತಿಯ ಫೇಸ್‍ಬುಕ್ ಖಾತೆಯಿಂದ ಸಮುದಾಯವೊಂದರ ಮಹಿಳೆಯರು, ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್, ಕಮೆಂಟ್ ಹಾಕುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ನಗರದ ರಂಜಿನಿ ಗೌಡ ಎಂಬ ಹೆಸರಿನ ಫೇಸ್‍ಬುಕ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರವಾಗಿ ವ್ಯಾಪಕವಾಗಿ ಪೋಸ್ಟ್ ಹಾಕುತ್ತಾ ಕಮೆಂಟ್‍ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆಲ ನಿರ್ದಿಷ್ಟ ಸಮುದಾಯದ (ಮುಸ್ಲಿಮ್ ಸಮುದಾಯ) ಯುವಕ, ಯುವತಿಯರ ಬಗ್ಗೆ ಅತ್ಯಂತ ಅವಾಚ್ಯ ಶಬ್ದಗಳಿಂದ, ಅಸಹ್ಯಕರ ಕಮೆಂಟ್ ಗಳು ಖಾತೆಯಿಂದ ಬರುತ್ತಿದೆ. ಇದರೊಂದಿಗೆ ಸಮುದಾಯ, ಜಾತಿ ನಿಂದನೆಯನ್ನೂ ಮಾಡಿದ್ದು, ಬುರ್ಖಾ ಧರಿಸುವುದೇ ಅನೈತಿಕ ಸಂಬಂಧ ಇರಿಸಿಕೊಳ್ಳಲು ಎಂಬಂತಹ ಅವಾಚ್ಯ ಶಬ್ದಗಳನ್ನೂ ಯಾವುದೇ ಭೀತಿ ಇಲ್ಲದೇ ಸಾಮಾಜಿ ಜಾಲತಾಣಗಳಲ್ಲಿ ಬಳಕೆ ಮಾಡಿದ್ದಾರೆ ಎನ್ನಲಾಗಿದೆ.

ರಂಜಿನಿಗೌಡ ಎಂಬ ಹೆಸರಿನ ಈ ಫೇಸ್‍ಬುಕ್ ಖಾತೆಯಲ್ಲಿ ಆಶ್ಲೀಲ ಕಾಮೆಂಟ್‍ಗಳು ನಿರಂತರವಾಗಿ ಬರುತ್ತಿದ್ದು, ಆದರೆ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಡುವುದಾಗಿ ಹೇಳಿಕೊಂಡಿರುವ ಚುನಾವಣಾ ಆಯೋಗ ಅವರ ವಿರುದ್ಧ ಇದುವರೆಗೂ ಯಾವುದೇ ಕ್ರಮಕೈಗೊಂಡಿರುವ ಬಗ್ಗೆ ವರದಿಯಾಗಿಲ್ಲ. 

ಮೋದಿ, ಬಿಜೆಪಿ ಪರ ಸಾಮಾಜಿಕ ಜಾಲತಾಣಗಳ ಮೂಲಕ ಚುನಾವಣಾ ಪ್ರಚಾರ ಮಾಡುವ ಭರದಲ್ಲಿ ರಂಜಿನಿಗೌಡ ಒಂದು ಧರ್ಮದವರ ಭಾವನೆಗಳಿಗೆ ಧಕ್ಕೆ ತಂದು ಸಾಮರಸ್ಯ ಕದಡುವ, ವಿಕೃತಿ ಮೆರೆಯುತ್ತಿರುವ ಬಗ್ಗೆ ಕೆಲ ಪ್ರಜ್ಞಾವಂತರು ಆತಂಕ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆ ಈ ಖಾತೆಯ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಚಿಕ್ಕಮಗಳೂರಿನ ಅಂಜುಮಾನ್ ಸಂಘಟನೆ ಹಾಗೂ ಜೆಡಿಎಸ್ ಮುಖಂಡರು ಈ ಖಾತೆಯ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.

ರಂಜಿನಿಗೌಡ ಅವರು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಧರ್ಮದ ಬಗ್ಗೆ ಅವಹೇಳಕಾರಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆಂಬ ಮಾಹಿತಿ ಬಂದಿದೆ. ಈ ಬಗ್ಗೆ ಯಾರೂ ದೂರು ನೀಡಿಲ್ಲ. ದೂರು ನೀಡಿದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು.
- ಹರೀಶ್ ಪಾಂಡೆ, ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News