ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ ಹಿರಿಯ ನಾಯಕ ಭೌಮಿಕ್

Update: 2019-03-19 14:45 GMT

ಅಗರ್ತಲಾ,ಮಾ.19: ತ್ರಿಪುರ ಬಿಜೆಪಿ ಉಪಾಧ್ಯಕ್ಷ ಸುಬಲ್ ಭೌಮಿಕ್ ಅವರು ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಲೋಕಸಭಾ ಚುನಾವಣೆಗಳಿಗೆ ಮುನ್ನ ರಾಜ್ಯದ ಆಡಳಿತಾರೂಢ ಬಿಜೆಪಿಗೆ ಭಾರೀ ಹಿನ್ನಡೆಯುಂಟಾಗಿದೆ. ತಾನು ಪಕ್ಷಕ್ಕೆ ‘ಹೊರೆ’ಯಾಗಿದ್ದೇನೆ ಎಂದು ತಾನು ಭಾವಿಸಿದ್ದೆ ಎಂದು ಭೌಮಿಕ್ ಹೇಳಿದ್ದಾರೆ.

ಮಾಜಿ ಸಚಿವ ಹಾಗೂ ಬಿಜೆಪಿಯ ರಾಜ್ಯ ನಾಯಕ ಪ್ರಕಾಶ ದಾಸ್, ಸಿಪಿಎಂ ಕೌನ್ಸಿಲರ್ ದೇಬಶಿಷ್ ಸೇನ್, ಬಿಜೆಪಿ ಕಿಸಾನ್ ಮೋರ್ಚಾ ಉಪಾಧ್ಯಕ್ಷ ಪ್ರೇಮತೋಷ್ ದೇಬನಾಥ್ ಮತ್ತು ಇತರರೂ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಮರುಸೇರ್ಪಡೆಗೊಂಡಿದ್ದಾರೆ. ಬುಧವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ತ್ರಿಪುರಾ ಭೇಟಿಗೆ ಮುನ್ನ ಈ ಬೆಳವಣಿಗೆ ನಡೆದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಪ್ರದ್ಯೋತ್ ಕಿಶೋರ ಮಾಣಿಕ್ಯ ದೆಬ್ಬರಮಾನ್ ಅವರು,ಇದು ಈ ನಾಯಕರ ನಿಜವಾದ ‘ಘರ್ ವಾಪ್ಸಿ’ಯಾಗಿದೆ ಎಂದರು. ರಾಜ್ಯದ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಸೋಲಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ ಪಕ್ಷದ ಹುದ್ದೆಗೆ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಭೌಮಿಕ್ ತಿಳಿಸಿದರು.

ಗೂಂಡಾಗಿರಿ, ಭಯೋತ್ಪಾದನೆ, ರಾಜಕೀಯ ಹಿಂಸೆ ಮತ್ತು ಸ್ವಜನಪಕ್ಷಪಾತ ವಿಷಯಗಳಲ್ಲಿ ಹಿಂದಿನ ಸಿಪಿಎಂ ಆಡಳಿತಕ್ಕೂ ಈಗಿನ ಬಿಜೆಪಿ ಆಡಳಿತಕ್ಕೂ ವ್ಯತ್ಯಾಸವಿಲ್ಲ. ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ. ಪಕ್ಷವು ಚಿಕ್ಕಾಸೂ ಬೆಲೆಯಿಲ್ಲದ ನಾಯಕರ ಸರ್ಕಸ್ ಕಂಪನಿಯಾಗಿಬಿಟ್ಟಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಭೌಮಿಕ್ ಹೇಳಿದರು.

ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಗೆ ಟಿಕೆಟ್‌ನ ಕೊಡುಗೆಯನ್ನು ನೀಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು. ಪಕ್ಷವು ಯಾವುದೇ ಹೊಣೆಯನ್ನು ವಹಿಸಿದರೂ ನಿರ್ವಹಿಸುವುದಾಗಿ ತಿಳಿಸಿದರು.

1970ರ ದಶಕದಿಂದಲೂ ಕಾಂಗ್ರೆಸ್ ನಾಯಕರಾಗಿದ್ದ ಅವರು 2014ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 2008ರಲ್ಲಿ ಸೋನಾಮುರಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News