ನೂತನ ಗೋವಾ ಸಿಎಂ ಸಾವಂತ್ ರಿಂದ ನಾಳೆ ಸದನದಲ್ಲಿ ವಿಶ್ವಾಸಮತ ಯಾಚನೆ

Update: 2019-03-19 14:44 GMT

ಪಣಜಿ,ಮಾ,19: ಗೋವಾದ ನೂತನ ಮುಖ್ಯಮಂತ್ರಿಯಾಗಿ ಮಂಗಳವಾರ ನಸುಕಿನ ಎರಡು ಗಂಟೆಯ ಸುಮಾರಿಗೆ ಪ್ರಮಾಣ ವಚನವನ್ನು ಸ್ವೀಕರಿಸಿದ ಬಿಜೆಪಿಯ ಪ್ರಮೋದ ಸಾವಂತ್ ಅವರು ಅಪರಾಹ್ನ ಪದಭಾರವನ್ನು ವಹಿಸಿಕೊಂಡಿದ್ದು,ತನ್ನ ಸರಕಾರದ ಬಹುಮತವನ್ನು ಸಾಬೀತುಗೊಳಿಸಲು ಬುಧವಾರ ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಯಾಚಿಸಲಿದ್ದಾರೆ.

ಬಿಜೆಪಿ ನೇತೃತ್ವದ ಸರಕಾರವು 21 ಶಾಸಕರ ಬೆಂಬಲವನ್ನು ಹೊಂದಿರುವುದಾಗಿ ಹೇಳಿಕೊಂಡಿದೆ. ಇವರಲ್ಲಿ ಬಿಜೆಪಿಯ 12,ಮಿತ್ರಪಕ್ಷಗಳಾದ ಜಿಎಫ್‌ಪಿ ಮತ್ತು ಎಂಜಿಪಿಯ ತಲಾ ಮೂವರು ಶಾಸಕರು ಹಾಗೂ ಮೂವರು ಪಕ್ಷೇತರ ಶಾಸಕರು ಸೇರಿದ್ದಾರೆ.

ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಮತ್ತು ಬಿಜೆಪಿ ಶಾಸಕ ಫ್ರಾನ್ಸಿಸ್ ಡಿಸೋಜ ಅವರ ನಿಧನದಿಂದಾಗಿ ಹಾಗೂ ಕಾಂಗ್ರೆಸ್ ಶಾಸಕರಾದ ಸುಭಾಷ್ ಶಿರೋಡ್ಕರ್ ಮತ್ತು ದಯಾನಂದ ಸೋಪ್ತೆ ಅವರ ರಾಜೀನಾಮೆಯಿಂದಾಗಿ 40 ಸದಸ್ಯಬಲದ ಗೋವಾ ವಿಧಾನಸಭೆಯಲ್ಲಿ ಶಾಸಕರ ಸಂಖ್ಯೆ 36ಕ್ಕಿಳಿದಿದೆ.

14 ಶಾಸಕರನ್ನು ಹೊಂದಿರುವ ಕಾಂಗ್ರಸ್ ರಾಜ್ಯದಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿದೆ. ಎನ್‌ಸಿಪಿ ಕೂಡ ಓರ್ವ ಶಾಸಕನನ್ನು ಹೊಂದಿದೆ.

ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾವಂತ್,ನಮ್ಮ ಬಹುಮತವನ್ನು ಸಾಬೀತುಗೊಳಿಸಲು ಬುಧವಾರ ವಿಶ್ವಾಸಮತಕ್ಕಾಗಿ ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದೇವೆ. ಬಲಾಬಲ ಪರೀಕ್ಷೆಗೆ ನಾವು ಸನ್ನದ್ಧರಾಗಿದ್ದೇವೆ ಎಂದರು.

ಪಾರಿಕ್ಕರ್ ಅವರು ಕೈಗೆತ್ತಿಕೊಂಡಿದ್ದ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವುದು ತನ್ನ ಆದ್ಯತೆಯಾಗಲಿದೆ ಎಂದ ಅವರು,ಪಾರಿಕ್ಕರ್ ಅವರ ಅಂತ್ಯಸಂಸ್ಕಾರ ನಡೆದ ಪಣಜಿಯ ಮಿರಾಮಾರ್ ಬೀಚ್‌ನಲ್ಲಿ ಅವರ ಸ್ಮಾರಕವೊಂದನ್ನು ರಾಜ್ಯ ಸರಕಾರವು ನಿರ್ಮಿಸಲಿದೆ ಎಂದು ತಿಳಿಸಿದರು.

ಸಾವಂತ ಜೊತೆ 11 ಸಚಿವರೂ ಪ್ರಮಾಣ ವಚನ ಸ್ವೀಕರಿಸಿದ್ದು,ಜಿಎಫ್‌ಪಿಯ ಮುಖ್ಯಸ್ಥ ವಿಜಯ ಸರ್ದೇಸಾಯಿ ಮತ್ತು ಎಂಜಿಪಿಯ ಸುದಿನ್ ಧಾವಳಿಕರ್ ಅವರು ಉಪಮುಖ್ಯಮಂತ್ರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News