ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: ಓರ್ವ ಮೃತ್ಯು, 22 ಮಂದಿಗೆ ಗಾಯ

Update: 2019-03-19 15:09 GMT

ಬೆಂಗಳೂರು, ಮಾ.19: ಧಾರವಾಡ ನಗರದಲ್ಲಿ ಏಕಾಏಕಿ ಏಳು ಅಂತಸ್ತಿನ ಕಟ್ಟಡ ಕುಸಿದುಬಿದ್ದ ಪರಿಣಾಮ ಓರ್ವ ಯುವಕ ಮೃತಪಟ್ಟು, 22 ಜನರಿಗೆ ಗಾಯಗಳಾಗಿದ್ದು, ಇನ್ನೂ, 10 ಮಂದಿ ಅವಶೇಷಗಳ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಧಾರವಾಡದ ಕುಮಾರೇಶ್ವರ ನಗರದಲ್ಲಿದ್ದ ವಾಣಿಜ್ಯ ಸಂಕಿರ್ಣ ಕಟ್ಟಡ ಕುಸಿದು ಬಿದ್ದಿದ್ದು, ಈ ದುರ್ಘಟನೆಯಲ್ಲಿ ಸಲೀಂ ಮುಕಾಂದಾರ್(28) ಎಂಬ ಯುವಕ ಮೃತಪಟ್ಟಿರುವುದಾಗಿ ತಿಳಿದುಬಂದಿದ್ದು, 22 ಮಂದಿಗೆ ಗಾಯಗಳಾಗಿ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ವಾಣಿಜ್ಯ ಸಂಕಿರ್ಣ ಕಟ್ಟಡದ ಮಾಜಿ ಸಚಿವರೊಬ್ಬರಿಗೆ ಸೇರಿದ್ದು ಎನ್ನಲಾಗಿದೆ. ಕಟ್ಟಡದ 4 ಮತ್ತು 5ನೆ ಅಂತಸ್ತಿನಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಕಳಪೆ ಕಾಮಗಾರಿಯಿಂದಾಗಿ ದಿಢೀರ್ ಕಟ್ಟಡ ಕುಸಿದು ಬಿದ್ದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ, ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸರು, ಅವಶೇಷಗಳ ಅಡಿ ಸಿಲುಕಿರುವ 19 ಜನರನ್ನು ಹೊರಕ್ಕೆ ತೆಗೆದರು. ಇದರಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಗಾಯಾಳುಗಳ ವಿವರ: ಮುನಾವರ ಬಸ್ಸಾಪುರ, ಹಝರತ್ ಕುಂದಗೋಳ, ಮಂಜುನಾಥ ಬೆಂದ್ರೆ ಯಲ್ಲಪ್ಪ ಜೋಗಿನ್, ಮುಹಮ್ಮದ್ ಗೌಸ್, ನೂರ್ ಅಹ್ಮದ್, ಮಹಾಬಲಿ ಹಂಚಿನಾಳ, ಮಮತಾ ದಮ್ಮಳ್ಳಿ, ಚನ್ನಬಸು ಕಲದಗಿ, ಮಲ್ಲಪ್ಪಕಡದವರ, ಬಶೀರ್ ಕಲದಗಿ, ನಾಗರಾಜ್ ಶೀಲವಂತರ, ಸುಲ್ತಾನ್ ಸಾಬ್ ಶೇಕ್, ಮಲ್ಲನಗೌಡ ಪಾಟೀಲ, ಶಿವನಗೌಡ ನರಗುಂದ, ಸುರೇಂದ್ರ ಯಾದವ, ಸುನೀಲ ಕುಮಾರ, ಸಂಗ್ರಾಮ ಅರಡಿ, ಸುಹೇಲ್ ಮಕಾಂದಾರ, ಮಲ್ಲಪ್ಪ ಗುಡ್ಡದವರ ಎಂಬುವರು ಗಾಯಾಳುಗಳು ಎಂದು ತಿಳಿದುಬಂದಿದೆ.

ಕಟ್ಟಡ ಕುಸಿತ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಜನರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರಣ, ತುರ್ತು ಕಾರ್ಯಾಚರಣೆಗೆ ಅಡ್ಡಿ ಉಂಟಾಗಿತ್ತು. ಬಳಿಕ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ನಾಗರಾಜ್ ಅವರು ನಿಷೇಧಾಜ್ಞೆ ಹೊರಡಿಸಿದರು. ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಅಗ್ನಿಶಾಮಕ ದಳದ ರವಿಕಾಂತೇಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಧಾರವಾಡ ತಲುಪಿದರು. ಎನ್‌ಡಿಆರ್‌ಎಫ್ ಸೇರಿದಂತೆ ವಿವಿಧ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.

ಧಾರವಾಡದಲ್ಲಿ ಬಹುಮಹಡಿ ಕಟ್ಟಡ ಕುಸಿತದ ಘಟನೆ ಆಘಾತಕಾರಿಯಾದುದು. ಅವಶೇಷದಡಿ ಸಿಲುಕಿರುವ ಜನರ ರಕ್ಷಣೆ ಮತ್ತು ರಕ್ಷಿಸಲ್ಪಟ್ಟವರಿಗೆ ಚಿಕಿತ್ಸೆ ತಕ್ಷಣ ನಡೆಯಬೇಕಾದ ಕೆಲಸ. ಮುಖ್ಯಮಂತ್ರಿಯವರ ಜತೆ ಮಾತನಾಡುತ್ತೇನೆ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News