ಮೊದಲ ಹಂತದ ನಾಮಪತ್ರ ಸಲ್ಲಿಕೆ ಆರಂಭ: ರಾಜ್ಯಾದ್ಯಂತ 11 ನಾಮಪತ್ರ ಸಲ್ಲಿಕೆ

Update: 2019-03-19 15:34 GMT

ಬೆಂಗಳೂರು, ಮಾ.19: ರಾಜ್ಯದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಡಿಸಿದ್ದು, ಮೊದಲ ದಿನವೇ ರಾಜ್ಯದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ 6 ಅಭ್ಯರ್ಥಿಗಳಿಂದ 11 ನಾಮಪತ್ರಗಳ ಸಲ್ಲಿಕೆಯಾಗಿವೆ ಎಂದು ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿಗಳ ಆದೇಶದ ಅನ್ವಯ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಹೊರಡಿಸಲಾಗಿದೆ. ಮೊದಲ ದಿನ ಬೆ.11 ರಿಂದ ಮಧ್ಯಾಹ್ನ ಮೂರು ಗಂಟೆವರೆಗೂ ನಾಮಪತ್ರ ಸ್ವೀಕರಿಸಲಾಗಿದೆ ಎಂದು ತಿಳಿಸಿದರು.

ಎಲ್ಲೆಲ್ಲಿ ನಾಮಪತ್ರ ಸಲ್ಲಿಕೆ ?

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ 1, ಮಂಡ್ಯ ಲೋಕಸಭಾ ಕ್ಷೇತ್ರದಿಂದ 3, ಮೈಸೂರು ಲೋಕಸಭಾ ಕ್ಷೇತ್ರದಿಂದ 6 ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ 1 ನಾಮಪತ್ರ ಸಲ್ಲಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದರು. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ಸಿವಿಜಿಲ್ ಆ್ಯಪ್‌ನಲ್ಲಿ 235 ದೂರುಗಳು ದಾಖಲಾಗಿದ್ದು, ಎಲ್ಲವನ್ನೂ ಹಂತ ಹಂತವಾಗಿ ವಿಲೇವಾರಿ ಮಾಡಲಾಗಿದೆ. ಇನ್ನುಳಿದಂತೆ ಮತದಾರರ ಸಹಾಯವಾಣಿಯ ಮೂಲಕ ಇದುವರೆಗೂ 35 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿದ್ದು, 34 ಸಾವಿರಕ್ಕೂ ಅಧಿಕ ದೂರುಗಳನ್ನು ವಿಲೇವಾರಿ ಮಾಡಲಾಗಿದೆ. ಸಹಾಯವಾಣಿಯಲ್ಲಿ ಅಧಿಕವಾಗಿ ಮಾಹಿತಿ ಪಡೆಯಲು ಬಳಸಿದ್ದು, 29,755 ಕರೆಗಳು ಸ್ವೀಕಾರವಾಗಿವೆ. 2139 ದೂರುಗಳು ಬಂದಿದ್ದು, ಅದನ್ನು ವಿಲೇವಾರಿ ಮಾಡಲಾಗುತ್ತಿದೆ ಎಂದರು.

ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು 87.36 ಲಕ್ಷ ನಗದು, 23,800 ಮೌಲ್ಯದ ಮದ್ಯ, 11.82 ಲಕ್ಷ ಮೌಲ್ಯದ ಬೆಳ್ಳಿ, 19.70 ಲಕ್ಷ ಮೌಲ್ಯದ ವಾಹನಗಳು, 6.78 ಲಕ್ಷ ಮೌಲ್ಯದ ಮತ್ತಿತರೆ ವಸ್ತುಗಳು ವಶಪಡಿಸಿಕೊಂಡಿದೆ. ಫ್ಲೈಯಿಂಗ್ ಸ್ಕ್ವಾಡ್ ತಂಡಗಳು 47.79 ಲಕ್ಷದ ನಗದು, 18.84 ಲಕ್ಷ ಮೌಲ್ಯದ ಮದ್ಯ, 4.2 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ, 60.39 ಲಕ್ಷ ಮೌಲ್ಯದ ವಾಹನಗಳು ಹಾಗೂ 5.70 ಲಕ್ಷ ಮೌಲ್ಯದ ಮತ್ತಿತರೆ ಸಾಮಗ್ರಿಗಳು ಮುಟ್ಟುಗೋಲು ಹಾಕಿದೆ. ಪೊಲೀಸ್ ಪ್ರಾಧಿಕಾರಗಳು 7,050 ನಗದು, 1.84 ಮೌಲ್ಯದ ಮದ್ಯ, 1.84 ಲಕ್ಷ ಮೌಲ್ಯದ ಹದಿಮೂರು ವಾಹನಗಳು, 2.50 ಲಕ್ಷ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿದರು.

ಅಬಕಾರಿ ಇಲಾಖೆಯು 13.58 ಕೋಟಿ ಮೌಲ್ಯದ ಐಎಂಎಲ್ ಮದ್ಯ ವಶಪಡಿಸಿಕೊಂಡು 721 ಪ್ರಕರಣಗಳನ್ನು ದಾಖಲಿಸಿದೆ. 638 ಮದ್ಯದ ಪರವಾನಿಗೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವಿವರಿಸಿದರು.

ಚುನಾವಣಾ ಆ್ಯಪ್ ಬಿಡುಗಡೆ: ಮತದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಚುನಾವಣಾ ಆ್ಯಪ್ ತಯಾರಿಸಿದ್ದು, ಹಲವು ರೀತಿಯಲ್ಲಿ ಮತದಾನದ ಸಮಯದಲ್ಲಿ ಮತದಾರರಿಗೆ ಸಹಾಯ ಮಾಡಲಿದೆ ಎಂದು ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದರು.

ಈ ಆ್ಯಪ್ ಮೂಲಕ ಮತದಾರರು ತಮಗೆ ಸಂಬಂಧಿಸಿದ ಮತಗಟ್ಟೆ, ಕ್ಷೇತ್ರದ ವಿವರ, ಅದು ಇರುವ ಸ್ಥಳ, ಪಥ ಸೂಚಕ, ತಾವಿರುವ ಪ್ರದೇಶದಿಂದ ಇರುವ ದೂರ ಸೇರಿದಂತೆ ಎಲ್ಲ ಮಾಹಿತಿ ಪಡೆಯಬಹುದು. ಇದಕ್ಕಾಗಿ ಮತದಾರರು ತಮ್ಮ ಎಪಿಕ್ ಸಂಖ್ಯೆಯನ್ನು ಹಾಗೂ ಹೆಸರು ನಮೂದಿಸಬೇಕು. ಹಿರಿಯ ನಾಗರಿಕರು ಹಾಗೂ ವಿಕಲಚೇತನ ಮತದಾರರಿಗೆ ಸಾರಿಗೆ ವ್ಯವಸ್ಥೆ ಹಾಗೂ ಗಾಲಿ ಕುರ್ಚಿಯನ್ನು ಕಾಯ್ದಿರಿಸುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ ಎಂದರು.

ನಗರ ಪ್ರದೇಶದ ಮತಗಟ್ಟೆಗಳಲ್ಲಿನ ಸದರಿ ಸಾಲುಗಳ ಬಗ್ಗೆ ಮಾಹಿತಿ ಸಿಗಲಿದೆ. ಪ್ರತಿ 2 ಗಂಟೆಗೊಮ್ಮೆ ಕ್ಷೇತ್ರವಾರು ಮತದಾನ ವಿವರ ಅಪ್‌ಲೋಡ್ ಮಾಡಲಾಗುತ್ತದೆ. ಪ್ರತಿಸುತ್ತಿನ ಮತ ಎಣಿಕೆಯನ್ನು ನೇರವಾಗಿ ಪ್ರಕಟಿಸಲಾಗುತ್ತದೆ. ಚುನಾವಣೆಗೆ ನಿಯೋಜನೆಗೊಂಡಿರುವ ಎಲ್ಲ ಅಧಿಕಾರಿ, ಅಭ್ಯರ್ಥಿಗಳ ವಿವರ ಸಿಗುತ್ತದೆ. ಪೊಲೀಸ್ ಠಾಣೆ, ಆಸ್ಪತ್ರೆ ಇತ್ಯಾದಿ ಸೇರಿದಂತೆ ತುರ್ತು ಸೇವೆಗಳ ಸ್ಥಳಗಳ ಮಾಹಿತಿ ಲಭ್ಯವಿರುತ್ತದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News