‘ಮೈ ಭೀ ಚೌಕಿದಾರ್’ ಅಭಿಯಾನದ ಸಹಭಾಗಿಗಳೊಂದಿಗೆ ಮಾ.31ರಂದು ಪ್ರಧಾನಿ ಮೋದಿ ವೀಡಿಯೊ ಸಂವಾದ

Update: 2019-03-19 17:26 GMT

ಹೊಸದಿಲ್ಲಿ,ಮಾ.19: ‘ಮೈ ಭೀ ಚೌಕಿದಾರ್’ ಪ್ರಚಾರ ಅಭಿಯಾನದ ಭಾಗವಾಗುವುದಾಗಿ ಶಪಥ ತೊಟ್ಟಿರುವ ಬೆಂಬಲಿಗರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾ.31ರಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಅಭಿಯಾನದ ಯಶಸ್ಸಿನ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಈ ಸಂವಾದ ಕಾರ್ಯಕ್ರಮ ದೇಶಾದ್ಯಂತ 500 ಸ್ಥಳಗಳಲ್ಲಿ ನಡೆಯಲಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ರವಿಶಂಕರ ಪ್ರಸಾದ್ ಅವರು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಅಭಿಯಾನವು ಸಾಮೂಹಿಕ ಆಂದೋಲನವಾಗಿ ರೂಪುಗೊಂಡಿದೆ ಮತ್ತು ಇಡೀ ದಿನ ಸಾಮಾಜಿಕ ಮಾಧ್ಯಮಗಳಲ್ಲಿ ಜಾಗತಿಕ ಟ್ರೆಂಡ್ ಆಗಿತ್ತು ಎಂದು ತಿಳಿಸಿದ ಅವರು,ಈ ಕುರಿತು 20 ಲಕ್ಷ ಜನರು ಟ್ವೀಟಿಸಿದ್ದಾರೆ. ಸಾಮಾಜಿಕ ಜಾಲತಾಣಗಳು ಮತ್ತು ನಮೋ ಆ್ಯಪ್‌ನಲ್ಲಿ ಒಂದು ಕೋಟಿ ಜನರು ಅಭಿಯಾನವನ್ನು ಬೆಂಬಲಿಸಿದ್ದಾರೆ ಎಂದರು.

ಅಭಿಯಾನದ ಟೀಕಾಕಾರರ ವಿರುದ್ಧ ದಾಳಿ ನಡೆಸಿದ ಅವರು,ತಮ್ಮ ಕುಟುಂಬಗಳೊಂದಿಗೆ ಜಾಮೀನಿನಲ್ಲಿ ಹೊರಗಿರುವವರು ಮತ್ತು ವಿವಿಧ ಕಾನೂನು ಕ್ರಮಗಳನ್ನು ಎದುರಿಸುತ್ತಿರುವವರಿಗೆ ‘ಮೈ ಭೀ ಚೌಕಿದಾರ್’ ಅಭಿಯಾನದಿಂದ ತೊಂದರೆಯಾಗಿದೆ. ‘ಚೌಕಿದಾರ್’ ಇರುವುದು ಶ್ರೀಮಂತರಿಗಾಗಿ ಎಂದು ಕೆಲವರು ಹೇಳುತ್ತಿದ್ದಾರೆ. ಇದೇ ಜನರು ಬಡಜನರ ಸುಮಾರು 12 ಲ.ಕೋ.ರೂ.ಗಳನ್ನು ಕೊಳ್ಳೆ ಹೊಡೆದಿದ್ದರು ಮತ್ತು ಈಗ ಈ ಜನರು ಈ ಅಭಿಯಾನವನ್ನು ಟೀಕಿಸುತ್ತಿದ್ದಾರೆ ಎಂದರು.

 ಸೋಮವಾರ ಬೆಂಗಳೂರಿನಲ್ಲಿ ನವೋದ್ಯಮಗಳಿಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿಯವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದ  ಮತ್ತು ಪ್ರಧಾನಿ ಮೋದಿಯವರಿಗೆ ಬೆಂಬಲ ವ್ಯಕ್ತಪಡಿಸಿದ್ದ ಕೆಲವರನ್ನು ಬಂಧಿಸಲಾಗಿದೆ. ವಾಕ್‌ಸ್ವಾತಂತ್ರದ ಬಗ್ಗೆ ನಮಗೆ ಉಪದೇಶಿಸುವ ಬದಲು ರಾಹುಲ್ ಗಾಂಧಿಯವರೇ ಖುದ್ದು ಕಲಿತುಕೊಳ್ಳಲಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News