ಭಯೋತ್ಪಾದನೆ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಶಿಕ್ಷಕ ಪೊಲೀಸ್ ಕಸ್ಟಡಿಯಲ್ಲಿ ಸಾವು

Update: 2019-03-19 17:29 GMT

ಶ್ರೀನಗರ, ಮಾ.19: ಭಯೋತ್ಪಾದನೆ ಆರೋಪದಲ್ಲಿ ಬಂಧಿತನಾಗಿದ್ದ 28 ವರ್ಷ ವಯಸ್ಸಿನ ಶಾಲಾ ಅಧ್ಯಾಪಕನೊಬ್ಬ ಇಲ್ಲಿನ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾನೆ. ಅಧ್ಯಾಪಕ ರಿಝ್ವಾನ್ ಪಂಡಿತ್ ಕಸ್ಟಡಿಯಲ್ಲಿ ಮೃತಪಟ್ಟ ಘಟನೆ ಬಹಿರಂಗಗೊಂಡ ಬೆನ್ನಲ್ಲೇ, ತವರು ಜಿಲ್ಲೆಯಾದ ಪುಲ್ವಾಮದಲ್ಲಿ ಭಾರೀ ಪ್ರತಿಭಟನೆ ಭುಗಿಲೆದ್ದಿರುವುದಾಗಿ ವರದಿಯಾಗಿದೆ.

ರಿಝ್ವನ್ ಸಾವಿನ ಬಗ್ಗೆ ರಾಜ್ಯ ಸರಕಾರವು ಮಾಜಿಸ್ಟ್ರೇಟ್ ಮಟ್ಟದ ತನಿಖೆಗೆ ಆದೇಶ ನೀಡಿದೆ. ಜಮ್ಮುಕಾಶ್ಮೀರದ ಪುಲ್ವಾಮದ ಅವಂತಿಪೊರಾದ ನಿವಾಸಿಯಾದ ರಿಝ್ವಾನ್ ಪಂಡಿತ್ ಸೋಮವಾರ ಹಾಗೂ ಮಂಗಳವಾರದ ನಡುವೆ ಮಧ್ಯರಾತ್ರಿಯಲ್ಲಿ ಸಾವನ್ನಪ್ಪಿದ್ದಾನೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಖಾಸಗಿ ಶಾಲೆಯೊಂದರಲ್ಲಿ ಅಧ್ಯಾಪಕರಾಗಿರುವ ರಿಝ್ವಾನ್ ನನ್ನು ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿ ಮೂರು ದಿನಗಳ ಹಿಂದೆ ಭದ್ರತಾ ಏಜೆನ್ಸಿಗಳು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ರಿಝ್ವನ್ ನಿಧನದ ಸುದ್ದಿ ಹರಡುತ್ತಿದ್ದಂತೆಯೇ ಅವಂತಿಪೊರಾದಲ್ಲಿ , ಉದ್ರಿಕ್ತ ಪ್ರತಿಭಟನಕಾರರು ಪೊಲೀಸರೊಂದಿಗೆ ಘರ್ಷಣೆಗಿಳಿದರೆಂದು ವರದಿಯಾಗಿದೆ.

ಭದ್ರತಾ ಸಿಬ್ಬಂದಿಗಳ ಮೇಲೆ ಪ್ರತಿಭಟನಾ ನಿರತರು ಕಲ್ಲೆಸೆದಾಗ, ಅವರನ್ನು ಚದುರಿಸಲು ಅಶ್ರುವಾಯುಗಳನ್ನು ಸಿಡಿಸಲಾಯಿತು. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಶಿಕ್ಷಕ ರಿಝ್ವನ್ ಕಸ್ಟಡಿ ಸಾವಿನ ಘಟನೆಯನ್ನು ಹಲವಾರು ರಾಜಕಾರಣಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದಾರೆ. ಘಟನೆ ಬಗ್ಗೆ ನಿಗದಿತ ಕಾಲಾವಧಿಯೊಳಗೆ ತನಿಖೆ ಪೂರ್ಣಗೊಳ್ಳಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಅವರು ಆಗ್ರಹಿಸಿದ್ದಾರೆ.

 ‘‘ಮಧ್ಯರಾತ್ರಿಯ ದಾಳಿಗಳು, ವ್ಯಾಪಕ ಬಂಧನಗಳು, ಕಸ್ಟಡಿ ಹತ್ಯೆಗಳು, ಪ್ರಜಾಪ್ರಭುತ್ವದ ಹಕ್ಕುಗಳ ನಿರಾಕರಣೆ. ಹೀಗೆ ಕಾಶ್ಮೀರವು ಹಿಂದಿನ ವಿನಾಶಕಾರಿ ಪಿಡಿಪಿ-ಬಿಜೆಪಿ ಆಡಳಿತದ ದುಷ್ಪರಿಣಾಮಗಳಿಂದ ಹಾಗೂ ಮೋದಿ ಸರಕಾರದ ತೋಳ್ಬಲದ ನೀತಿಯಿಂದಾಗಿ, ಯಾತನೆ ಪಡುವುದನ್ನು ಮುಂದುವರಿಸಿದೆ’’ ಎಂದು ನ್ಯಾಶನಲ್ ಕಾನ್ಫರೆನ್ಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News