ಮೋದಿ ಮತ್ತೆ ಪ್ರಧಾನಿಯಾದಲ್ಲಿ ದೇಶದಲ್ಲಿ ಚುನಾವಣೆ ಇರದು: ಗೆಹ್ಲೋಟ್

Update: 2019-03-19 17:39 GMT

ಹೊಸದಿಲ್ಲಿ,ಮಾ.19: ಪ್ರಧಾನಿ ನರೇಂದ್ರ ಮೋದಿ ಎರಡನೆ ಬಾರಿ ಪ್ರಧಾನಿಯಾಗಿ ಆಯ್ಕೆಯಾದಲ್ಲಿ, ಭಾರತವು ಇನ್ನೊಂದು ಲೋಕಸಭಾ ಚುನಾವಣೆಯನ್ನು ಕಾಣಲಾರದು ಹಾಗೂ ರಶ್ಯ, ಚೀನದ ದಾರಿಯಲ್ಲಿ ಸಾಗಲಿದೆ ಎಂದು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಕಟಕಿಯಾಡಿದ್ದಾರೆ.

ಮೋದಿ ನಾಯಕತ್ವದಲ್ಲಿ ಪ್ರಜಾಪ್ರಭುತ್ವ ಹಾಗೂ ದೇಶ ಎರಡೂ ಅಪಾಯದಲ್ಲಿದೆ. ಮರಳಿ ಅಧಿಕಾರ ಹಿಡಿಯಲು, ಮೋದಿ ಏನು ಮಾಡಲೂ ಸಿದ್ಧರಿದ್ದಾರೆಂದು ಗೆಹ್ಲೊಟ್ ಹೇಳಿದರು. ಈ ಗುರಿಯನ್ನು ಸಾಧಿಸಲು ಅವರು ಪಾಕಿಸ್ತಾನದ ಜೊತೆ ಯುದ್ಧ ಮಾಡಲು ಕೂಡಾ ತಯಾರಿದ್ದಾರೆಂದು ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಮೋದಿ ಓರ್ವ ‘ಉತ್ತಮ ನಟ’ ಎಂಬುದಾಗಿ ಬಣ್ಣಿಸಿದ ಗೆಹ್ಲೊಟ್, ಪ್ರಧಾನಿಯವರು, ಬಾಲಿವುಡ್‌ನಲ್ಲಿ ಒಳ್ಳೆಯ ಹೆಸರು ಮಾಡಬಹುದಾಗಿದೆ ಹಾಗೂ ಅಭಿನಯದಲ್ಲಿ ಅವರು ಅಳಿಸಲಾಗದ ಗುರುತನ್ನು ಬಿಟ್ಟುಹೋಗಿದ್ದಾರೆಂದರು. ಸುಳ್ಳು ಭರವಸೆಗಳನ್ನು ಮಾರಾಟ ಮಾಡುವುದರಲ್ಲಿಯೂ ಮೋದಿ ನಿಷ್ಣಾತರು ಎಂದರು.

‘‘ಒಂದು ಮೋದಿ ಪುನರಾಯ್ಕೆಗೊಂಡಲ್ಲಿ, ರಶ್ಯ ಹಾಗೂ ಚೀನಾ ಹಾಗೆ, ದೇಶದಲ್ಲಿ ಯೂ ಚುನಾವಣೆ ನಡೆಯುವುದೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ಖಾತರಿಯಿಲ್ಲ’’ ಎಂದರು.

ರಶ್ಯ ಹಾಗೂ ಚೀನದಲ್ಲಿ ಒಂದೇ ಪಕ್ಷದ ಆಡಳಿತವಿದ್ದು, ಅಲ್ಲಿ ಪ್ರಧಾನಿ ಅಥವಾ ಅಧ್ಯಕ್ಷರ ನೇಮಕವನ್ನು ಮುಂಚಿತವಾಗಿಯೇ ನಿರ್ಧರಿಸಲಾಗುವುದನ್ನು ಪ್ರಸ್ತಾವಿಸಿ ಗೆಹ್ಲೋಟ್ ಹೀಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News