ಟಿಎಂಸಿ ವಿರುದ್ಧ ನಿಂದನಾತ್ಮಕ ಹಾಡು ಪ್ರಸಾರ: ಬಿಜೆಪಿ ಸಂಸದ ಸುಪ್ರಿಯೊಗೆ ಆಯೋಗ ನೋಟಿಸ್

Update: 2019-03-19 17:48 GMT

ಹೊಸದಿಲ್ಲಿ, ಮಾ.19: ಟಿಎಂಸಿಯ ವಿರುದ್ಧ ಮಾನಹಾನಿಕರ ಹಾಡೊಂದನ್ನು ಹಾಡಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ ಅವರಿಗೆ ಚುನಾವಣಾ ಆಯೋಗವು ಮಂಗಳವಾರ ನೋಟಿಸ್ ಜಾರಿಗೊಳಿಸಿದೆ. ನ್ಯಾಯವಾದಿಯೊಬ್ಬರ ಮೂಲಕ ಟಿಎಂಸಿ ಪಕ್ಷವು, ಸುಪ್ರಿಯೊ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ತಿಳಿದುಬಂದಿದೆ. ದೂರಿನ ಜೊತೆಗೆ ವಿವಾದಾತ್ಮಕ ಹಾಡಿನ ಸಿಡಿಯನ್ನು ಕೂಡಾ ಆಯೋಗಕ್ಕೆ ಸಲ್ಲಿಸಲಾಗಿದೆ. ಟಿಎಂಸಿಯ ದೂರಿನ ಬಗ್ಗೆ ಮುಂದಿನ 48 ತಾಸುಗಳೊಳಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗವು ಸೂಚನೆಯನ್ನು ನೀಡಿದೆ.

‘‘ಚುನಾವಣಾ ಆಯೋಗದ ಪ್ರಮಾಣೀಕರಣ ಪಡೆಯದೆಯೇ ಹಾಡನ್ನು ಪೋರ್ಟಲ್ ಹಾಗೂ ಅಂತರ್ಜಾಲ ತಾಣದಲ್ಲಿ ಪ್ರಸಾರ ಮಾಡಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ’’ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು, ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಟಿಎಂಸಿಯ ದೂರಿನ ಪರಿಶೀಲನೆಗೆ ಆಯೋಗದ ಮಾಧ್ಯಮ ಪ್ರಮಾಣೀಕರಣ ಕಣ್ಗಾವಲು ಸಮಿತಿಯ ಅಧ್ಯಕ್ಷ ಸಂಜಯ್ ಬಸು ಅವರು ಮುಖ್ಯಚುನಾವಣಾ ಅಧಿಕಾರಿಯವರಿಗೆ ಶಿಫಾರಸು ಮಾಡಿದ್ದರು ಹಾಗೂ ಆನಂತರ ಸುಪ್ರಿಯೋ ಅವರಿಗೆ ನೋಟಿಸ್ ಒಂದನ್ನು ಕಳುಹಿಸಲಾಗಿತ್ತು. ಆನಂತರ ಸುಪ್ರಿಯೋ ಅವರಿಗೆ ನೋಟಿಸ್ ಜಾರಿಗೊಳಿಸಲಾಯಿತೆಂದು ಮೂಲಗಳು ತಿಳಿಸಿವೆ.

ಅಧಿಕೃತ ಮೂಲಗಳ ಪ್ರಕಾರ, ಬಾಬುಲ್ ಸುಪ್ರಿಯೋ ವಿರುದ್ಧ ಅಸಾನ್‌ಸೊಲ್ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

‘‘ಸುಪ್ರಿಯೋ ಪ್ರಸಾರ ಮಾಡಿರುವ ಹಾಡು ನಿಂದನಾತ್ಮಕ ರೂಪದಲ್ಲಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವರ್ಚಸ್ಸಿಗೆ ಹಾನಿ ಮಾಡಲು ಅವರ ವಿರುದ್ಧ ನಡೆಸಿದ ವೈಯಕ್ತಿಕ ದಾಳಿಯಾಗಿದೆ’’ ಎಂದು ಟಿಎಂಸಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News