ಹಿಂದಿ-ಇಂಗ್ಲಿಷ್ ಕಮಾಂಡ್‌ಗೆ ರಾಜ್ಯ ಪೊಲೀಸ್ ಇಲಾಖೆ ಗುಡ್‌ ಬೈ: ಕನ್ನಡಕ್ಕೆ ಜೈ

Update: 2019-03-19 17:53 GMT

ಬೆಂಗಳೂರು, ಮಾ.19: ಪರೇಡ್ ಸಂದರ್ಭದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನೀಡುವ ಕಮಾಂಡ್‌ಗಳಿಗೆ ಶೀಘ್ರವೇ ಕರ್ನಾಟಕ ಪೊಲೀಸರು ಗುಡ್‌ಬೈ ಹೇಳುವ ಕಾಲ ಕೂಡಿಬಂದಿದ್ದು, ಇನ್ನು ಮುಂದೆ ಕನ್ನಡ ಭಾಷೆಯಲ್ಲೇ ಕಮಾಂಡ್‌ಗಳನ್ನು ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ. 

ಈ ಸಂಬಂಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ಎನ್.ನೀಲಮಣಿ ರಾಜು ಪರೇಡ್ ಸಂದರ್ಭದಲ್ಲಿ ಕನ್ನಡದಲ್ಲೇ ಕಮಾಂಡ್‌ಗಳನ್ನು ಅನುಷ್ಠಾನಕ್ಕೆ ತರಲು ಅನುಮತಿ ನೀಡಬೇಕೆಂದು ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. 2016 ರಿಂದ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ಭಾಷೆಯಲ್ಲೇ ಕಮಾಂಡ್‌ಗಳನ್ನು ನೀಡಲಾಗುತ್ತಿದ್ದು, ಅದನ್ನು ಆಧರಿಸಿ ಕನ್ನಡ ಕಮಾಂಡ್‌ಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಗೃಹ ಇಲಾಖೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಗೃಹ ಇಲಾಖೆಯ ಅಧಿಕಾರಿಗಳು ಚುನಾವಣಾ ಕೆಲಸ-ಕಾರ್ಯಗಳಲ್ಲಿ ತಲ್ಲೀನರಾಗಿದ್ದು, ಈ ಪ್ರಕ್ರಿಯೆಗಳು ಮುಗಿದ ನಂತರ ಈ ವಿಷಯದ ಬಗ್ಗೆ ಪರಿಶೀಲಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 2017ರಲ್ಲಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಸ್.ಪರಶಿವಮೂರ್ತಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿ ವಿವಿಧ ಪೊಲೀಸ್ ಕೈಪಿಡಿಗಳನ್ನು ಪರಿಶೀಲಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು. ಮಾ.7 ರಂದು ಈ ಸಮಿತಿ ಬೆಳಗಾವಿಗೆ ತೆರಳಿ ಪರೇಡ್ ಸಂದರ್ಭದಲ್ಲಿ ಕನ್ನಡದಲ್ಲಿ ನೀಡುತ್ತಿರುವ ಕಮಾಂಡ್‌ಗಳನ್ನು ಪರಿಶೀಲಿಸಿ ಅದರಿಂದ ಪ್ರೇರಿತರಾಗಿ ಕನ್ನಡ ಭಾಷೆಯಲ್ಲೆ ಕಮಾಂಡ್ ಬಳಸಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಇಲಾಖೆ ಉಪಕಾರ್ಯದರ್ಶಿ ಜೆ.ಡಿ ಮಧುಚಂದ್ರ ತೇಜಸ್ವಿ, ನೀಲಮಣಿ ಎನ್.ರಾಜು ಬರೆದಿರುವ ಪತ್ರ ಇನ್ನು ಪರಿಶೀಲಿಸಿಲ್ಲ. ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News