ಅಂಬೇಡ್ಕರ್ ಹೋರಾಟದಲ್ಲಿ ಹಿಂದುಳಿದ ಜಾತಿಯ ಪ್ರಮುಖ ಒಡನಾಡಿಗಳು

Update: 2019-03-19 18:44 GMT

ಅಂಬೇಡ್ಕರ್ ಅವರ ಹೋರಾಟದಲ್ಲಿ ಹಿಂದುಳಿದ ಜಾತಿಯವರ ಬಹುಮುಖ್ಯ ಪಾತ್ರವಿದ್ದು, ಈ ವಿಚಾರಗಳು ಇತಿಹಾಸದ ಕಾಲಗರ್ಭದಲ್ಲಿ ಲೀನವಾಗಿತ್ತು. ಅಂಬೇಡ್ಕರ್ ಅವರ ಬಗ್ಗೆ ಹೊಸದಾಗಿ ಸಂಶೋಧನೆಯಲ್ಲಿ ತೊಡಗಿದಾಗ ಈ ವಿಚಾರಗಳು ಮುನ್ನೆಲೆಗೆ ಬಂದಿವೆ. ಈ ಐತಿಹಾಸಿಕ ಮಹತ್ವದ ಮಾಹಿತಿಗಳು ದಲಿತ, ಹಿಂದುಳಿದ ಜಾತಿಯವರ ಐಕ್ಯ ಹೋರಾಟಕ್ಕೆ ಹೊಸ ಹೊಳಹನ್ನು ನೀಡಿದೆ.

ಅಂಬೇಡ್ಕರ್ ಅವರ ಹೋರಾಟಕ್ಕೆ ಸಾಕಷ್ಟು ಜನ ಹಿಂದುಳಿದ ಜಾತಿಯವರು ಜೊತೆ ನೀಡಿದ್ದು, ಅದರಲ್ಲಿ ಮೂವರ ಪಾತ್ರ ಬಹುಮುಖ್ಯವಾಗಿದೆ.

ಸೀತಾರಾಮ್ ಕೇಶವ ಬೊಲೆ (1869-1961)

ಸಮಾಜ ಸುಧಾರಕ ಹಾಗೂ ಹಿಂದುಳಿದ ಜಾತಿಯ ಹೋರಾಟಗಾರ ಹಾಗೂ ಶ್ರೀಮಂತರಾದ ಈಡಿಗ (ಭಂಡಾರಿ) ಜಾತಿಯ ಸೀತಾರಾಮ್ ಕೇಶವ ಬೊಲೆ ಅವರಿಗೆ 1907ರಲ್ಲಿ ಅಸ್ಪಶ್ಯ ಮಹಾರ್ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿ ಅಂಬೇಡ್ಕರ್ ಪ್ರತಿಷ್ಠಿತ ಎಲ್ಫಿನ್‌ಸ್ಟನ್ ಹೈಸ್ಕೂಲ್‌ನಿಂದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳೊಂದಿಗೆ ತೇರ್ಗಡೆ ಅದ ವಿಷಯ ತಿಳಿದು ಬರುತ್ತದೆ. ಒಬ್ಬ ದಲಿತ ವಿದ್ಯಾರ್ಥಿ ಮಾಡಿರುವ ಸಾಧನೆ ಬಗ್ಗೆ ಅವರಲ್ಲಿ ಅತೀವ ಸಂತಸ ಮೂಡಿಸುತ್ತದೆ. ಅಂಬೇಡ್ಕರ್ ಅವರನ್ನು ಸನ್ಮಾನಿಸುವ ತಿರ್ಮಾನ ತೆಗೆದುಕೊಳ್ಳುವ ಸೀತಾರಾಮ್ ಕೇಶವ ಬೊಲೆ ಅವರು, ಅ ಕಾರ್ಯಕ್ರಮಕ್ಕೆ ಸ್ವತಃ ಅವರೇ ಮುಖ್ಯ ಅತಿಥಿಯಾಗುತ್ತಾರೆ. ಈ ಕಾರ್ಯಕ್ರಮವು ದಲಿತ, ಹಿಂದುಳಿದ ಜಾತಿಯವರಲ್ಲಿ ಸಂಚಲನ ಸೃಷ್ಟಿಸುತ್ತದೆ. ಇದೇ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಗುರುಗಳು ಹಾಗೂ ಸಮಾಜ ಸುಧಾರಕ, ಲೇಖಕ ಕೃಷ್ಣಜೀ ಅರ್ಜುನ್ ಕೆಲೂಸ್ಕರ್ ಅಂಬೇಡ್ಕರ್ ಅವರಿಗೆ ಗೌತಮ ಬುದ್ಧನ ಜೀವನ ಚರಿತ್ರೆ ಕೊಡುಗೆ ನೀಡುತ್ತಾರೆ. ಅಲ್ಲಿಂದ ಶುರುವಾಗುವ ಅಂಬೇಡ್ಕರ್ ಹಾಗೂ ಸೀತಾರಾಮ್ ಕೇಶವ ಬೊಲೆ ಅವರ ಒಡನಾಟ, ಮುಂದೆ ಸಾಕಷ್ಟು ಜಂಟಿ ಹೋರಾಟಗಳಿಗೆ ಮುನ್ನುಡಿ ಆಗುತ್ತದೆ.

1920ರಲ್ಲಿ ಬೊಲೆ ಅವರು ಅಬ್ರಾಹ್ಮಣ ಪಕ್ಷ (ನಾನ್ ಬ್ರಾಹ್ಮಿಣ್ ಪಾರ್ಟಿ)ದಿಂದ ಮುಂಬೈ ವಿಧಾನ ಪರಿಷತ್ ಸದಸ್ಯರಾಗುತ್ತಾರೆ. ಅಸ್ಪಶ್ಯತೆಯ ಕಡು ವಿರೋಧಿಯಾದ ಬೊಲೆ ಅವರು 1923ರಲ್ಲಿ ಬ್ರಾಹ್ಮಣ ಮೇಲ್ಜಾತಿಯ ವಿರೋಧದ ನಡುವೆಯೂ ವಿಧಾನ ಪರಿಷತ್‌ನಲ್ಲಿ ದಲಿತರಿಗೆ ಸಾರ್ವಜನಿಕ ಜಲಮೂಲಗಳಾದ ಸಾರ್ವಜನಿಕ ನಲ್ಲಿ, ಬಾವಿ, ಹ್ಯಾಂಡ್ ಪಂಪ್, ಕೆರೆ, ನದಿ ಇತ್ಯಾದಿಗಳಲ್ಲಿ ನೀರನ್ನು ಬಳಸುವ ಹಕ್ಕನ್ನು ನೀಡುವ ರೆಸಲ್ಯೂಷನ್ ಮಂಡಿಸುತ್ತಾರೆ ಮತ್ತು ಅದು ಕಾನೂನು ಆಗಿ ಜಾರಿಯಾಗುವ ಹಾಗೆ ಮಾಡುತ್ತಾರೆ. ಇದೇ ಕಾನೂನಿನ ಅವಕಾಶ ಬಳಸಿಕೊಂಡು ಅಂಬೇಡ್ಕರ್ ಅವರು ಮಹಾಡ್ ಸತ್ಯಾಗ್ರಹ ಚಳವಳಿಯನ್ನು ಹಮ್ಮಿಕೊಂಡು ಯಶಸ್ವಿಯಾಗುತ್ತಾರೆ.

ಶೋಷಕ ಖೋತ್ ಕಂದಾಯ ತೆರಿಗೆ ವ್ಯವಸ್ಥೆ ವಿರುದ್ಧ ಅಂಬೇಡ್ಕರ್ ಮತ್ತು ಬೊಲೆ ಅವರ ಜಂಟಿ ಸಂಘರ್ಷ.

ಇಂದಿನ ಮಹಾರಾಷ್ಟ್ರ ರಾಜ್ಯ, ಮುಂಬೈ ಪ್ರೆಸಿಡೆನ್ಸಿಯ ಕೊಂಕಣ ಪ್ರಾಂತದಲ್ಲಿ ಖೋತ್ ಕಂದಾಯ ತೆರಿಗೆ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಅದಲ್ಲದೆ ಮಕ್ತ, ಬೆಗರ್ ಎಂಬ ಶೋಷಣೆ ಪದ್ಧತಿ ಕೂಡ ಇರುತ್ತದೆ. (1ಖೋತ್- ರೈತರು ಬೆಳೆದ ಬೆಳೆಗೆ ಹೆಚ್ಚುವರಿ ತೆರಿಗೆ. 2. ಮಕ್ತ- ರೈತರು ಬೆಳೆದ ಬೆಳೆಗಳಲ್ಲಿ ಖೋತ್‌ಗಳಿಗೆ ಹೆಚ್ಚುವರಿ ಪಾಲು. 3. ಬೆಗರ್- ಬಿಟ್ಟಿ ಚಾಕರಿ, ಸಂಬಳ ರಹಿತ ಕೂಲಿ ಮಾಡುವುದು.)

ಸಣ್ಣ ಭೂ ಹಿಡುವಳಿಯಲ್ಲಿ ಕೃಷಿ ಮಾಡುತ್ತಿರುವ ರೈತರ ಮೇಲೆ ಬ್ರಿಟಿಷ್ ಸರಕಾರ ಖೋತ್ ಕಂದಾಯ ತೆರಿಗೆಯನ್ನು ವಿಧಿಸುತ್ತದೆ. ಬಹುತೇಕ ಸಣ್ಣ ಹಿಡುವಳಿಯ ರೈತರಾದ ಮಹಾರ್, ಕೋಲಿ, ಭಂಡಾರಿ, ಆಗ್ರಿ, ಕುಣಬಿ ಸಮುದಾಯದವರು ಶೋಷಕ ಖೋತ್ ತೆರಿಗೆ ವ್ಯವಸ್ಥೆಯಿಂದ ನಲುಗಿ ಹೋಗಿರುತ್ತಾರೆ. ಬ್ರಿಟಿಷರು ಖೋತ್ ತೆರಿಗೆ ವಸೂಲಿ ಮಾಡಲು ಮುಸ್ಲಿಮ್, ಮರಾಠ, ಬ್ರಾಹ್ಮಣ ವರ್ಗದ ಬಲಿಷ್ಠರನ್ನು ನೇಮಕ ಮಾಡಿರುತ್ತಾರೆ. ಈ ಖೋತ್ ತೆರಿಗೆ ಸಂಗ್ರಾಹಕರು ಬ್ರಿಟಿಷರು ನಿಗದಿಪಡಿಸಿರುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ತೆರಿಗೆ ವಸೂಲಿ ಮಾಡುತ್ತಿರುತ್ತಾರೆ. ಮೊದಲೇ ಕಷ್ಟದಲ್ಲಿ ಇರುವ ಸಣ್ಣ ಹಿಡುವಳಿದಾರರನ್ನು ಇನ್ನಷ್ಟು ಸಂಕಟಕ್ಕೆ ಈಡು ಮಾಡುತ್ತಾರೆ.

1922ರಲ್ಲಿ ಅಂಬೇಡ್ಕರ್ ನೇತೃತ್ವದಲ್ಲಿ ದಲಿತರು, ಹಿಂದುಳಿದ ಜಾತಿಯವರು ಶೋಷಕ ಖೋತ್ ಕಂದಾಯ ವ್ಯವಸ್ಥೆ ವಿರುದ್ಧ ಹೋರಾಟ ಶುರುಮಾಡುತ್ತ್ತಾರೆ. ಅಂಬೇಡ್ಕರ್ ಅವರಿಗೆ ಬೆಂಬಲ ನೀಡುವ ಬೊಲೆ ಅವರು ಮುಂಬೈ ವಿಧಾನ ಪರಿಷತ್‌ನಲ್ಲಿ ಖೋತ್ ನಿಷೇಧ ಬಿಲ್ ಮಂಡಿಸುತ್ತಾರೆ. ಅದರೆ ಅದನ್ನು ಬಾಲ ಗಂಗಾಧರ ತಿಲಕ್ ತೀವ್ರವಾಗಿ ವಿರೋಧಿಸುತ್ತಾರೆ.

1924ರಲ್ಲಿ ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ನಂತರ ಸೀತಾರಾಮ್ ಕೇಶವ ಬೊಲೆ ಪ್ರತಿನಿಧಿಸುತ್ತಿದ್ದ ಅಬ್ರಾಹ್ಮಣ ಪಕ್ಷ ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳುತ್ತದೆ. ಹೀಗಾಗಿ ಕಾಂಗ್ರೆಸ್ ತ್ಯಜಿಸುವ ಬೊಲೆ ದಲಿತ, ಹಿಂದುಳಿದ ಜಾತಿಯವರನ್ನು ಸಂಘಟಿಸುವ ಕಾರ್ಯಕ್ಕೆ ಚಾಲನೆ ನೀಡುತ್ತಾರೆ.

1936ರಲ್ಲಿ ಅಂಬೇಡ್ಕರ್ ಅವರ ಐಎಲ್‌ಪಿ (ಇಂಡಿಯನ್ ಲೇಬರ್ ಪಾರ್ಟಿ)ಗೆ ಸೇರುತ್ತಾರೆ. ದೊಡ್ಡ ಪ್ರಮಾಣದಲ್ಲಿ ಹಿಂದುಳಿದ ಜಾತಿಯವರನ್ನು ಐಎಲ್‌ಪಿಗೆ ಸೇರಿಸಿ ಅಂಬೇಡ್ಕರ್ ಅವರ ಹೋರಾಟಕ್ಕೆ ಅನೆ ಬಲ ತರುತ್ತಾರೆ. ಅದೇ ಸಮಯದಲ್ಲಿ ಚುನಾವಣೆ ಕೂಡ ಘೋಷಣೆ ಆಗುತ್ತದೆ. ಅ ಚುನಾವಣೆಯಲ್ಲಿ ಐಎಲ್‌ಪಿಯ 17 ಜನ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಮತ್ತು ಬೊಲೆ ಅವರು ಕೊಂಕಣ ಪ್ರಾಂತದ ರತ್ನಗಿರಿಯಿಂದ ಸ್ಪರ್ಧಿಸುತ್ತಾರೆ. ಅದಾಗಲೇ ಕಾಂಗ್ರೆಸ್ ಪಕ್ಷವು ಗಾಂಧಿ ಅವರ ನೇತೃತ್ವದಲ್ಲಿ ಬೃಹತ್ ಶಕ್ತಿಯಾಗಿರುತ್ತದೆ. ಈ ಚುನಾವಣೆಯಲ್ಲಿ ಬೊಲೆ ಅವರು ಕಾಂಗ್ರೆಸ್ ಅಭ್ಯರ್ಥಿಯ ಎದುರು ಪರಾಭವಗೊಳ್ಳುತ್ತಾರೆ. ಚುನಾವಣೆಯ ಸೋಲಿನಿಂದ ಬೇಸರಗೊಳ್ಳುವ ಬೊಲೆ ಅವರು ಕೆಲ ತಿಂಗಳ ಕಾಲ ಎಲ್ಲಾ ಕಾರ್ಯಕ್ರಮಗಳಿಂದ ದೂರ ಉಳಿಯುತ್ತಾರೆ.

1938ರಲ್ಲಿ ಅವಸರ ಹಾಗೂ ಮೂರ್ಖತನದ ತೀರ್ಮಾನ ತೆಗೆದುಕೊಳ್ಳುವ ಬೊಲೆ ಹಿಂದುತ್ವವಾದಿ ಕೋಮುವಾದ ಪ್ರತಿಪಾದಿಸುವ ಹಿಂದೂ ಮಹಾಸಭಾ ಪಕ್ಷಕ್ಕೆ ಸೇರುತ್ತಾರೆ.ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದರೂ ಕೂಡ ಅಂಬೇಡ್ಕರ್ ಅವರ ಕೊನೆಯ ದಿನದವರೆಗೂ ಬೊಲೆ ಅವರು ಅಂಬೇಡ್ಕರ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತ್ತಾರೆ.

ನಾರಾಯಣ ನಾಗು ಪಾಟೀಲ್.(1892-1968)

ಆಗ್ರಿ (ಉಪ್ಪಾರ) ಸಮುದಾಯದ ಅದ್ವಿತೀಯ ಹೋರಾಟಗಾರರಾದ ನಾರಾಯಣ ನಾಗು ಪಾಟೀಲ್ ಅವರು, ಮಹಾರಾಷ್ಟ್ರ ರಾಜ್ಯದ ಕೊಂಕಣ ಪ್ರಾಂತ ಮುಂಬೈ ಸಮೀಪದ ರಾಯಗಡ್ ಜಿಲ್ಲೆಯ ಚರಿ ಗ್ರಾಮದವರು.

 ಉಪ್ಪುತಯಾರಿಕೆ, ಮೀನುಗಾರಿಕೆ ಕುಲವೃತ್ತಿಯ ನಾರಾಯಣ ನಾಗು ಪಾಟೀಲ್, ತಮ್ಮ ಶಿಕ್ಷಣವನ್ನು ಅವರ ಸ್ವಗ್ರಾಮ ಹಾಗೂ ಮುಂಬೈನಲ್ಲಿ ಪೂರೈಸುತ್ತಾರೆ. ಬಾಲ್ಯದಿಂದಲೂ ಹೋರಾಟ ಸ್ವಭಾವದಿಂದ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತ, ಅಬಾಲವೃದ್ಧರಿಗೆ ನ್ಯಾಯ ದೊರಕಿಸಿಕೊಡುತ್ತಾರೆ. ಈ ಹೋರಾಟವನ್ನು ಗುರುತಿಸುವ ಕಾಂಗ್ರೆಸ್ ಪಕ್ಷ ಮುಂಬೈ ಜಿಲ್ಲಾ ಬೋರ್ಡ್ ಚುನಾವಣೆಗೆ ತಮ್ಮ ಪಕ್ಷದಿಂದ ಟಿಕೆಟ್ ನೀಡುತ್ತಾರೆ.

1926ರ ಚುನಾವಣೆಯಲ್ಲಿ ಅತ್ಯಧಿಕ ಮತ ಪಡೆದು ವಿಜೇತರಾಗುತ್ತಾರೆ. ಜಿಲ್ಲಾ ಮಟ್ಟದಿಂದ ಬೆಳೆದು, ತಮ್ಮ ರಾಜಕೀಯ ಪಯಣವನ್ನು ರಾಜಧಾನಿ ಮುಂಬೈಗೆ ಬೆಳೆಸುತ್ತಾರೆ.

ಮುಂಬೈನ ಪ್ರತಿಷ್ಠಿತ, ಶ್ರೀಮಂತ ಕ್ಷೇತ್ರವಾದ ಕೊಲಾಬಾದಲ್ಲಿ 1930ರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ವಿಜೇತರಾಗುತ್ತಾರೆ. ಕಾಂಗ್ರೆಸ್‌ನಲ್ಲಿ ಇವರ ಬೆಳವಣಿಗೆ ಸಹಿಸದ ಬ್ರಾಹ್ಮಣ, ಮೇಲ್ಜಾತಿಗಳು ಇವರ ರೈತ ಪರ, ದಲಿತ, ಹಿಂದುಳಿದ ಜಾತಿಯ ಹಕ್ಕುಗಳನ್ನು ಬೆಂಬಲಿಸದೆ ಜಾತೀಯತೆ ಮುಂದುವರಿಸುತ್ತಾರೆ.

ಹಾಗಾಗಿ ಕಾಂಗ್ರೆಸ್ ಪಕ್ಷವನ್ನು 1932ರಲ್ಲಿ ತ್ಯಜಿಸಿ, ಸಣ್ಣ ರೈತ ಹಿಡುವಳಿದಾರರ ಪರ ಹೋರಾಟ ನೆಡೆಸುತ್ತಾರೆ. ಖೋತ್, ಮಕ್ತ, ಬೆಗರ್, ಇತ್ಯಾದಿ ಶೋಷಕ ವ್ಯವಸ್ಥೆಗಳು ರೈತರನ್ನು ಹೈರಾಣುಗೊಳಿಸುತ್ತದೆ.

ಈ ಮೂರು ರೈತ ವಿರೋಧಿ ವ್ಯವಸ್ಥೆ ನಿಷೇಧ ಮಾಡಲು, ನಾರಾಯಣ ನಾಗು ಪಾಟೀಲ್ ನೇತೃತ್ವದಲ್ಲಿ ನಿರಂತರ ಹೋರಾಟ ರೂಪಿಸುತ್ತಾರೆ. ಕೊಂಕಣ ಪ್ರಾಂತದಾದ್ಯಂತ ಹಬ್ಬುವ ಖೋತ್ ವಿರೋಧಿ ಚಳವಳಿ ಇವರ ಸ್ವಗ್ರಾಮ ಚರಿಯಲ್ಲಿ ಬೃಹತ್ ಸ್ವರೂಪ ಪಡೆದು ಅಂಬೇಡ್ಕರ್ ಅವರ ಗಮನ ಸೆಳೆಯುತ್ತದೆ. ಅಂಬೇಡ್ಕರ್ ಅವರ ಆಹ್ವಾನದ ಮೇರೆಗೆ ಇಂಡಿಯನ್ ಲೇಬರ್ ಪಾರ್ಟಿ ಸೇರುತ್ತಾರೆ.

1937ರಲ್ಲಿ ಮುಂಬೈ ವಿಧಾನ ಪರಿಷತ್ ಸದಸ್ಯರಾದ ಅಂಬೇಡ್ಕರ್ ಖೋತ್ ನಿಷೇಧ ಮಾಡಲು ವಿಧಾನ ಪರಿಷತ್‌ನಲ್ಲಿ ಖೋತ್ ನಿಷೇಧ ಬಿಲ್ ಮಂಡಿಸುತ್ತಾರೆ. ನಾರಾಯಣ ನಾಗು ಪಾಟೀಲ್, ಅಂಬೇಡ್ಕರ್ ಹಾಗೂ ಇತರ ಖೋತ್ ವಿರೋಧಿ ಹೋರಾಟಗಾರರ ನೇತೃತ್ವದಲ್ಲಿ ಪ್ರತಿ ದಿನವೂ ಅಪಾರ ಜನ ಬೆಂಬಲ ಪಡೆಯುತ್ತದೆ.

1938ರಲ್ಲಿ ಖೋತ್ ವಿರೋಧಿ ಹೋರಾಟವು ಜನಾಂದೋಲನ ಸ್ವರೂಪ ಪಡೆದು ನಾರಾಯಣ ನಾಗು ಪಾಟೀಲ್ ನೇತೃತ್ವದಲ್ಲಿ ಮುಂಬೈನ ವಿಧಾನ ಪರಿಷತ್‌ಗೆ 25 ಸಾವಿರಕ್ಕೂ ಹೆಚ್ಚು ಜನ ಮುತ್ತಿಗೆ ಹಾಕುತ್ತಾರೆ. ಸ್ವಾತಂತ್ರ ಪೂರ್ವದಲ್ಲಿ ನಡೆದಂತಹ ಯಾವುದೇ ಹೋರಾಟದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಜನರು ಪ್ರತಿಭಟನೆ ಮಾಡಿರಲಿಲ್ಲ. ನಾರಾಯಣ ನಾಗು ಪಾಟೀಲ್ ಇತಿಹಾಸ ಸೃಷ್ಟಿಸುತ್ತಾರೆ. ಅದೇ ವರ್ಷ ನಡೆದ ಚುನಾವಣೆಯಲ್ಲಿ ಈ ಹೋರಾಟದ ಪರಿಣಾಮದಿಂದ ಅಂಬೇಡ್ಕರ್ ನೇತೃತ್ವದ ಐಎಲ್‌ಪಿ ಪಕ್ಷವು 4 ವಿಧಾನ ಪರಿಷತ್ ಸ್ಥಾನ ಗೆಲ್ಲುತ್ತದೆ. ಅದರೂ ಖೋತ್‌ಗಳ ಶೋಷಣೆ ಮುಂದುವರಿಯುತ್ತದೆ. ಸಣ್ಣ ಹಿಡುವಳಿ ರೈತರು ಕುಣುಬಿ, ಮಹಾರ್, ಆಗ್ರಿ, ಕೋಲಿ, ಭಂಡಾರಿ (ಈಡಿಗ) ಸಮುದಾಯದವರು. ಖೋತ್‌ಗಳು ಹಾಗೂ ಸಣ್ಣ ರೈತರ ನಡುವಿನ ಘರ್ಷಣೆ 1942ರಲ್ಲಿ ವಿಪರೀತಕ್ಕೆ ಹೋಗುತ್ತದೆ. ದಲಿತ, ಹಿಂದುಳಿದ ಜಾತಿಯ ರೈತರು ಬೆಗರ್ (ಬಿಟ್ಟಿ ಚಾಕರಿ) ಮಾಡುವುದನ್ನು ನಿರಾಕರಿಸುತ್ತಾರೆ. ಅದರ ವಿರುದ್ಧ ಖೋತ್‌ಗಳು ನ್ಯಾಯಲಯದ ಮೊರೆ ಹೋಗುತ್ತಾರೆ.

ಕೋರ್ಟಿನಲ್ಲಿ ರೈತರು ಒಗ್ಗಟ್ಟಿನ ಪ್ರದರ್ಶನ

ಖೋತ್‌ಗಳಿಂದ ದಲಿತ, ಹಿಂದುಳಿದ ಜಾತಿಯವರ ಜೊತೆಗೆ ಮರಾಠಾ ಜಾತಿಯ ಸಣ್ಣ ರೈತರು ಕೂಡ ಬಲಿಪಶು ಆಗಿರುತ್ತಾರೆ. ಅವರನ್ನು ಸ್ವಜಾತಿ ಮರಾಠರು ನ್ಯಾಯಾಲಯದಲ್ಲಿ ಹಿಂದುಳಿದ ಜಾತಿ, ದಲಿತ ಸಣ್ಣ ರೈತರ ವಿರುದ್ಧ ಸಾಕ್ಷಿ ಆಗಿ ಬಳಸಿಕೊಳ್ಳುತ್ತಾರೆ. ಖೋತ್‌ಗಳಿಂದ ಶೋಷಣೆಗೆ ಒಳಗಾಗಿದ್ದ ಮರಾಠಾ ಸಣ್ಣ ರೈತರು ಕೋರ್ಟಿನಲ್ಲಿ ದಲಿತ, ಹಿಂದುಳಿದ ಜಾತಿಯವರ ವಿರುದ್ಧ ಸಾಕ್ಷಿ ಹೇಳುವುದಿಲ್ಲ ಮತ್ತು ಖೋತ್‌ಗಳ ವಿರೋಧಿ ಹೋರಾಟದಲ್ಲಿ ದಲಿತ, ಹಿಂದುಳಿದ ಜಾತಿಯವರ ಪರ ನಿಲ್ಲುತ್ತಾರೆ. ಈ ಅತ್ಯಾಶ್ಚರ್ಯ ಘಟನೆಯ ಬಗ್ಗೆ ಅಂಬೇಡ್ಕರ್ ಸಂತಸ ವ್ಯಕ್ತಪಡಿಸುತ್ತಾರೆ ಮತ್ತು ತಮ್ಮ ‘ಜನತಾ’ ಪತ್ರಿಕೆಯಲ್ಲಿ ಸಣ್ಣ ರೈತರು ಜಾತಿ ಭಾವನೆ ಬಿಟ್ಟು ಏಕತೆ ಕಾಯ್ದುಕೊಳ್ಳಬೇಕೆನ್ನುತ್ತಾರೆ. ಒಗ್ಗಟ್ಟಿನಿಂದ ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ರೂಪಿಸಲು ಸಲಹೆ ನೀಡುತ್ತಾರೆ, ಬೆಂಬಲಿಸುತ್ತಾರೆ.

ಇದೇ ಸಮಯದಲ್ಲಿ ಐಎಲ್‌ಪಿಯಿಂದ ಎಸ್‌ಸಿಎಫ್ (ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಶನ್) ಕಡೆ ಹೆಚ್ಚಿನ ಗಮನ ಕೊಡುತ್ತಾರೆ. ಅದಾಗಲೇ ಸ್ವಾತಂತ್ರ ಹೋರಾಟ ಮುಗಿಲು ಮುಟ್ಟುತ್ತದೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ ಕೂಡ ಬರುತ್ತದೆ. 1950ರಲ್ಲಿ ಮಕ್ತ, ಖೋತ್, ಬೆಗರ್ ಪದ್ಧತಿಯನ್ನು ಭಾರತ ಸರಕಾರ ಹಾಗೂ ಮಹಾರಾಷ್ಟ್ರ ರಾಜ್ಯ ಸರಕಾರ ನಿಷೇಧಿಸುತ್ತದೆ.

ಸುದೀರ್ಘ ಹೋರಾಟಕ್ಕೆ ಜಯ ಲಭಿಸುತ್ತದೆ. ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗುವ ದಲಿತ, ಹಿಂದುಳಿದ ಜಾತಿಯ ಜನರು ನಾರಾಯಣ ನಾಗು ಪಾಟೀಲ್ ನೇತೃತ್ವದಲ್ಲಿ ಪಿಎಲ್‌ಪಿ (ಪೀಸೆಂಟ್ ಆ್ಯಂಡ್ ಲೇಬರ್ ಪಾರ್ಟಿ)ಗೆ ಸೇರುತ್ತಾರೆ. ಕೆಲವು ವರ್ಷಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡು ಆನಂತರ ಸಾಮಾಜಿಕ ಕಾರ್ಯದಲ್ಲಿ ಮಗ್ನರಾಗುತ್ತಾರೆ.

ಇವರ ಹೋರಾಟ ಸಾಧನೆಗಾಗಿ ನಾರಾಯಣ ನಾಗು ಪಾಟೀಲ್ ಹೆಸರನ್ನು ರಾಯಗಡ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿಗೆ ನಾಮಕರಣ ಮಾಡುತ್ತಾರೆ. ಪ್ರಪ್ರಥಮ ರೈತ ಹೋರಾಟಗಾರರೆಂದು ಈಗಲೂ ಅವರ ಹೆಸರು ಚಿರಸ್ಥಾಯಿಯಾಗಿದೆ.

ಭಾಸ್ಕರ ರಘುನಾಥ ಕಡ್ರೆಕರ್, (1902-1975)

ಸಮರ್ಥ ಪತ್ರಕರ್ತರು, ಈಡಿಗ (ಭಂಡಾರಿ) ಸಮುದಾಯದ ಹಿಂದುಳಿದ ಜಾತಿಯ ನಾಯಕರಾದ ಭಾಸ್ಕರ ರಘುನಾಥ ಕಡ್ರೆಕರ್ ಅವರು ಜ್ಯೋತಿ ಬಾ ಫುಲೆ ಅವರ ಸತ್ಯಶೋಧಕ ಸಂಘಟನೆಯ ಪ್ರಭಾವದಿಂದ ಶೋಷಿತರ ಪರ ತಮ್ಮ ಬರವಣಿಗೆ ಮೂಲಕ ಜಾಗೃತಿ ಮೂಡಿಸುತ್ತಿರುತ್ತಾರೆ.

ಮಹಾಡ್ ಕೆರೆ ಸತ್ಯಾಗ್ರಹಕ್ಕೂ ಮುನ್ನ, 1927ರಲ್ಲಿ ಅಂಬೇಡ್ಕರ್ ರವರು ಸಮಾಜ ಸಮತಾ ಸಂಘ ಸಂಘಟನೆ ಸ್ಥಾಪಿಸುತ್ತಾರೆ. ಅಂಬೇಡ್ಕರ್ ವಿಚಾರಧಾರೆಯಿಂದ ಪ್ರಭಾವಿತರಾಗುವ, ಕಡ್ರೆಕರ್ ಅವರು ಅ ಸಂಘಟನೆಗೆ ಸೇರುತ್ತಾರೆ ಹಾಗೂ ಅಂಬೇಡ್ಕರ್‌ರವರ ಆತ್ಮೀಯ ಒಡನಾಡಿಗಳಾಗುತ್ತಾರೆ. ಮಹಾಡ್ ಕೆರೆ ಚಳವಳಿ ಹಾಗೂ ಕಾಲಾರಾಮ್ ದೇವಸ್ಥಾನ ಪ್ರವೇಶ ಹೋರಾಟದಲ್ಲಿ ಅಂಬೇಡ್ಕರ್ ಅವರಿಗೆ ಅ ಹೋರಾಟದಲ್ಲಿ ಹೆಗಲು ಕೊಟ್ಟು ಹೋರಾಟ ಮಾಡುತ್ತಾರೆ. ಆ ಹೋರಾಟದ ಹೀರೊಗಳಲ್ಲಿ ಅವರು ಕೂಡ ಒಬ್ಬರಾಗುತ್ತಾರೆ.

ಪತ್ರಿಕೋದ್ಯಮದಲ್ಲಿ ಅವರ ಅಪಾರ ಅನುಭವ, ತೀಕ್ಷ್ಣ ಬರವಣಿಗೆಯನ್ನು ಮೆಚ್ಚುವ ಅಂಬೇಡ್ಕರ್, ಅವರ ‘ಜನತಾ’ ಪತ್ರಿಕೆ ಹಾಗೂ ‘ಪ್ರಬುದ್ಧ ಭಾರತ’ದ ಜವಾಬ್ದಾರಿಯನ್ನು ಕಡ್ರೆಕರ್ ಅವರಿಗೆ ವಹಿಸುತ್ತಾರೆ. ಅವರ ನೇತೃತ್ವದಲ್ಲಿ ಪತ್ರಿಕೆಯು ವ್ಯಾಪಕ ಪ್ರಸಾರ ಪಡೆಯುತ್ತದೆ.

ಅವಿವಾಹಿತರಾದ ಕಡ್ರೆಕರ್ ಅವರು ಅಂಬೇಡ್ಕರ್ ಅವರ ಜೊತೆ ಕೊನೆಯವರೆಗೂ ನಿಷ್ಠೆಯಿಂದ ಇರುತ್ತ್ತಾರೆ. ಅಂಬೇಡ್ಕರ್ ಅವರು ಬೌದ್ಧ ಧಮ್ಮ ಪ್ರಚಾರ, ಪ್ರಸಾರಕ್ಕಾಗಿ ದಮ್ಮಯಾನ್ ಪಾಕ್ಷಿಕ ಪತ್ರಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಕಡ್ರೆಕರ್ ಅವರಿಗೆ ನೀಡುತ್ತಾರೆ. ಅ ಪಾಕ್ಷಿಕವನ್ನು ಕೂಡಾ ಯಶಸ್ವಿಯಾಗಿ ನಡೆಸುತ್ತಾರೆ. 1956ರಲ್ಲಿ ಅಂಬೇಡ್ಕರ್ ನಿಧನರಾದ ನಂತರವೂ ಅ ಪತ್ರಿಕೆಯನ್ನು ಮುಂದುವರಿಸಿಕೊಂಡು ಬದ್ದತೆ ಮೆರೆಯುತ್ತಾರೆ.

ಅಂಬೇಡ್ಕರ್ ಅವರ ಹೋರಾಟದಲ್ಲಿ ಹಿಂದುಳಿದ ಜಾತಿಯವರ ಬಹುಮುಖ್ಯ ಪಾತ್ರವಿದ್ದು, ಈ ವಿಚಾರಗಳು ಇತಿಹಾಸದ ಕಾಲಗರ್ಭದಲ್ಲಿ ಲೀನವಾಗಿತ್ತು. ಅಂಬೇಡ್ಕರ್ ಅವರ ಬಗ್ಗೆ ಹೊಸದಾಗಿ ಸಂಶೋಧನೆಯಲ್ಲಿ ತೊಡಗಿದಾಗ ಈ ವಿಚಾರಗಳು ಮುನ್ನೆಲೆಗೆ ಬಂದಿವೆ. ಈ ಐತಿಹಾಸಿಕ ಮಹತ್ವದ ಮಾಹಿತಿಗಳು ದಲಿತ, ಹಿಂದುಳಿದ ಜಾತಿಯವರ ಐಕ್ಯ ಹೋರಾಟಕ್ಕೆ ಹೊಸ ಹೊಳಹನ್ನು ನೀಡಿದೆ.

Writer - ಸೂರ್ಯಪ್ರಕಾಶ ಕೋಲಿ

contributor

Editor - ಸೂರ್ಯಪ್ರಕಾಶ ಕೋಲಿ

contributor

Similar News