ಟೆನಿಸ್ ಟೂರ್ನಿಗಳ ಆತಿಥ್ಯ ಹಕ್ಕು ಕಳೆದುಕೊಂಡ ಭಾರತ

Update: 2019-03-19 18:47 GMT

ಹೊಸದಿಲ್ಲಿ, ಮಾ.19: ಬಾಲಕೋಟ್ ವಾಯುದಾಳಿಯ ಬಳಿಕ ಪಾಕಿಸ್ತಾನದ ವಾಯು ಪ್ರದೇಶ ಮುಚ್ಚಲ್ಪಟ್ಟಿರುವ ಹಿನ್ನೆಲೆಯಲ್ಲಿ ಭಾರತ ಜೂನಿಯರ್ ಡೇವಿಸ್ ಕಪ್ ಹಾಗೂ ಫೆಡ್‌ಕಪ್ ಆತಿಥ್ಯದ ಹಕ್ಕುಗಳನ್ನು ಕಳೆದುಕೊಂಡಿದೆ ಎಂದು ರಾಷ್ಟ್ರೀಯ ಟೆನಿಸ್ ಒಕ್ಕೂಟ ಮಂಗಳವಾರ ಪಿಟಿಐಗೆ ತಿಳಿಸಿದೆ.

  ವಾರ್ಷಿಕ ಸ್ಪರ್ಧೆಯಲ್ಲಿ ಪಾಕಿಸ್ತಾನ ಸಹಿತ 16 ವರ್ಷದೊಳಗಿನ ಒಟ್ಟು 16 ಡೇವಿಸ್ ಕಪ್ ತಂಡಗಳು ಭಾರತಕ್ಕೆ ಪ್ರಯಾಣಿಸಬೇಕಾಗಿತ್ತು. ಜೂನಿಯರ್ ಡೇವಿಸ್‌ಕಪ್ ಡಿಎಲ್‌ಟಿಎ ಕಾಂಪ್ಲೆಕ್ಸ್ ನಲ್ಲಿ ಎ.8 ರಿಂದ 13ರ ತನಕ, ಫೆಡ್ ಕಪ್ ಪಂದ್ಯಗಳು ಎ.15ರಿಂದ 20ರ ತನಕ ನಿಗದಿಯಾಗಿದ್ದವು.

   ಆ ಸಮಯದಲ್ಲಿ ಪಾಕಿಸ್ತಾನ ವಾಯು ಪ್ರದೇಶ ಮುಚ್ಚಲ್ಪಟ್ಟಿರುತ್ತದೆ. ಭಾರತದ ವಿಮಾನ ನಿಲ್ದಾಣಗಳಲ್ಲೂ ಕಟ್ಟೆಚ್ಚರ ವಹಿಸಲಾಗಿರುತ್ತದೆ. ಎಷ್ಟು ಸಮಯದ ತನಕ ಅನಿಶ್ಚಿತ ಪರಿಸ್ಥಿತಿ ಇರಲಿದೆ ಎಂದು ಗೊತ್ತಿಲ್ಲ. ಹೀಗಾಗಿ ಟೂರ್ನಿಯ ನ್ನು ಸ್ಥಳಾಂತರಿಸುವುದು ಸೂಕ್ತವಾಗಿದ್ದು, ಭಾರತ ಮುಂದಿನ ದಿನಗಳಲ್ಲಿ ಟೂರ್ನಿಯ ಆತಿಥ್ಯವಹಿಸಲು ಸಾಧ್ಯವಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದೀಗ ಎರಡೂ ಸ್ಪರ್ಧೆಗಳು ಬ್ಯಾಂಕಾಕ್ ಹಾಗೂ ಥ್ಯಾಲ್ಯಾಂಡ್‌ನಲ್ಲಿ ನಿಗದಿಯಾಗಿದೆ. ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 40ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಬಳಿಕ ಎರಡು ನೆರೆಯ ರಾಷ್ಟ್ರಗಳ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ಭಾರತ ವಾಯು ಸೇನೆ ಫೆ.26 ರಂದು ಉಗ್ರರ ತರಬೇತಿ ಶಿಬಿರವನ್ನು ಗುರಿಯಾಗಿಸಿ ವಾಯುದಾಳಿ ನಡೆಸಿತ್ತು. ಆ ಬಳಿಕ ಪಾಕಿಸ್ತಾನ ತನ್ನ ವಾಯು ಪ್ರದೇಶವನ್ನು ಮುಚ್ಚಿದೆ.

ವಾಯು ಪ್ರದೇಶ ಮುಚ್ಚಲ್ಪಟ್ಟ ಬಳಿಕ ವಿಮಾನಗಳು ಸುತ್ತು ದಾರಿ ಬಳಸಿ ಬರಬೇಕಾಗಿದೆ. ಹೀಗಾಗಿ ವಿಮಾನದ ವೆಚ್ಚ ಹಾಗೂ ಸಮಯ ಅಧಿಕವಾಗಿದೆ. ಕಝಕ್‌ಸ್ತಾನದ ಆಟಗಾರರು ಹೊಸದಿಲ್ಲಿಗೆ ತಲುಪಲು ಮೂರರಿಂದ ನಾಲ್ಕು ಗಂಟೆ ಹೆಚ್ಚುವರಿ ಸಮಯಬೇಕಾಗುತ್ತದೆ. ಅಂತರ್‌ರಾಷ್ಟ್ರೀಯ ಟೆನಿಸ್ ಒಕ್ಕೂಟ, ಆತಿಥೇಯ ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ಹಾಗೂ ಏಶ್ಯನ್ ಟೆನಿಸ್ ಒಕ್ಕೂಟ ಚರ್ಚೆ ನಡೆಸಿ ಟೂರ್ನಿ ಸ್ಥಳಾಂತರಗೊಳಿಸಲು ನಿರ್ಧರಿಸಿವೆ.

ಅಖಿಲ ಭಾರತ ಟೆನಿಸ್ ಸಂಸ್ಥೆಯ ಕಾರ್ಯದರ್ಶಿ ಹಿರೊನ್‌ಮೊಯ್ ಪ್ರಕಾರ, ‘‘ಟೆನಿಸ್ ಟೂರ್ನಿಗಳಿಗೆ ಹಣ ಹೊಂದಿಸುವುದು ತುಂಬಾ ಕಷ್ಟಕರ. ನಾವು ಇತ್ತೀಚೆಗೆ ಕೋಲ್ಕತಾದಲ್ಲಿ ಡೇವಿಸ್ ಕಪ್ ಆತಿಥ್ಯ ವಹಸಿದ್ದೇವೆ. ಇದೀಗ ಹಣದ ಕೊರತೆ ಉಂಟಾಗಿದೆ. ಸರಕಾರ ಕೂಡ ನಮಗೆ ನೆರವು ನೀಡುತ್ತಿಲ್ಲ. ಹೀಗಾಗಿ ನಾವು ಐಟಿಎಫ್ ಬಳಿ ಟೆನಿಸ್ ಟೂರ್ನಿಯ ಆತಿಥ್ಯವಹಿಸುವುದಿಲ್ಲ ಎಂದು ತಿಳಿಸಿದ್ದೇವೆ’’ ಎಂದು ಚಟರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News