ಜಾಲತಾಣದಲ್ಲಿ ಮಾತನಾಡುವುದರಿಂದ ರಾಜಕೀಯ ಚಿತ್ರಣ ಬದಲಾಗುವುದಿಲ್ಲ: ನಿಖಿಲ್ ಕುಮಾರಸ್ವಾಮಿ

Update: 2019-03-19 18:50 GMT

ಮಂಡ್ಯ, ಮಾ.19: ಯಾರೋ ನಾಲ್ಕು ಜನ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವುದರಿಂದ ರಾಜಕೀಯ ಚಿತ್ರಣ ಬದಲಾಗುವುದಿಲ್ಲ ಎಂದು ಕಾಂಗ್ರೆಸ್‍ನ ಮೈತ್ರಿ ಪಕ್ಷದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಮಳವಳ್ಳಿ ವಿಧಾನಸಭಾ ಕ್ಷೇತ್ರದ ದಳವಾಯಿ ಕೋಡಿಹಳ್ಳಿ, ಹಲಗೂರು, ಹಾಡ್ಲಿ ಸರ್ಕಲ್, ಬೆಳಕವಾಡಿ, ಪೂರಿಗಾಲಿ, ಮಳವಳ್ಳಿ, ತಳಗವಾದಿಯಲ್ಲಿ ಪಕ್ಷದ ಕಾರ್ಯಕರ್ತರ ಜತೆ ರೋಡ್ ಶೋ ಮೂಲಕ ಮತಯಾಚನೆ ಮಾಡಿದ ವೇಳೆ ಅವರು ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಯಾರೂ ಬೇಕಾದರೂ ಸ್ಪರ್ಧಿಸಬಹುದು ಎಂದು ಸುಮಲತಾರ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೈತ್ರಿ ಅಭ್ಯರ್ಥಿಯಾಗಿರುವುದರಿಂದ ಪ್ರತಿಯೊಬ್ಬ ಕಾಂಗ್ರೆಸ್ ಮುಖಂಡರ ಮನೆಗೂ ಹೋಗಿ ಮಾತಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂದರು.

ಚಿತ್ರನಟರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಗೋಬ್ಯಾಕ್ ಚಳವಳಿ ಒಳ್ಳೆಯ ಬೆಳವಣಿಗೆಯಲ್ಲ, ಅದು ಕೂಡಲೇ ನಿಲ್ಲಬೇಕು. ಅದು ಮುಖ್ಯ ವಿಷಯವೇ ಆಗುವುದಿಲ್ಲ, ಹಿಂದೆ ಹೋಗಬೇಕಾ, ಮುಂದೆ ಬರಬೇಕಾ ಎಂಬುದನ್ನು ಜನರು ತೀರ್ಮಾನಿಸುತ್ತಾರೆ ಎಂದು ಅವರು ಪ್ರತಿಕ್ರಿಯಿಸಿದರು.
ಜಿಲ್ಲೆಯ ಜನರ ಅಭಿಪ್ರಾಯ ಪಡೆದು ಶಾಸಕರು ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರು ಸೈನಿಕರಂತೆ ನನ್ನ ಪರವಾಗಿ ನಿಂತಿದ್ದಾರೆ. ಯಾವುದಕ್ಕೂ ಹೆದರುವ ಪ್ರಮೇಯ ಬರುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರೋಡ್ ಶೋನಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ನಿಖಿಲ್, 1996ರಿಂದಲೂ ಮಳವಳ್ಳಿ ಜನರು ನಮ್ಮ ಕುಟುಂಬವನ್ನು ರಾಜಕೀಯವಾಗಿ ಕೈಹಿಡಿದು ನಡೆಸಿಕೊಂಡು ಬಂದಿದ್ದಾರೆ. ಅದೇ ರೀತಿ ನನಗೂ ಬೆಂಬಲ ನೀಡಿ ಬೆಳೆಸುತ್ತಾರೆ. ಜನರ ಪ್ರೀತಿ, ವಿಶ್ವಾಸ, ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಭರ್ಜರಿ ಸ್ವಾಗತ: ಶೃಂಗೇರಿ ಶಾರದಾಂಬೆಗೆ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಆಗಮಿಸಿದ ನಿಖಿಲ್ ಅವರನ್ನು ಜಿಲ್ಲೆಯ ದಳವಾಯಿ ಕೋಡಿಹಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರು ಜಾನಪದ ಕಲಾತಂಡಗಳ ಮೆರವಣಿಗೆ, ಬೈಕ್ ರ್ಯಾಲಿ ಮೂಲಕ ಸ್ವಾಗತಿಸಿದರು.

ರ್ಯಾಲಿ ವೇಳೆ ಸುಮಲತಾಗೆ ಬೆಂಬಲ ವ್ಯಕ್ತಪಡಿಸಿರುವ ಚಿತ್ರನಟರಾದ ಯಶ್, ದರ್ಶನ್ ವಿರುದ್ಧ ಗೋಬ್ಯಾಕ್ ಎಂದು ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದೇವೇಗೌಡ, ಕುಮಾರಸ್ವಾಮಿ, ನಿಖಿಲ್‍ಗೆ ಜೈಕಾರ ಮೊಳಗಿಸಿದರು.

ನಿಖಿಲ್ ಪ್ರಚಾರಕ್ಕೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ದೇವರಾಜ ಅರಸು ನಿಗಮದ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಡಾ.ಕೆ.ಅನ್ನದಾನಿ, ಜೆಡಿಎಸ್ ಮುಖಂಡರು ಸಾಥ್ ನೀಡಿದರು.

‘ದೇವೇಗೌಡರೇ ನಿಜವಾದ ಹೀರೋ’ 
ಮಾಜಿ ಪ್ರಧಾನಿ ದೇವೇಗೌಡರೇ ದೊಡ್ಡ ಮತ್ತು ನಿಜವಾದ ಹೀರೋ. ಸಿನಿಮಾ ನಟರು ಸಿನಿಮಾದಲ್ಲಷ್ಟೇ ಹೀರೊ ಎಂದು ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.

ಮಳವಳ್ಳಿ ತಾಲೂಕಿಗೆ ಮಂಗಳವಾರ ನಿಖಿಲ್ ಪ್ರಚಾರಕ್ಕೆ ಆಗಮಿಸಿದ ವೇಳೆ ದಳವಾಯಿ ಕೋಡಿಹಳ್ಳಿಯಲ್ಲಿ ಸ್ವಾಗತಿಸಿ ಮಾತನಾಡಿದ ಅವರು, ದೇವೇಗೌಡರೇ ರೈತರ ಹೀರೋ. ಹಾಗಾಗಿ ಜಿಲ್ಲೆಯಲ್ಲಿ ಯಾವುದೇ ಹೀರೊಗಳು ಬಂದರೂ ಏನೂ ಆಗುವುದಿಲ್ಲ ಎಂದರು. ಕಾಂಗ್ರೆಸ್ ಮುಖಂಡರು ಮೈತ್ರಿ ಧರ್ಮಕ್ಕೆ ಅನುಗುಣವಾಗಿ ನಡೆದುಕೊಳ್ಳಲಿದ್ದಾರೆ ಅನ್ನೋ ವಿಶ್ವಾಸ ಇದೆ. ನಾವು ಎಚ್ಚರಿಕೆಯಿಂದ ಚುನಾವಣೆ ಮಾಡಿ ನಿಖಿಲ್ ಗೆಲುವಿಗೆ ಶ್ರಮಿಸುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News