ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕೆಂಬುದು ದೇಶದ ಜನರ ಅಭಿಪ್ರಾಯ: ಸದಾನಂದ ಗೌಡ

Update: 2019-03-19 19:03 GMT

ತುಮಕೂರು,ಮಾ.19: ನರೇಂದ್ರಮೋದಿ ಈ ದೇಶದ ಪ್ರಧಾನಿಯಾಗಿ ಮತ್ತೊಮ್ಮೆ ಆಯ್ಕೆಯಾಗಬೇಕೆಂಬುದು ದೇಶದ ಬಹುಜನರ ಅಭಿಪ್ರಾಯವಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಸಿದ್ದಗಂಗಾ ಮಠಕ್ಕಿಂದು ಭೇಟಿ ನೀಡಿ, ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಮಾಧ್ಯಮಗಳು ನಡೆಸಿದ ಸಮೀಕ್ಷೆಯಲ್ಲಿ ದೇಶದ ಶೇ.83ರಷ್ಟು ಜನ ಮೋದಿ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ. 19 ಕಿಚಡಿ ಪಕ್ಷಗಳು ಒಗ್ಗೂಡಿ ರಚಿಸಿರುವ ಮಹಾಘಟಬಂಧನ್‍ಗೆ ಶೇ.17ರಷ್ಟು ಜನರು ಮಾತ್ರ ಒಲವು ತೋರಿಸಿದ್ದು, ಈ ನಿಟ್ಟಿನಲ್ಲಿ ಮೋದಿ ಪ್ರಧಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಮಂಗಳವಾರ ಸಂಜೆ ದೆಹಲಿಯಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯರ ಸಭೆ ಇದ್ದು, ಇದರಲ್ಲಿ ರಾಜ್ಯಾಧ್ಯಕ್ಷರಾದ ಬಿ.ಎಸ್.ವೈ ಮತ್ತು ರಾಜ್ಯ ಮುಖಂಡರು ಭಾಗವಹಿಸಿದ್ದಾರೆ. ಕರ್ನಾಟಕ ಸೇರಿದಂತೆ ಮೊದಲ ಹಂತದಲ್ಲಿ ಲೋಕಸಭೆಗೆ ಸ್ಪರ್ಧಿಸಲಿರುವ ಎಲ್ಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಸದಾನಂದಗೌಡ ತಿಳಿಸಿದರು.

ರಾಹುಲ್ ವಿರುದ್ಧ ದೂರು: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಸರ್ಕಾರ ಸಾಲಸೌಲಭ್ಯದ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಸಭೆ ನಡೆಸಿರುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ಮೋದಿ ಎಂದು ಕೂಗಿದವರು ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರಲ್ಲ, ಸಾರ್ವಜನಿಕ ಅಭಿಪ್ರಾಯಕ್ಕೆ ಯಾವಾಗಲೂ ಮನ್ನಣೆ ಇದೆ ಎಂದರು.

ದೇವೇಗೌಡರು ಎಲ್ಲಿಯೂ ಕೂಡ ಬಹಿರಂಗವಾಗಿ ಸೀಟು ಹಂಚಿಕೆ ಮಾಡಿಲ್ಲ, ರಹಸ್ಯ ಸಭೆಯಲ್ಲಿ ಟಿಕೆಟ್ ಹಂಚಿದರೂ ಸಹ ಕರ್ನಾಟಕದಲ್ಲಿ 22ಕ್ಕಿಂತ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ. ಜನರ ಆರ್ಶೀವಾದ ಬಿಜೆಪಿ ಮೇಲಿದೆ ಎಂದ ಅವರು ಪ್ರತಿಬಾರಿ ಚುನಾವಣೆ ಪ್ರಚಾರಕ್ಕೆ ಮುಂಚೆ ಶ್ರೀಗಳ ಆರ್ಶೀವಾದ ಪಡೆಯುವ ಸಂಪ್ರದಾಯವನ್ನು ಮುಂದುವರೆಸಿದ್ದು, ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಆರ್ಶೀವಾದವನ್ನು ಪಡೆದಿರುವುದಾಗಿ ಹೇಳಿದರು.

ಈ ವೇಳೆ ಶಾಸಕ ಜ್ಯೋತಿಗಣೇಶ್, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕರಾದ ಸುರೇಶ್‍ ಗೌಡ, ಹುಲಿನಾಯ್ಕರ್, ಮುಖಂಡರಾದ ಶಿವಪ್ರಸಾದ್ ಸೇರಿದಂತೆ ಇತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News