ರಾಜ್ಯಾದ್ಯಂತ ಅಧಿಕವಾಗುತ್ತಿರುವ ಎಚ್1ಎನ್1 ಸೋಂಕು

Update: 2019-03-20 15:50 GMT

ಬೆಂಗಳೂರು, ಮಾ.20: ರಾಜ್ಯದಲ್ಲಿ ಜನವರಿಯಿಂದೀಚೆಗೆ ಎಚ್1ಎನ್1 ಪ್ರಕರಣಗಳು ಅಧಿಕವಾಗುತ್ತಿದ್ದು, ಇದುವರೆಗೂ ಸುಮಾರು 959 ಜನರಿಗೆ ಸೋಂಕು ತಗಲಿದ್ದು, 14 ಜನರು ಮೃತಪಟ್ಟಿರುವುದು ವರದಿಯಾಗಿದೆ.

2018 ಕ್ಕೆ ಹೋಲಿಕೆ ಮಾಡಿಕೊಂಡರೆ ಈ ವರ್ಷ ಆರಂಭದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಚ್1ಎನ್1 ಪ್ರಕರಣಗಳು ಹೆಚ್ಚಳಗೊಂಡಿವೆ. 2018ರಲ್ಲಿ ಜನವರಿಯಿಂದ ಆಗಸ್ಟ್‌ವರೆಗೂ ಕೇವಲ 38 ಮಂದಿಗೆ ಮಾತ್ರ ತಗುಲಿದ್ದ ಈ ಸೋಂಕು, ಸೆಪ್ಟೆಂಬರ್‌ನಿಂದೀಚೆಗೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು. ಆದರೆ, ಈ ವೇಳೆ ಆರೋಗ್ಯ ಇಲಾಖೆ ಜಾಗೃತಿ ಮೂಡಿಸಿದ ಪರಿಣಾಮ ಕಡಿಮೆಯಾಗಿತ್ತು. ಆದರೂ, ಈ ವರ್ಷದ ಆರಂಭದಲ್ಲಿಯೇ ಪ್ರಕರಣಗಳು ಅಧಿಕವಾಗತೊಡಗಿವೆ.

ರಾಜ್ಯಾದ್ಯಂತ 2017 ರಲ್ಲಿ 1733 ಜನರಿಗೆ ಸೋಂಕು ತಗಲಿದ್ದು, ಅದರಲ್ಲಿ 15 ಜನ ಮೃತಪಟ್ಟಿದ್ದರು. 2018 ರಲ್ಲಿ 1733 ಮಂದಿಗೆ ಎಚ್1ಎನ್1 ತಗುಲಿದ್ದು, ಅದರಲ್ಲಿ 87 ಮಂದಿ ಮೃತಪಟ್ಟಿದ್ದರು. ಈ ಮೂಲಕ ದೇಶದಲ್ಲಿಯೇ ಅತೀ ಹೆಚ್ಚು ಎಚ್1ಎನ್1 ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪಟ್ಟಿಗೆ ಸೇರಿಕೊಂಡಿತ್ತು. ಆದರೆ, 2019 ರ ಆರಂಭದಲ್ಲಿಯೇ ಎಚ್1ಎನ್1 ಉಲ್ಬಣಿಸುತ್ತಿರುವುದು ಆತಂಕ ಮೂಡಿಸಿದೆ.

ಆರೋಗ್ಯ ಇಲಾಖೆ ಎಚ್1ಎನ್1 ತಡೆಯುವ ಸಲುವಾಗಿ ಮುನ್ನೆಚ್ಚರಿಕಾ ಕ್ರಮಗಳಿಗೆ ಮುಂದಾಗಿದ್ದು, ಇದರ ಬಗ್ಗೆ ಎಚ್ಚರ ವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಪ್ರಸಕ್ತ ಸಾಲಿನಲ್ಲಿ 3812 ಮಂದಿ ಶಂಕಿತರ ಗಂಟಲು ದ್ರಾವಣ ಮಾದರಿ ಪರೀಕ್ಷೆಗೆ ಒಳಪಡಿಸಿದ್ದು, ಆ ಪೈಕಿ 959 ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ. ಜತೆಗೆ ನಗರ ಪ್ರದೇಶಗಳಲ್ಲಿಯೇ ಹೆಚ್ಚಿನವರಲ್ಲಿ ಸೋಂಕಿರುವುದು ಆಘಾತಕಾರಿ ವಿಚಾರವಾಗಿದೆ.

ಉಚಿತ ಚಿಕಿತ್ಸೆ ಪಡೆಯಿರಿ:

ರೋಗಿಗಳಲ್ಲಿ ಅಧಿಕ ಜ್ವರ, ಗಂಟಲು ನೋವು, ಉಸಿರಾಟ ಸಮಸ್ಯೆ ಕಾಣಿಸಿಕೊಂಡರೆ ಸರಕಾರಿ ಆಸ್ಪತ್ರೆಗಳ ವೈದ್ಯರು ಕೂಡಲೇ ಗಂಟಲು ದ್ರಾವಣ ಮಾದರಿ ಪರೀಕ್ಷೆಗೆ ಒಳಪಡಿಸುತ್ತಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಎಚ್1ಎನ್1 ಚಿಕಿತ್ಸೆ ಹಾಗೂ ಎಲ್ಲ ರೀತಿಯ ಔಷಧೋಪಚಾರಗಳು ಉಚಿತವಾಗಿದ್ದು, ಸೋಂಕು ಕಂಡುಬಂದ ರೋಗಿಗಳನ್ನು ಎ, ಬಿ, ಸಿ ಎಂದು ಮೂರು ರೀತಿ ವಿಭಾಗಿಸಲಾಗುತ್ತದೆ. ಎ ಮಾದರಿಯಲ್ಲಿ ಕೇವಲ ಎಚ್1ಎನ್1 ಸೋಂಕಿತರಿದ್ದರೆ, ಬಿ ಮತ್ತು ಸಿ ಯಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿ ಕಾಣಿಸಿಕೊಳ್ಳುವ ರಕ್ತದೊತ್ತಡ, ಮಧುಮೇಹ, ಹೃದ್ರೋಗಿಗಳು ಸೇರಿದಂತೆ ಗರ್ಭಿಣಿಯರಿರುತ್ತಾರೆ. ಇನ್ನು ಸೋಂಕಿಗೆ ಸಂಬಂಧಿಸಿದಂತೆ ಬುಧವಾರ ಆರೋಗ್ಯ ಮಿಷನ್ ನಿರ್ದೇಶಕ ರತನ್ ಕೇಲ್ಕರ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ವೈದ್ಯಾಧಿಕಾರಿಗಳ ಸಭೆ ನಡೆಸಿ ಆಯಾ ಭಾಗಗಳಲ್ಲಿ ಸೋಂಕಿನ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದು, ಶಂಕಿತರಿಗೆ ನೇರವಾಗಿ ಟ್ಯಾಮಿ ಫ್ಲೂ ಮಾತ್ರೆ ಆರಂಭಿಸಲು ಜತೆಗೆ ರೋಗಿಗಳಿಗೆ ಅಗತ್ಯ ಸೌಲಭ್ಯ ನೀಡಲು ಸೂಚಿಸಿದ್ದಾರೆ.

‘ಖಾಸಗಿ ಆಸ್ಪತ್ರೆಗಳು ಹಿಂದೇಟು’

ಕೆಲ ಜಿಲ್ಲಾ-ತಾಲೂಕು ಕೇಂದ್ರಗಳಲ್ಲಿ ಎಚ್1ಎನ್1ಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕುತ್ತಿದ್ದು, ಜಿಲ್ಲಾ ಸರಕಾರಿ ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡುತ್ತಿದ್ದಾರೆ. ಕಾರಣ, ರೋಗ ಪತ್ತೆ ವಿಳಂಬವಾಗುವುದರಿಂದ ಒಂದೊಮ್ಮೆ ರೋಗಿ ಸಾವಿಗೀಡಾದರೆ ಅದರ ಹೊಣೆ ಆಸ್ಪತ್ರೆ ಹೊರಬೇಕೆಂಬ ಭಯದಿಂದ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ರಿಕೆಗೆ ಮಾಹಿತಿ ನೀಡಿದರು. 

ಜಿಲ್ಲೆಗಳು - ದೃಢಪಟ್ಟಿರುವ ರೋಗಿಗಳ ಸಂಖ್ಯೆ - ಸಾವಿಗೀಡಾಗಿರುವ ರೋಗಿಗಳು

ಬಾಗಲಕೋಟೆ -14-0

ಬೆಂಗಳೂರು ಗ್ರಾಮೀಣ -5-1

ಬೆಂಗಳೂರು ನಗರ- 61-0

ಬೆಳಗಾವಿ- 34-0

ಬಳ್ಳಾರಿ -19-0

ಬೀದರ್ -2-0

ಚಾಮರಾಜನಗರ -9-1

ಚಿಕ್ಕಮಗಳೂರು -27-0

ಚಿಕ್ಕಬಳ್ಳಾಪುರ -6-2

ಚಿತ್ರದುರ್ಗ -24-2

ದಕ್ಷಿಣ ಕನ್ನಡ- 80-0

ದಾವಣಗೆರೆ- 43-0

ಧಾರವಾಡ -4-0

ಗದಗ -2-0

ಹಾಸನ -35-1

ಹಾವೇರಿ -13-0

ಕಲಬುರ್ಗಿ- 8-0

ಕೊಡಗು- 8-0

ಕೋಲಾರ -15-0

ಕೊಪ್ಪಳ-1-0

ಮಂಡ್ಯ- 23-0

ಮೈಸೂರು -87-4

ರಾಯಚೂರು -1-0

ರಾಮನಗರ- 3-0

ಶಿವಮೊಗ್ಗ- 77-0

ತುಮಕೂರು -10-1

ಉಡುಪಿ -130-0

ಉತ್ತರ ಕನ್ನಡ -10-0

ವಿಜಯಪುರ- 13-0

ಯಾದಗಿರಿ -0-0

ಬಿಬಿಎಂಪಿ -195-0

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News