ದೇವೇಗೌಡರು ಲೋಕಸಭೆಗೆ ಸ್ಪರ್ಧೆ ಮಾಡುವುದೇ ಅನುಮಾನ: ಮಾಜಿ ಸಚಿವ ವಿ.ಸೋಮಣ್ಣ

Update: 2019-03-20 18:44 GMT

ತುಮಕೂರು,ಮಾ.20: ಬಿಜೆಪಿ ಪಕ್ಷದ ಬೂತ್ ಕಾರ್ಯಕರ್ತರಿಂದ ಹಿಡಿದು ಮುಖಂಡರು, ಶಾಸಕರು ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸುವ ಮೂಲಕ ಮೋದಿ ಅವರನ್ನು ಪುನಾರಾಯ್ಕೆ ಮಾಡಬೇಕಿದ್ದು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲು ಕಾರ್ಯತಂತ್ರ ರೂಪಿಸಬೇಕಿದೆ ಎಂದು ಮಾಜಿ ಸಚಿವ ಮತ್ತು ತುಮಕೂರು ಜಿಲ್ಲಾ ಚುನಾವಣಾ ಉಸ್ತುವಾರಿ ವಿ.ಸೋಮಣ್ಣ ತಿಳಿಸಿದರು.

ನಗರದಲ್ಲಿ ಬಿಜೆಪಿಯ ನೂತನ ಜಿಲ್ಲಾ ಚುನಾವಣಾ ಕಚೇರಿ ಉದ್ಘಾಟಿಸಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎನ್ನುವ ಬಗ್ಗೆ ವರಿಷ್ಠರು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದು, ಬಿಜೆಪಿಯಿಂದ ಯಾರಿಗೆ ಟಿಕೆಟ್ ಎಂಬುದು ಶೀಘ್ರವೇ ಹೊರ ಬೀಳಲಿದೆ. ಅಭ್ಯರ್ಥಿಗಳ ಆಯ್ಕೆಗಾಗಿ ನಾಲ್ಕಾರು ನಾಯಕರನ್ನು ಕರೆಸಿ ಚರ್ಚೆ ಮಾಡಲಾಗಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ವರಿಷ್ಠರೇ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.

ಅಭ್ಯರ್ಥಿಗಳ ಅನುಭವ ಹಾಗೂ ದೂರದೃಷ್ಟಿಯ ಪ್ರಾತಿನಿದ್ಯದ ಮೇಲೆ ಟಿಕೆಟ್ ಹಂಚಿಕೆ ಮಾಡಲಾಗಿದೆ. 28 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ನಾನಿಲ್ಲ. 22 ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಮೋದಿ ಅಲೆ ತುಮಕೂರಿನಲ್ಲಿಯೂ ಇದ್ದು, ಸುಲಭವಾಗಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.

ತುಮಕೂರು ಲೋಕಸಭಾ ಕ್ಷೇತ್ರದಿಂದ ದೇವೇಗೌಡ ಸ್ಪರ್ಧಿಸಿದರೆ ಸೋಲಿಸುವುದು ನಿಮ್ಮ ಜವಾಬ್ದಾರಿಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, ‘ದೇವೇಗೌಡರನ್ನು ಸೋಲಿಸಕ್ಕೆ ನಾನ್ಯಾರು, ಸೋಲಿಸುವುದು ಗೆಲ್ಲಿಸುವುದು ಕ್ಷೇತ್ರದ ಜನರಿಗೆ ಬಿಟ್ಟ ವಿಚಾರ. ದೇವೇಗೌಡ ಅವರ ಗರಡಿಯಲ್ಲಿ ಪಳಗಿದ್ದೇನೆ, ಅವರ ನಾಲ್ಕಾರು ಮುಖ ನೋಡಿದ್ದೇನೆ. ಅವರು ರಾಜಕೀಯ ನಿಪುಣರು. ಈ ಬಾರಿ ಸ್ಪರ್ಧೆ ಮಾಡುವುದೇ ಅನುಮಾನವಿದೆ ಎಂದು ತಿಳಿಸಿದರು.

ಇನ್ನು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಮಾತನಾಡುತ್ತಾರೆ ಎಂಬುದು ನನಗೆ ಗೊತ್ತಿದೆ. ಅವರಂತೆ ಮಾತನಾಡಲು ಹೋಗಲ್ಲ. ನಮ್ಮ ಅಭ್ಯರ್ಥಿಗಳನ್ನು ಹೇಗೆ ಗೆಲ್ಲಿಸಬೇಕು ಎಂಬುದು ಗೊತ್ತಿದೆ. ಮಂಡ್ಯದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುವುದು ಹಾಗೂ ಸುಮಲತಾ ಅವರಿಗೆ ಬೆಂಬಲ ನೀಡುವುದು ಹೈಕಮಾಂಡ್‍ಗೆ ಬಿಟ್ಟ ವಿಚಾರ. ಅದರ ಬಗ್ಗೆ ನಾನೇನು ಮಾತನಾಡಲ್ಲ. ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ನಾವೇನು ಆಹ್ವಾನಿಸಿಲ್ಲ ಎಂದರು.

ನನ್ನ ಮೇಲೆ ಅನಂತ್ ಕುಮಾರ್ ಋಣ ಇದೆ, ಅದನ್ನು ತೀರಿಸಲು ಅವಕಾಶ ಸಿಕ್ಕಿದೆ. ಅದಕ್ಕಾಗಿ ಅನಂತ್‍ ಕುಮಾರ್ ಅವರ ಪತ್ನಿಯನ್ನು ಚುನಾವಣೆಗೆ ಪಕ್ಷ ನಿಲ್ಲಿಸಿದ್ದು, ಅವರು ಗೆಲ್ಲಲಿದ್ದಾರೆ ಎಂದು ಹೇಳಿದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮಾದರಚೆನ್ನಯ್ಯ ಸ್ವಾಮೀಜಿ ಅವರು ಸ್ಪರ್ಧೆ ಮಾಡಿದರೆ ಚಿತ್ರದುರ್ಗ ಕ್ಷೇತ್ರ ಪಾವನವಾಗಲಿದೆ ಎಂದರು.

ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಬಿ.ಸಿ.ನಾಗೇಶ್, ಶಾಸಕ ಜ್ಯೋತಿಗಣೇಶ್, ಹುಲಿನಾಯ್ಕರ್, ಮುಖಂಡರಾದ ಬೆಟ್ಟಸ್ವಾಮಿ, ದೊಡ್ಡಮನೆ ಗೋಪಾಲಗೌಡ, ಶಿವಪ್ರಸಾದ್ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. 

ಲೋಕಸಭಾ ಚುನಾವಣೆಯ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಪರ್ವ ಶುರುವಾಗಲಿದ್ದು, ಯಾರು ಯಾವ್ಯಾವ ಭ್ರಮೆಯಲ್ಲಿದ್ದಾರೆಯೋ ಗೊತ್ತಿಲ್ಲ.
-ವಿ.ಸೋಮಣ್ಣ. ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News