ಮಹಿಳೆ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

Update: 2019-03-21 11:46 GMT

ದಾವಣಗೆರೆ,ಮಾ.21: ಮಹಿಳೆಯ ಕೊಲೆ ಪ್ರಕರಣದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. 

ಹರಿಹರ ತಾಲೂಕಿನ ಯಲವಟ್ಟಿ ಗ್ರಾಮದ ರೊಳ್ಳಿ ಪರಮೇಶ್ವರಪ್ಪ(45) ಶಿಕ್ಷೆಗೆ ಗುರಿಯಾದ ಅಪರಾಧಿ. ಅದೇ ಗ್ರಾಮದ ಗದಿಗೆಮ್ಮ ಎಂಬ ಮಹಿಳೆಯೊಂದಿಗೆ ರೊಳ್ಳಿ ಪರಮೇಶ್ವರಪ್ಪ ಅನೈತಿಕ ಸಂಬಂಧ ಹೊಂದಿದ್ದ. ರೊಳ್ಳಿ ಪರಮೇಶ್ವರಪ್ಪ 2016 ಸೆ.17 ರಂದುರಂದು ಗದಿಗೆಮ್ಮಳನ್ನು ತನ್ನ ಮನೆಯ ಹಿಂದಿನ ಖಾಲಿ ಜಾಗಕ್ಕೆ ಕರೆಸಿ, ಆಕೆ ಧರಿಸಿದ್ದ ಸೀರೆಯಿಂದಲೇ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದನು ಎನ್ನಲಾಗಿದೆ. ಬಳಿಕ ಶವವನ್ನು ತನ್ನ ಅಳಿಯನ ಆಟೋದಲ್ಲಿ ಗ್ರಾಮದ ಹೊರ ವಲಯದ ಕಾಲುವೆಯಲ್ಲಿ ಬಿಸಾಡಿ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದನು ಎಂದು ಆರೋಪಿಸಲಾಗಿತ್ತು.

ಈ ಬಗ್ಗೆ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಹರಿಹರ ವೃತ್ತ ನಿರೀಕ್ಷಕ ಜೆ.ಎಸ್.ನ್ಯಾಮಗೌಡರ್,  ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. 

ಪ್ರಧಾನ ಜಿಲ್ಲಾಮತ್ತು ಸತ್ರ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದು, ರೊಳ್ಳಿ ಪರಮೇಶ್ವರಪ್ಪ ಗದಿಗೆಮ್ಮಳನನ್ನು ಕೊಲೆ ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶ ಕುಲಕರ್ಣಿ ಅಂಬಾದಾಸ್ ಜಿ ಅವರು ತೀರ್ಪು ನೀಡಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ವಿ.ಪಾಟೀಲ್ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News