ದಾವಣಗೆರೆ: ನಗರದಾದ್ಯಂತ ಸಂಭ್ರಮದ ಹೋಳಿ ಆಚರಣೆ

Update: 2019-03-21 12:01 GMT

ದಾವಣಗೆರೆ,ಮಾ.21: ನಗರದಾದ್ಯಂತ ಗುರುವಾರ ವಯಸ್ಸಿನ ಭೇದ ಭಾವವಿಲ್ಲದೇ ನಾಗರಿಕರು ಹೋಳಿ ಹಬ್ಬವನ್ನು ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂಭ್ರಮದಿಂದ ಆಚರಿಸಿದರು.

ನಗರದಲ್ಲಿ ಎಲ್ಲಿ ನೋಡಿದರೂ ಯುವಕ, ಯುವತಿಯರ ಮುಖದಲ್ಲಿ ಹಳದಿ, ಕೆಂಪು, ಹಸಿರು, ನೀಲಿ, ಗುಲಾಬಿ ಬಣ್ಣಗಳ ಓಕುಳಿ. ಬಾಂಧವ್ಯದ ಬೆಸುಗೆಯಾದ ಬಣ್ಣದಾಟವನ್ನು ಜನರು ಸಂಭ್ರಮದಿಂದ ಆಚರಿಸಿದ್ದು, ರಂಗಿನಾಟದಲ್ಲಿಂದು ದಾವಣಗೆರೆಯ ಯುವ ಸಮೂಹ ಅಕ್ಷರಶಃ ಮಿಂದೆದ್ದಿತು.

ಬಡಾವಣೆಗಳಲ್ಲಿ ರಂಗೋ ರಂಗು: 

ಪ್ರತಿವರ್ಷದಂತೆ ಈ ಬಾರಿಯೂ ಬಣ್ಣದ ಆಟಕ್ಕೆ ಇಲ್ಲಿ ವೈಶಿಷ್ಟ ಪೂರ್ಣ ಮೆರಗು, ಸಂಭ್ರಮದ ವಾತಾವರಣ ಎಲ್ಲೆಲ್ಲೂ ಕಂಡು ಬಂತು. ನಗರದ ರಾಂ ಅಂಡ್ ಕೋ ವೃತ್ತ, ಜಯದೇವ ವೃತ್ತ, ಅಂಬೇಡ್ಕರ್ ಸರ್ಕಲ್, ಗಾಂಧಿ ವೃತ್ತ, ಗುಂಡಿ ವೃತ್ತ, ಹಳೆಯ ಬಸ್ ನಿಲ್ದಾಣದ ಬಳಿ, ಎಂಸಿಸಿ ಎ ಬ್ಲಾಕ್, ಲಾಯರ್ ರಸ್ತೆ, ಯಲ್ಲಮ್ಮ ನಗರ, ವಿನೋಬ ನಗರ, ಕೀರ್ತಿ ನಗರ, ಅಣ್ಣನಗರ, ವಿದ್ಯಾನಗರ, ನಿಟುವಳ್ಳಿ, ಕೆಟಜಿ ನಗರ ಸೇರಿದಂತೆ ನಗರದ ಬಹುತೇಕ ಬಡಾವಣೆಗಳಲ್ಲಿ ಬೆಳಗ್ಗೆಯಿಂದಲೇ ಹಲವು ಬಣ್ಣದ ರಂಗಿನ ಹೋಳಿ ಆಚರಣೆ ಮಾಡಲಾಯಿತು. 

ನಗರದ ಯಾವುದೇ ಬಡಾವಣೆ ರಸ್ತೆಗಳಿಗೆ ಇಳಿದರೆ ಸಾಕು ಗೆಳೆಯರಿಗೆ, ಗೆಳತಿಯರಿಗೆ, ಸ್ನೇಹಿತರ ಗುಂಪುಗಳು ಬಣ್ಣ ಬಳಿಯಲು ಓಡುವುದು ಸಾಮಾನ್ಯವಾಗಿತ್ತು. ಪುರುಷರು, ಮಹಿಳೆಯರು, ಪುಟಾಣಿಗಳು, ವಯಸ್ಕರು, ಜಾತಿ, ಲಿಂಗ, ಭೇದ ಮರೆತು ಎಲ್ಲರೂ ಪಾಲ್ಗೊಂಡು ಹಬ್ಬಕ್ಕೆ ಮೆರುಗು ತಂದಿದ್ದರು. ಎಲ್ಲಾ ಅಂಗಡಿ, ಮುಗ್ಗಟ್ಟುಗಳು ಬೆಳಗಿನಿಂದಲೇ ಸ್ಥಗಿತಗೊಂಡು ಹೋಳಿ ಹಬ್ಬಕ್ಕೆ ಸಹಕರಿಸಿದ್ದವು.

ಯುವ ಸಮೂಹವು ರಾಂ ಆಡ್ ಕೋ ವೃತ್ತದಲ್ಲಿ ಜಮಾಯಿಸಿ ನೃತ್ಯ ಮಾಡಿ, ಒಬ್ಬರಿಗೊಬ್ಬರು ನೆತ್ತಿ ಮೇಲೆ ಮೊಟ್ಟೆ ಕುಕ್ಕಿ ಕೇಕೆ ಹಾಕುತ್ತಾ ಬಟ್ಟೆಗಳನ್ನು ಹರಿದುಕೊಂಡು ಮೇಲಕ್ಕೆ ಬಿಸಾಕುವುದರಲ್ಲಿ ಅನಂದ ಪಡುತ್ತಿತ್ತು. ಹೋಳಿ ಆಟಕ್ಕಾಗಿ ಯುವಕರಿಗೆ ಹಾಗೂ ಯುವತಿಯರಿಗೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಲಾಗಿತ್ತು.

ಮಡಕೆ ಹೊಡೆಯುವುದು: 
ಮಧ್ಯಾಹ್ನ ರಾಮ್ ಆಂಡ್ ಕೋ ವೃತ್ತ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಎತ್ತರದಲ್ಲಿ ಮಡಕೆ ಕಟ್ಟಿ ಆದರಲ್ಲಿ ಬಣ್ಣದ ನೀರನ್ನು ತುಂಬಿ ಒಡೆದರು. ಮಡಕೆ ಒಡೆಯುತ್ತಿದ್ದಾಗ ನೀರನ್ನು ಎರಚುವ ಮೂಲಕ ಖುಷಿಪಟ್ಟರು. 

ಕೆಲವೆಡೆ ಬಣ್ಣದಲ್ಲಿ ಮಿಂದೆದ್ದ ಯುವ ಗುಂಪುಗಳು ಬೈಕ್‍ಗಳನ್ನು ಏರಿ ಕರ್ಕಶ ಶಬ್ಧಗಳನ್ನು ಮಾಡುತ್ತಾ, ಕೇಕೆ ಹಾಕುತ್ತಾ ಹೋಗುತ್ತಿದ್ದರು. ಯುವಕರು ಮುಖಕ್ಕೆ ಮಾಸ್ಕ್, ವಿಭಿನ್ನ ಕನ್ನಡಕ ಸೇರಿದಂತೆ ವಿವಿಧ ಪೋಷಾಕಿನ ರಂಗಿನಲ್ಲಿ ತಿರುಗಾಡಿದರು.  

ಆರಕ್ಷಕರಿಂದ ಬಿಗಿ ಬಂದೋಬಸ್ತ್: 
ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ನಗರದ ಪ್ರಮುಖ ಭಾಗಗಳಾದ ರಾಂ ಆಡ್ ಕೋ, ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು ರಸ್ತೆ, ವೈದ್ಯಕೀಯ ಕಾಲೇಜು ಹಾಸ್ಟೆಲ್, ಬಿಐಇಟಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹಾಸ್ಟೆಲ್ ಮುಂಭಾಗದಲ್ಲಿ ಯಾವುದೇ ಅವಘಡಗಳಿಗೆ ಅಸ್ಪದ ನೀಡದಂತೆ ಪೊಲೀಸರು ಕಾವಲಿನಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News