ಬಾಲಚಂದ್ರ ಕಳಗಿ ಸಾವಿನ ಸುತ್ತ ಸಂಶಯದ ಹುತ್ತ: ಸೂಕ್ತ ತನಿಖೆಗೆ ಕೊಡಗು ಬಿಜೆಪಿ ಆಗ್ರಹ

Update: 2019-03-21 12:09 GMT

ಮಡಿಕೇರಿ, ಮಾ.21: ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಪಾಜೆಯ ಬಾಲಚಂದ್ರ ಕಳಗಿ ಅವರ ಸಾವು ಹಲವು ಸಂಶಯಗಳನ್ನು ಹುಟ್ಟು ಹಾಕಿದ್ದು, ಇದು ಒಂದು ವ್ಯವಸ್ಥಿತ ಕೊಲೆ ಎಂದು ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿರುವ ಹಿನ್ನೆಲೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲಚಂದ್ರ ಕಳಗಿ ಅವರು ತಾವು ಚಲಾಲಿಸುತ್ತಿದ್ದ ಮಾರುತಿ ಓಮ್ನಿಗೆ ಲಾರಿ ಢಿಕ್ಕಿಯಾಗಿ ಕೊನೆಯುಸಿರೆಳೆದಿದ್ದು, ಈ ಘಟನೆಯ ಬಗ್ಗೆ ಅವರ ಕುಟುಂಬಸ್ಥರು ಮತ್ತು ಸಂಪಾಜೆ ವಿಭಾಗದ ಜನತೆ ಅಂತ್ಯಸಂಸ್ಕಾರದ ಸಂದರ್ಭ ಅಳಲು ತೋಡಿಕೊಂಡು, ಕಳಗಿ ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಇದರಿಂದ ಕಳಗಿ ಸಾವಿನ ಪ್ರಕರಣದ ಬಗ್ಗೆ ಬಿಜೆಪಿಗೂ ಸಂಶಯ ಮೂಡಿದ್ದು, ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ತನಿಖೆಯನ್ನು ಚುರುಕುಗೊಳಿಸಬೇಕೆಂದು ಒತ್ತಾಯಿಸಿದರು.

ಲಾರಿ ಚಾಲಕನನ್ನು ತಡವಾಗಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಲಾರಿ ಬ್ರೇಕ್‍ನಲ್ಲಿ ಸಮಸ್ಯೆ ಇತ್ತು ಎಂದು ಆತ ಹೇಳಿಕೆ ನೀಡಿದ್ದು, ಇದನ್ನು ನಂಬಲು ಸಾಧ್ಯವಿಲ್ಲವೆಂದು ತಿಳಿಸಿದ ಭಾರತೀಶ್ ತಕ್ಷಣ ಪೊಲೀಸರು ತನಿಖೆಯನ್ನು ನಡೆಸಿ ಕ್ರಮ ಕೈಗೊಳ್ಳಬೇಕೆಂದರು.

ಸಂಪಾಜೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳ ವಿರುದ್ಧ ಬಾಲಚಂದ್ರ ಕಳಗಿ ಅವರು ಹೋರಾಟ ನಡೆಸಿದ್ದರು. ಇದರ ಪರಿಣಾಮ ಕಳಗಿ ಅವರಿಗೆ ಬೆದರಿಕೆ ಕರೆಗಳು ಕೂಡ ಬರುತ್ತಿತ್ತು ಎಂದು ಕುಟುಂಬದ ಸದಸ್ಯರು ಹೇಳಿಕೊಂಡಿದ್ದು, ಸಮಗ್ರ ತನಿಖೆಯಿಂದಷ್ಟೆ ಸತ್ಯ ಹೊರ ಬರಲು ಸಾಧ್ಯವೆಂದು ಭಾರತೀಶ್ ಹೇಳಿದರು.  

ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್ ಕುಮಾರ್ ಮಾತನಾಡಿ, ಸಂಪಾಜೆ ಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ವಿರುದ್ಧ ಬಾಲಚಂದ್ರ ಕಳಗಿ ಅವರು ಧ್ವನಿ ಎತ್ತುತ್ತಲೇ ಇದ್ದರು ಎಂದರು. ಮಡಿಕೇರಿಗೆ ಬರಲು ಉತ್ತಮ ಮಾರ್ಗವಿದ್ದರೂ ಕಳಗಿ ಅವರು ತೆರಳುತ್ತಿದ್ದ ಮಾರ್ಗವನ್ನೇ ಲಾರಿ ಚಾಲಕ ಅವಲಂಬಿಸಿದ ಬಗ್ಗೆಯೂ ಸಂಶಯಗಳಿದೆ ಎಂದು ತಿಳಿಸಿದರು.    

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರಾಬಿನ್ ದೇವಯ್ಯ, ವಿ.ಕೆ. ಲೋಕೇಶ್, ಜಿಲ್ಲಾ ವಕ್ತಾರ ನಾಪಂಡ ಕಾಳಪ್ಪ ಹಾಗೂ ಮಡಿಕೇರಿ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೋಡಿರ ಅಶ್ವತ್ಥ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News