ದೇಶಾದ್ಯಂತ 60 ಕ್ಷೇತ್ರಗಳಲ್ಲಿ ಸಿಪಿಐ(ಎಂಎಲ್) ಸ್ಪರ್ಧೆ: ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ರುದ್ರಯ್ಯ

Update: 2019-03-21 12:49 GMT

ಚಿಕ್ಕಮಗಳೂರು, ಮಾ.21: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಿಪಿಐ(ಎಂಎಲ್) ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು, ಸೋಮವಾರ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ರುದ್ರಯ್ಯ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಪಿಐ(ಎಂಎಲ್) ಪಕ್ಷದಿಂದ ದೇಶದ್ಯಾಂತ 60 ಅಭ್ಯರ್ಥಿಗಳು ಹಾಗೂ ಮಿತ್ರ ಪಕ್ಷಗಳಿಂದ 10 ಸೇರಿದಂತೆ 70 ಅಭ್ಯರ್ಥಿಗಳು ಕಣ್ಣಕಿಳಿಯಲಿದ್ದಾರೆ. ರಾಜ್ಯಾದ್ಯಂತ 5 ಕ್ಷೇತ್ರಗಳಲ್ಲಿ ಸಿಪಿಐ(ಎಂಎಲ್) ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದ ಅವರು, ಮೈಸೂರು ಕೊಡಗು ಕ್ಷೇತ್ರದಿಂದ ಡಿ.ಎಸ್.ನಿರ್ವಾಣಪ್ಪ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಎಸ್.ವಿಜಯ್, ಕೊಪ್ಪಳ ಕ್ಷೇತ್ರದಿಂದ ಹೇಮರಾಜ್ ವೀರಾಪೂರ, ರಾಯಚೂರು ಕ್ಷೇತ್ರದಿಂದ ವಿರುಪಾಕ್ಷಿಗೌಡ ಮರಾಠ, ಬಳ್ಳಾರಿ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಸ್ಫರ್ಧಿಸುವ ಎಸ್.ವಿಜಯ್ ಅವರು ಸೋಮವಾರ ತಮ್ಮ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದರು.

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನಹರಿಸಲಿಲ್ಲ. ಕೇವಲ ಪಕ್ಷದ ಸಭೆಗಳಲ್ಲಿ ಭಾಗವಹಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರೀಯ ರಾಜಕಾರಣದಲ್ಲಿ ತೊಡಗಿಸಿಕೊಂಡರೇ ಹೊರತು ಕ್ಷೇತ್ರದ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಸದ್ಯ ಚುನಾವಣಾ ಸಂದರ್ಭದಲ್ಲಿ ಮತ್ತೆ ಜನರ ಬಳಿಗೆ ಬಂದು ನಾಟಕ ಆರಂಭಿಸಿದ್ದಾರೆಂದು ಅವರು ದೂರಿದರು.

ರಾಜ್ಯದ 5 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಫರ್ಧೆಗೆ ಇಳಿಯಲಿದ್ದಾರೆ. ಬೆಂಗಳೂರು ಕೇಂದ್ರೀಯ ಕ್ಷೇತ್ರದಿಂದ ಸ್ಪರ್ಧಿಸುವ ಜನಪರ ಚಿಂತಕ ಹಾಗೂ ನಟ ಪ್ರಕಾಶ್ ರೈ ಅವರನ್ನು ಪಕ್ಷ ಬೆಂಬಲಿಸಲಿದೆ ಎಂದ ಅವರು, ಕೋಮುವಾದ, ಫ್ಯಾಸಿಸಂ, ನವ ಉದಾರವಾದವನ್ನು ಒಟ್ಟಿಗೆ ವಿರೋಧಿಸುವ ಹಾಗೂ ಜನಾಂದೋಲಗಳ ಹಿನ್ನೆಲೆಯಿಂದ ಸ್ಫರ್ಧಿಸುವ ಇತರ ಅಭ್ಯರ್ಥಿಗಳಿಗೂ ಪಕ್ಷದ ವತಿಯಿಂದ ಬೆಂಬಲ ನೀಡಲಿದ್ದೇವೆ ಎಂದರು.

ಇತ್ತೀಚೆಗೆ ನಡೆದ ಪುಲ್ವಾಮಾ ತೀವ್ರವಾದಿ ದಾಳಿ ಹಾಗೂ ಸೈನಿಕರ ಹತ್ಯೆಯನ್ನು ಚುನಾವಣೆಗೆ ಬಳಸಿಕೊಳ್ಳಲು ಅಧಿಕಾರ ನಿರತ ಬಿಜೆಪಿ ಮೈತ್ರಿ ಸಜ್ಜಾಗಿದೆ. ಕಳೆದ ಚುನಾವಣೆಯಲ್ಲಿ ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಲಾಗಿಲ್ಲ ಎಂಬ ಆತಂಕ ಬಿಜೆಪಿಯಲ್ಲಿದ್ದು ಯುದ್ಧ, ದೇಶ ಪ್ರೇಮದ ಉನ್ಮಾದ ಹರಡಿ ಚುನಾವಣೆ ಗೆಲ್ಲಲು ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿದ ರುದ್ರಯ್ಯ, ಮೋದಿ ನೇತೃತ್ವದ ಸರಕಾರ ವರ್ಷದಲ್ಲಿ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ, ಬದಲಾಗಿ 2018ರಲ್ಲಿ ಒಂದು ಕೋಟಿ ಉದ್ಯೋಗ ನಾಶ ಮಾಡಲಾಗಿದೆ. ಹೊರದೇಶದ ಕಪ್ಪುಹಣ ತರಲಿಲ್ಲ, ಪ್ರತಿಯೊಬ್ಬರ ಖಾತೆಗೆ  15ಲಕ್ಷ ಜಮೆ ಮಾಡಲಿಲ್ಲ ಎಂದ ಅವರು, ಕಳೆದ 6 ದಶಕಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಸರಕಾರ ಕಾರ್ಪೋರೇಟರ್ ಸಂಸ್ಥೆಗಳ ಪರ ಕೆಲಸ ಮಾಡಿದೆ. ಬಿಜೆಪಿ ಹಾಗೂ ಮೈತ್ರಿ ಶಕ್ತಿಯನ್ನು ಹಾಗೂ ಕಾಂಗ್ರೆಸ್ ಹಾಗೂ ಜೆಡಿಎಸ್ ದಲ್ಲಾಳಿಗಳನ್ನು ಸೋಲಿಸಿ ಸಿಪಿಐ(ಎಂಎಲ್) ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಜನತೆಯಲ್ಲಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಿಪಿಐ(ಎಂ.ಎಲ್) ಜಿಲ್ಲಾ ಕಾರ್ಯದರ್ಶಿ ಜಗದೀಶ್, ಬಸವರಾಜ್, ಅಭ್ಯರ್ಥಿ ಎಸ್.ವಿಜಯ್, ಸಂದೀಪ, ಬಿ.ಕೆ.ಗೋಪಾಲ್ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಒತ್ತುವರಿ ಸಮಸ್ಯೆ ಇದೆ. ಆದಿವಾಸಿ ಜನರನ್ನು ಎಬ್ಬಿಸುವ ಹುನ್ನಾರ ನಡೆಯುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಇದೆ. ಈ ಜ್ವಲಂತ ಸಮಸ್ಯೆಗಳ ಬಗ್ಗೆ ಶೋಭಾ ಕರಂದ್ಲಾಜೆ ಸಂಸತ್‍ನಲ್ಲಿ ಎಂದೂ ಚರ್ಚಿಸಲಿಲ್ಲ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿಲ್ಲ. ತಮ್ಮ ಅವಧಿಯಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದರ ಬಗ್ಗೆ ಅವರು ಶ್ವೇತಪತ್ರ ಹೊರಡಿಸಬೇಕು. ಕಾಂಗ್ರೆಸ್ ಪಕ್ಷದಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿಯಲು ಸಮರ್ಥ ಅಭ್ಯರ್ಥಿ ಇಲ್ಲದೇ ಜೆಡಿಎಸ್ ಮೊರೆ ಹೋಗಿದ್ದಾರೆ.
- ಎಸ್.ವಿಜಯ್, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಿಪಿಐ(ಎಂಎಲ್) ಅಭ್ಯರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News