ಮನೆಗೆ ಆಕಸ್ಮಿಕ ಬೆಂಕಿ: ಸಂಪೂರ್ಣ ಸುಟ್ಟು ಕರಕಲು

Update: 2019-03-21 12:56 GMT

ಚಿಕ್ಕಮಗಳೂರು, ಮಾ.21: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿಕೊಂಡ ಬೆಂಕಿಯಿಂದಾಗಿ ಮನೆಯೊಂದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಬುಧವಾರ ಸಂಜೆ ತಾಲೂಕಿನ ಜೇನುಗದ್ದೆ ಗ್ರಾಮದಲ್ಲಿ ವರದಿಯಾಗಿದೆ. 

ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಚಿಕ್ಕಮಗಳೂರು ತಾಲೂಕಿಗೆ ಒಳಪಟ್ಟಿರುವ ಜೇನುಗದ್ದೆ ಗ್ರಾಮದ ಕಾಫಿ ಬೆಳೆಗಾರ ವಿಕ್ರಮ್ ಎಂಬವರ ಮನೆ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದ್ದು, ವಿಕ್ರಮ್ ಇತ್ತೀಚೆಗಷ್ಟೇ ಈ ಮನೆಯನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ್ದರು ಎಂದು ತಿಳಿದು ಬಂದಿದೆ. 

ಬುಧವಾರ ಸಂಜೆ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ವಿದ್ಯುತ್ ವೈರ್ ಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ಬೆಂಕಿ ಮನೆಗೆ ಹಾಕಲಾಗಿದ್ದ ಮರದ ರೀಪ್‍ಗಳಿಗೆ ಬಹುಬೇಗನೆ ವ್ಯಾಪಿಸಿ ದಿಢೀರನೆ ಇಡೀ ಮನೆಗೆ ಬೆಂಕಿ ವ್ಯಾಪಿಸಿಕೊಂಡಿದೆ. ಬೆಂಕಿಯ ಸುಳಿವು ಸಿಗುತ್ತಿದ್ದಂತೆ ಮನೆಯಲ್ಲಿದ್ದ ವಿಕ್ರಮ್ ಸಂಬಂಧಿಗಳು ಕೂಡಲೇ ಮನೆಯಿಂದ ಹೊರಗೆ ಬಂದಿದ್ದರಿಂದ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯನ್ನು ಬಹುತೇಕವಾಗಿ ಮರದಿಂದಲೇ ನಿರ್ಮಿಸಿದ್ದಿರಿಂದ ಬೆಂಕಿ ಬೇಗ ಮನೆಯನ್ನು ಆವರಿಸಿಕೊಂಡಿದೆ ಎಂದು ತಿಳಿದು ಬಂದಿದೆ. 

ಘಟನೆಯಲ್ಲಿ ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಪೀಠೋಪಕರಣಗಳು ಸೇರಿದಂತೆ ಇಡೀ ಮನೆ ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದ್ದು, ಬೆಂಕಿ ಅವಘಡವನ್ನು ಅಗ್ನಿಶಾಮಕ ದಳಕ್ಕೆ ತಿಳಿಸಲಾಯಿತಾದರೂ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಮನೆ ಬಹುತೇಕ ಬೆಂಕಿಗಾಹುತಿಯಾಯಿತೆಂದು ತಿಳಿದುಬಂದಿದೆ. ಮನೆ ಬೆಂಕಿಗೆ ಆಹುತಿಯಾಗಿದ್ದರಿಂದ ವಿಕ್ರಮ್ ಅವರ ಕುಟುಂಬ ಸದ್ಯ ಸಂಬಂಧಿಗಳ ಮನೆಯಲ್ಲಿ ಆಶ್ರಯ ಪಡೆಯುವಂತಾಗಿದೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News