ಮಂಡ್ಯ ಕಾಂಗ್ರೆಸ್ ನಾಯಕರ ಮನವೊಲಿಕೆ ಜವಾಬ್ದಾರಿ ಡಿಕೆಶಿ-ಝಮೀರ್ ಅಹ್ಮದ್ ಹೆಗಲಿಗೆ

Update: 2019-03-21 14:02 GMT

ಬೆಂಗಳೂರು, ಮಾ.21: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್‌ಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಬೆಂಬಲ ನೀಡುತ್ತಿರುವುದರಿಂದ, ಆತಂಕಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸ್ಥಳೀಯ ನಾಯಕರ ಮನವೊಲಿಕೆಯ ಜವಾಬ್ದಾರಿಯನ್ನು ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ಝಮೀರ್ ಅಹ್ಮದ್ ಹೆಗಲಿಗೆ ವಹಿಸಿದ್ದಾರೆ.

ಸುಮಲತಾ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಜಿಲ್ಲಾಧಿಕಾರಿ ಕಚೇರಿಯಿಂದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ವರೆಗೆ ನಡೆದ ಮೆರವಣಿಗೆಯಲ್ಲಿ ಹಲವಾರು ಮಂದಿ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದುಕೊಂಡು ಸಾಗುತ್ತಿರುವುದು ಕಂಡು ಬಂದಿತ್ತು. ಇದರಿಂದ, ಬೇಸರಗೊಂಡಿರುವ ಮುಖ್ಯಮಂತ್ರಿ, ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್‌ರನ್ನು ಬೆಂಬಲಿಸುವ ನಿಟ್ಟಿನಲ್ಲಿ ಸ್ಥಳೀಯ ನಾಯಕರ ಮನವೊಲಿಸಿ ಎಂದು ಉಭಯ ಸಚಿವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ, ಶ್ರೀರಂಗಪಟ್ಟಣದ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಸಚಿವ ಝಮೀರ್ ಅಹ್ಮದ್‌ಗೆ ಆಪ್ತರಾಗಿದ್ದು, ಅವರ ಮೂಲಕ ಇಬ್ಬರು ನಾಯಕರು ಹಾಗೂ ಅವರ ಬೆಂಬಲಿಗರ ಮನವೊಲಿಸಿ, ಮೈತ್ರಿ ಅಭ್ಯರ್ಥಿ ಪರ ಬೆಂಬಲ ಪಡೆಯುವಂತೆ ಮುಖ್ಯಮಂತ್ರಿ ಕೋರಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ನಾಯಕರು ಯಾವುದೇ ಕಾರಣಕ್ಕೂ ಸುಮಲತಾ ಬೆನ್ನಿಗೆ ನಿಲ್ಲಬಾರದು. ರಾಜ್ಯಮಟ್ಟದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ. ಎಲ್ಲ ಕ್ಷೇತ್ರಗಳಲ್ಲೂ ಉಭಯ ಪಕ್ಷಗಳ ಕಾರ್ಯಕರ್ತರು, ಮುಖಂಡರು ಮೈತ್ರಿ ಧರ್ಮವನ್ನು ಪಾಲಿಸುವುದು ಅನಿವಾರ್ಯ. ಮೈತ್ರಿ ಪಾಲನೆ ಮಾಡಲು ಈ ಬಾರಿ ನಿಖಿಲ್ ಗೆ ಕಾಂಗ್ರೆಸ್ ಬೆಂಬಲ ಕೊಡಬೇಕು. ಅವರ ಸಹಕಾರವಿಲ್ಲದೇ ನಾವು ಚುನಾವಣೆ ಎದುರಿಸುವುದು ಕಷ್ಟ. ಆದುದರಿಂದ, ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರ ಸಹಕಾರ ನಮಗೆ ಬೇಕು. ಮಂಡ್ಯ ಜಿಲ್ಲೆಯಲ್ಲಿ ಈ ಹಿಂದೆ ನಡೆದಿರುವ ಕಹಿ ಘಟನೆಗಳನ್ನು ಮರೆಯೋಣ. ಇನ್ನು ಮುಂದೆ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್‌ಗೆ ಯಾವುದೇ ತೊಂದರೆ, ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸಚಿವರಿಗೆ ಕುಮಾರಸ್ವಾಮಿ ತಿಳಿಸಿದ್ದಾರೆ ಎನ್ನಲಾಗಿದೆ.

ಮಂಡ್ಯದ ಕಾಂಗ್ರೆಸ್ ನಾಯಕರಿಗೆ ಏನು ಬೇಕೋ ಅದನ್ನು ನಾನು ಮಾಡುತ್ತೇನೆ. ಇದೊಂದು ಬಾರಿ ಅವರು ನಮ್ಮ ಜೊತೆ ನಿಲ್ಲಬೇಕು. ಸಾಧ್ಯವಾದರೆ, ಜಿಲ್ಲಾ ಕಾಂಗ್ರೆಸ್ ಮುಖಂಡರೊಂದಿಗೆ ಒಂದು ಸಭೆಯನ್ನು ನಿಗದಿ ಮಾಡಿ, ನಾನೂ ಆ ಸಭೆಗೆ ಬಂದು ಅವರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡೋಣ ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News