ಬಿಜೆಪಿ ಪಟ್ಟಿ ಬಿಡುಗಡೆ: ವಾರಣಾಸಿಯಿಂದ ಮೋದಿ ಸ್ಪರ್ಧೆ

Update: 2019-03-21 15:26 GMT

ಹೊಸದಿಲ್ಲಿ,ಮಾ.21: ಮುಂಬರುವ ಲೋಕಸಭಾ ಚುನಾವಣೆಗಾಗಿ ತನ್ನ 182 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಗುರುವಾರ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪುನರಾಯ್ಕೆಯನ್ನು ಬಯಸಿ ವಾರಣಾಸಿಯಲ್ಲಿ ಕಣಕ್ಕಿಳಿಯಲಿದ್ದರೆ,ಹಾಲಿ ಸಂಸದ ಎಲ್.ಕೆ.ಆಡ್ವಾಣಿಯವರ ಗಾಂಧಿನಗರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸ್ಪರ್ಧಿಸಲಿದ್ದಾರೆ.

 ಗೃಹಸಚಿವ ರಾಜನಾಥ ಸಿಂಗ್ ಅವರು ಲಕ್ನೋ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ನಾಗ್ಪುರ ಕ್ಷೇತ್ರಗಳಿಂದ ಪುನರಾಯ್ಕೆಯನ್ನು ಬಯಸಿ ಕಣಕ್ಕಿಳಿಯಲಿದ್ದಾರೆ ಎಂದು ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 ಪ್ರತಿಷ್ಠಿತ ಅಮೇಠಿ ಕ್ಷೇತ್ರವೂ ಈ ಬಾರಿಯೂ ಕೇಂದ್ರ ಸಚಿವೆ ಸ್ಮತಿ ಇರಾನಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ನಡುವೆ ಹಣಾಹಣಿಗೆ ಸಾಕ್ಷಿಯಾಗಲಿದೆ. 2014ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ರಾಹುಲ್ ಅವರು ಇರಾನಿಯವರನ್ನು 1.07 ಲ.ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

  ಕೇಂದ್ರ ಸಚಿವರಾದ ವಿ.ಕೆ.ಸಿಂಗ್,ಮಹೇಶ ಶರ್ಮಾ,ಕಿರಣ್ ರಿಜಿಜು ಮತ್ತು ಜಿತೇಂದ್ರ ಸಿಂಗ್ ಅವರು ಅನುಕ್ರಮವಾಗಿ ಘಾಝಿಯಾಬಾದ್,ನೊಯ್ಡ,ಅರುಣಾಚಲ ಪ್ರದೇಶ ಮತ್ತು ಉಧಮ್‌ಪುರ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಪೂನಂ ಮಹಾಜನ ಅವರು ಮುಂಬೈ ಉತ್ತರ ಮಧ್ಯ ಕ್ಷೇತ್ರದಿಂದ ಪುನರಾಯ್ಕೆಯನ್ನು ಬಯಸಿ ಕಣಕ್ಕಿಳಿಯಲಿದ್ದಾರೆ.

 ಗುರವಾರ ಬಿಜೆಪಿಯು ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಉಳಿದ ಆರು ಕ್ಷೇತ್ರಗಳಿಗಾಗಿ ತನ್ನ ಅಭ್ಯರ್ಥಿಗಳನ್ನೂ ಘೋಷಿಸಿದೆ. ಅದು ರವಿವಾರ ಆಂಧ್ರಪ್ರದೇಶದ 123 ಮತ್ತು ಅರುಣಾಚಲ ಪ್ರದೇಶದ 54 ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿತ್ತು. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಮುಕ್ತೊ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

32 ಸದಸ್ಯ ಬಲದ ಸಿಕ್ಕಿಂ ವಿಧಾನಸಭೆಗಾಗಿ 12 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳ ಹೆಸರುಗಳನ್ನೂ ಬಿಜೆಪಿ ಪ್ರಕಟಿಸಿದೆ. ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳು ಎ.11ರಂದು ನಡೆಯಲಿವೆ.

ಕಾಂಗ್ರೆಸ್ ಲೋಕಸಭಾ ಚುನಾವಣೆಗಾಗಿ ತನ್ನ ಒಟ್ಟು 146 ಅಭ್ಯರ್ಥಿಗಳ ಆರು ಪಟ್ಟಿಗಳನ್ನು ಈಗಾಗಲೇ ಪ್ರಕಟಿಸಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತನ್ನ ಭದ್ರಕೋಟೆ ರಾಯ್‌ಬರೇಲಿಯಿಂದ ಸ್ಪರ್ಧಿಸಲಿದ್ದಾರೆ.

ಕೇರಳದಲ್ಲಿ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪ್ರಕಟಿಸಿರುವ ತನ್ನ 12 ಅಭ್ಯರ್ಥಿಗಳ ಪಟ್ಟಿಯಲ್ಲಿ ಹಿರಿಯ ನಾಯಕ ಹಾಗೂ ಐದು ಬಾರಿಯ ಸಂಸದ ಕೆ.ವಿ.ಥಾಮಸ್ ಅವರ ಹೆಸರಿಲ್ಲದಿರುವುದು ಕುತೂಹಲ ಕೆರಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News