ಧಾರವಾಡದಲ್ಲಿ ಕಟ್ಟಡ ಕುಸಿತ: ಸಾವಿನ ಸಂಖ್ಯೆ 12ಕ್ಕೆ ಏರಿಕೆ

Update: 2019-03-21 15:03 GMT

ಬೆಂಗಳೂರು, ಮಾ.21: ಧಾರವಾಡ ನಗರದಲ್ಲಿ ಬಹುಮಹಡಿ ವಾಣಿಜ್ಯ ಸಂಕಿರ್ಣ ಕಟ್ಟಡ ಕುಸಿದು ಬಿದ್ದ ಪ್ರಕರಣ ಸಂಬಂಧ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿದ್ದು, ಅವಶೇಷಗಳಡಿ ಇದ್ದ ನಾಲ್ಕು ಶವಗಳನ್ನು ಗುರುವಾರ ಮಧ್ಯಾಹ್ನ ರಕ್ಷಣಾ ಸಿಬ್ಬಂದಿ ಹೊರ ತೆಗೆದರು.

ಇದರಲ್ಲಿ 8 ವರ್ಷದ ಬಾಲಕಿ ದಿವ್ಯಾ ಹಾಗೂ ಹರಿಹರ ತಾಲೂಕಿನ ಜಹಾಂಗಿರ ಬಾಷಾ(31)ಎಂದು ಗುರುತಿಸಲಾಗಿದ್ದು, ಉಳಿದವರ ವಿವರ ತಿಳಿದುಬಂದಿಲ್ಲ. ಮೃತದೇಹಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂಜಿನಿಯರ್ ವಿವೇಕ್ ಪವಾರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹುಬ್ಬಳ್ಳಿ-ಧಾರವಾಡ ಎಸ್ಪಿಎಂ.ಎನ್.ನಾಗರಾಜ್ ತಿಳಿಸಿದರು.

ಘಟನೆ ನಂತರ ತಲೆಮರೆಸಿಕೊಂಡಿದ್ದ ವಿವೇಕ ಪವಾರ್ ಅನ್ನು ಮಹಾರಾಷ್ಟ್ರದ ಕೊಲ್ಲಾಪುರ ಲಾಡ್ಜ್‌ವೊಂದರಲ್ಲಿ ಪೊಲೀಸರು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಹೇಳಿದರು.

ಕಟ್ಟಡ ಕುಸಿದು ನಾಲ್ಕು ದಿನಗಳಾದರೂ ರಕ್ಷಣಾ ಕಾರ್ಯ ಇನ್ನೂ ಮುಗಿದಿಲ್ಲ. ಕಳೆದ 3 ದಿನಗಳಿಂದ ಅವಶೇಷಗಳಡಿ ಸಿಲುಕಿರುವ 55 ಜನರನ್ನು ರಕ್ಷಣೆ ಮಾಡಲಾಗಿದೆ. 12 ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಅವಶೇಷಗಳಡಿ ಸಿಲುಕಿರುವ ಅಮಾಯಕರನ್ನು ರಕ್ಷಿಸಲು ಹಲವು ಹಂತಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಘಾಜಿಯಾಬಾದ್ ಎನ್‌ಡಿಆರ್‌ಎಫ್ 72 ಸಿಬ್ಬಂದಿ, ಬೆಂಗಳೂರು ಎನ್‌ಡಿಆರ್‌ಎಫ್ 40 ಮತ್ತು ಎಸ್‌ಡಿಆರ್‌ಎಫ್ 40 ಸಿಬ್ಬಂದಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ 240 ಸಿಬ್ಬಂದಿ ಬಿಎಸ್‌ಎಫ್120 ಯೋಧರು. ವಿವಿಧ ಪೊಲೀಸ್ ಮತ್ತು ಆರ್‌ಟಿಒ ಸುಮಾರು 800 ಸಿಬ್ಬಂದಿ, 100ಕ್ಕೂ ಅಧಿಕ ಸ್ವಯಂ ಸೇವಕರು, ಪಿಡಬ್ಯ್ಲೂಡಿಯ 12 ತಜ್ಞ ಇಂಜಿನಿಯರ್‌ಗಳು, ಹುಬ್ಬಳ್ಳಿ ಧಾರವಾಡ ಮಹಾ ನಗರಪಾಲಿಕೆಯ 120ಕ್ಕೂ ಹೆಚ್ಚು ಸಿಬ್ಬಂದಿ, ಕಂದಾಯ ಇಲಾಖೆ 60 ಹಾಗೂ ಗೃಹರಕ್ಷಕ ದಳದ 80 ಸಿಬ್ಬಂದಿ, ಆರೋಗ್ಯ ಇಲಾಖೆಯ 150ಕ್ಕೂ ವಿವಿಧ ಹಂತರ ನೌಕರರು, ಮತ್ತು 30 ಅಂಬ್ಯುಲೆನ್ಸ್, 6 ಕ್ರೇನ್‌ಗಳು ಕಾರ್ಯಾಚರಣೆಯಲ್ಲಿ ನಿರತವಾಗಿವೆ.

ದೂರದ ಸಂಬಂಧಿ ವಶಕ್ಕೆ

ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧ ಕಟ್ಟಡದ ಮಾಲಕದ ಪಾಲುದಾರ ಎನ್ನಲಾದ ಗಂಗಣ್ಣ ಸಿಂತ್ರೆ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ದೂರದ ಸಂಬಂಧಿ ಗಂಗಣ್ಣ ಸಿಂತ್ರೆ ಕಟ್ಟಡದ ಪ್ರಮುಖ ಪಾಲುದಾರರು ಎನ್ನಲಾಗಿದೆ. ಇದೇ ಪ್ರಕರಣದಲ್ಲಿ ರವಿ ಸಬರದ, ಬಸವರಾಜ್ ನಿಗದಿ, ಮಹಾಬಳೇಶ್ವರ ಕರುಬಗುಡ್ಡಿ, ರಾಜು ಘಾಟಿನ ಎಂಬವವರು ಆರೋಪಿಗಳಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾರೆ. ಈ ಬಗ್ಗೆ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News