ಮೂರು ಬಾರಿ ರಿಚರ್ಡ್ ಹ್ಯಾಡ್ಲಿ ಪದಕ ಜಯಿಸಿದ ಕಿವೀಸ್‌ನ ಮೊದಲ ಆಟಗಾರ ವಿಲಿಯಮ್ಸನ್

Update: 2019-03-22 03:30 GMT

ಆಕ್ಲಂಡ್, ಮಾ.21: ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೂರು ಬಾರಿ ರಿಚರ್ಡ್ ಹ್ಯಾಡ್ಲಿ ಪದಕ ಜಯಿಸಿದ ತನ್ನ ದೇಶದ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಇದೇ ವೇಳೆ, ಮಹಿಳಾ ಆಲ್‌ರೌಂಡರ್ ಅಮೆಲಿಯಾ ಕೆರ್ರ್‌ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವರ್ಷದ ರಾಷ್ಟ್ರೀಯ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು.

ವಿಲಿಯಮ್ಸನ್ ಎರಡು ಬಾರಿ ಪದಕ ಜಯಿಸಿದ್ದ ಸಹ ಆಟಗಾರ ರಾಸ್ ಟೇಲರ್ ಸಾಧನೆಯನ್ನು ಹಿಂದಿಕ್ಕಿ ಹೊಸ ದಾಖಲೆ ನಿರ್ಮಿಸಿದರು. ಟ್ರೆಂಟ್ ಬೌಲ್ಟ್ ಹಾಗೂ ಬ್ರೆಂಡನ್ ಮೆಕಲಮ್ ಈ ಮೊದಲು ತಲಾ ಒಂದು ಬಾರಿ ಈ ಪದಕ ಜಯಿಸಿದ್ದರು. 2010-11ರಲ್ಲಿ ಸ್ಥಾಪಿಸಲಾಗಿರುವ ಈ ಪದಕವನ್ನು ವರ್ಷಪೂರ್ತಿ ಮೂರು ಮಾದರಿ ಕ್ರಿಕೆಟ್‌ನಲ್ಲಿ ಆಟಗಾರನೊಬ್ಬ ನೀಡುವ ಪ್ರದರ್ಶನವನ್ನು ಆಧರಿಸಿ ಪ್ರತಿ ವರ್ಷ ಶ್ರೇಷ್ಠ ಆಟಗಾರನಿಗೆ ನೀಡಲಾಗುತ್ತದೆ.

ವಿಲಿಯಮ್ಸನ್ ನ್ಯೂಝಿಲೆಂಡ್ ತಂಡ ವೆಸ್ಟ್‌ಇಂಡೀಸ್, ಶ್ರೀಲಂಕಾ, ಇಂಗ್ಲೆಂಡ್, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧ ಸತತ 5 ಟೆಸ್ಟ್ ಸರಣಿ ಜಯಿಸಲು ತಂಡದ ನಾಯಕತ್ವವಹಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 20 ಶತಕಗಳನ್ನು ಸಿಡಿಸಿದ ನ್ಯೂಝಿಲೆಂಡ್‌ನ ಮೊದಲ ಆಟಗಾರ ವಿಲಿಯಮ್ಸನ್. 2018ರ ಆರಂಭದಿಂದ 9 ಟೆಸ್ಟ್‌ನಲ್ಲಿ 925 ರನ್, 21 ಏಕದಿನಗಳಲ್ಲಿ 838 ರನ್ ಹಾಗೂ 15 ಟಿ-20ಯಲ್ಲ್ಲಿ 332 ರನ್ ಗಳಿಸಿದ್ದಾರೆ. ವರ್ಷದ ಮಹಿಳಾ ಏಕದಿನ ಆಟಗಾರ್ತಿ ಪ್ರಶಸ್ತಿ ಗೆದ್ದುಕೊಂಡಿರುವ 18 ರ ಹರೆಯದ ಕೆರ್ರ್‌ 59ರ ಸರಾಸರಿಯಲ್ಲಿ 415 ರನ್ ಗಳಿಸಿದ್ದು, ಇದರಲ್ಲಿ ಐರ್ಲೆಂಡ್ ವಿರುದ್ಧ ಗಳಿಸಿದ್ದ ವಿಶ್ವ ದಾಖಲೆಯ ಔಟಾಗದೆ 232 ರನ್ ಕೂಡ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News