ನೀವೆಂತ ಚೌಕಿದಾರ ? ಮೋದಿ ವಿರುದ್ಧ ಉವೈಸಿ ವಾಗ್ದಾಳಿ

Update: 2019-03-22 06:59 GMT

ಹೊಸದಿಲ್ಲಿ, ಮಾ. 22: ಪ್ರಧಾನಿ ನರೇಂದ್ರ ಮೋದಿ ನಿಜವಾಗಿಯೂ ದೇಶದ "ಚೌಕಿದಾರ" ಆಗಿದ್ದರೆ ಸಮಜೋತಾ ಸ್ಫೋಟ ಪ್ರಕರಣದ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಆಗ್ರಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ "ನಾನು ಕೂಡಾ ಕಾವಲುಗಾರ (ಮೇ ಭೀ ಚೌಕಿದಾರ್)" ಅಭಿಯಾನವನ್ನು ತಡರಾತ್ರಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕಟುವಾಗಿ ಟೀಕಿಸಿದ ಅವರು, "ನೀವೆಂತ ಕಾವಲುಗಾರರು ? ಸಮಜೋತಾ ಸ್ಫೋಟದಲ್ಲಿ 25 ಮಂದಿ ಭಾರತೀಯರು ಕೂಡಾ ಕೊಲ್ಲಲ್ಪಟ್ಟಿದ್ದರು. ಬಾಂಬ್‌ ಸ್ಫೋಟ ಉಗ್ರರ ಕೃತ್ಯ. ನೀವು ಹೇಗೆ ಕಾವಲುಗಾರರಾಗುತ್ತೀರಿ ?" ಎಂದು ವಾಗ್ದಾಳಿ ನಡೆಸಿದರು.

ಮೋದಿ ನಿಜವಾಗಿಯೂ ಕಾವಲುಗಾರರೇ ಆಗಿದ್ದರೆ, ಪಂಚಕುಲ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಸರ್ಕಾರ ಮೇಲ್ಮನವಿ ಸಲ್ಲಿಸುತ್ತದೆ ಎಂದು ಘೋಷಿಸಬೇಕು ಎಂದು ಉವೈಸಿ ಆಗ್ರಹಿಸಿದರು.

ಭಾರತ- ಪಾಕಿಸ್ತಾನ ನಡುವೆ ಓಡಾಡುವ ಈ ರೈಲಿನಲ್ಲಿ 2007ರ ಫೆಬ್ರವರಿ 18ರಂದು ಹರ್ಯಾಣದ ಪಾಣಿಪತ್ ಬಳಿ ಸ್ಫೋಟ ಸಂಭವಿಸಿತ್ತು. 68 ಮಂದಿ ಬಲಿಯಾದ ಪ್ರಕರಣದ ಪ್ರಮುಖ ಆರೋಪಿಗಳಾದ ಅಸೀಮಾನಂದ ಮತ್ತು ಇತರ ಮೂವರನ್ನು ನ್ಯಾಯಾಲಯ ಬುಧವಾರ ದೋಷಮುಕ್ತಗೊಳಿಸಿತ್ತು.
ಪುಲ್ವಾಮ, ಉರಿ ಮತ್ತು ಪಠಾಣ್‌ ಕೋಟ್ ವಾಯುಪಡೆ ಶಿಬಿರದ ಮೇಲೆ ನಡೆದ ದಾಳಿಗಳನ್ನು ಉಲ್ಲೇಖಿಸಿದ ಅವರು, ಮೋದಿ ಎಂಥ ಕಾವಲುಗಾರ ಎಂದು ಪ್ರಶ್ನಿಸಿದರು.

ದೇಶಕ್ಕೆ ಕಾವಲುಗಾರ ಬೇಕಾಗಿಲ್ಲ; ಪ್ರಾಮಾಣಿಕ ಪ್ರಧಾನಿ ಬೇಕು; ಜಾತ್ಯತೀತತೆ, ನ್ಯಾಯ, ಬ್ರಾತೃತ್ವ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿದಿರುವ ದೇಶದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬಲ್ಲ ವ್ಯಕ್ತಿಯ ಅಗತ್ಯ ದೇಶಕ್ಕೆ ಇದೆ ಎಂದು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News