ಈ ಶ್ರೀಮಂತ ಅಭ್ಯರ್ಥಿಯ ಆಸ್ತಿ 895 ಕೋಟಿ ರೂ., ಪತ್ನಿಯ ಆಸ್ತಿ 613 ಕೋಟಿ ರೂ.!

Update: 2019-03-23 08:53 GMT

ಹೈದರಾಬಾದ್, ಮಾ.23: ತೆಲಂಗಾಣದ ಚೆವೆಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೊಂಡ ವಿಶ್ವೇಶ್ವರ ರೆಡ್ಡಿ  ತಮ್ಮ ನಾಮಪತ್ರ ಸಲ್ಲಿಕೆಯ ವೇಳೆ ಸಲ್ಲಿಸಿದ ಆಸ್ತಿ ಘೋಷಣಾ ಪತ್ರದಲ್ಲಿ ತಮ್ಮ ಒಟ್ಟು ಸಂಪತ್ತಿನ ಮೌಲ್ಯ 895 ಕೋಟಿ ರೂ. ಎಂದು ನಮೂದಿಸಿದ್ದು ಅವರು  ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಅತ್ಯಂತ ಶ್ರೀಮಂತ ರಾಜಕಾರಣಿಯಾಗಿದ್ದಾರೆ.

ವಿಶ್ವೇಶ್ವರ ರೆಡ್ಡಿಯ ಚರಾಸ್ತಿ ಮೌಲ್ಯ 223 ಕೋಟಿ  ರೂ. ಆಗಿದ್ದರೆ, ಅವರ ಪತ್ನಿ, ಅಪೋಲೋ ಆಸ್ಪತ್ರೆಗಳ ಜಂಟಿ ಆಡಳಿತ ನಿರ್ದೇಶಕಿ ಕೆ ಸಂಗೀತಾ ರೆಡ್ಡಿ ಅವರ  ಒಟ್ಟು ಚರಾಸ್ತಿ ಮೌಲ್ಯ 613 ಕೋಟಿ ರೂ.ಗಳು. ಅವರ ಅವಲಂಬಿತ ಪುತ್ರನ ಚರಾಸ್ತಿ ಮೌಲ್ಯ ಸುಮಾರು 20 ಕೋಟಿ ರೂ., ಆದರೆ  ಅವರ ಆಸ್ತಿ ಘೋಷಣಾ ಪತ್ರದ ಪ್ರಕಾರ ಕುಟುಂಬದ ಯಾವುದೇ ಸದಸ್ಯ ಕಾರು ಅಥವಾ ಇನ್ಯಾವುದೇ ಇತರ ವಾಹನ ಹೊಂದಿಲ್ಲ.

ವಿಶ್ವೇಶ್ವರ ರೆಡ್ಡಿ ಹೊಂದಿರುವ ಸ್ಥಿರಾಸ್ತಿ ಮೌಲ್ಯ ರೂ 36 ಕೋಟಿಯಷ್ಟಾಗಿದ್ದರೆ ಅವರ ಪತ್ನಿಯ ಹೆಸರಿನಲ್ಲಿರುವ ಸ್ಥಿರಾಸ್ತಿಗಳ ಮೌಲ್ಯ ರೂ 1.81 ಕೋಟಿ ಆಗಿದೆ.

ಶುಕ್ರವಾರ ತಮ್ಮ ನಾಮ ಪತ್ರ ಸಲ್ಲಿಕೆ ವೇಳೆ ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ರೆಡ್ಡಿ ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ. 2014ರ ಚುನಾವಣೆ ವೇಳೆ ಅವರ ಕುಟುಂಬದ ಒಟ್ಟು ಸಂಪತ್ತಿನ ಮೌಲ್ಯ ರೂ 528 ಕೋಟಿ ಆಗಿತ್ತು. ಆಗ ತೆಲಂಗಾಣ ರಾಷ್ಟ್ರ ಸಮಿತಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಿಂತ ಮುನ್ನ ಕಾಂಗ್ರೆಸ್ ಸೇರಿದ್ದರು.

ನೆಲ್ಲೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಆಂಧ್ರ ಪ್ರದೇಶ ಸಚಿವ ಪಿ ನಾರಾಯಣ ತಮ್ಮ ಕುಟುಂಬದ ಒಟ್ಟು ಆಸ್ತಿ ಮೌಲ್ಯ ರೂ 667 ಕೋಟಿ ಎಂದು ಘೋಷಿಸಿದ್ದಾರೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಕುಟುಂಬದ ಆಸ್ತಿ ಮೌಲ್ಯ ರೂ 574 ಕೋಟಿ ಆಗಿದ್ದರೆ, ವೈಎಸ್‍ಆರ್ ಕಾಂಗ್ರೆಸ್ ಅಧ್ಯಕ್ಷ ವೈ ಎಸ್ ಜಗನಮೋಹನ್ ರೆಡ್ಡಿ ಮತ್ತವರ ಪತ್ನಿಯ ಒಟ್ಟು ಘೋಷಿತ ಸಂಪತ್ತಿನ ಮೌಲ್ಯ ರೂ 538 ಕೋಟಿ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News