ಬಾಬಾ ಬುಡನ್‍ಗಿರಿಯಲ್ಲಿ ಶಾಂತಿಯುತ ಉರೂಸ್

Update: 2019-03-23 11:28 GMT

ಚಿಕ್ಕಮಗಳೂರು, ಮಾ.23: ಇನಾಂ ದತ್ತಾತ್ರೇಯ ಪೀಠ ಬಾಬಾಬುಡನ್ ದರ್ಗಾದಲ್ಲಿ ವಾರ್ಷಿಕ ಸಂದಲ್ ಮತ್ತು ಉರೂಸ್ ಶುಕ್ರವಾರ ಸಂಜೆ ಶಾಂತಿಯುತವಾಗಿ ನಡೆಯಿತು.

ಅತ್ತಿಗುಂಡಿಯಿಂದ ಸಂಜೆ 5 ಗಂಟೆಗೆ ಗಂಧವನ್ನು ಫಕೀರರು ದಫ್ ಬಾರಿಸುವ ಮೂಲಕ ದರ್ಗಾದ ಆವರಣಕ್ಕೆ ತರುತ್ತಿದ್ದಂತೆ ಸಮುದಾಯದ ಮುಖಂಡರು ಗಂಧವನ್ನು ಬರಮಾಡಿಕೊಂಡರು.

ಉರೂಸ್ ನಡೆಸಲು ಗೌಸ್‍ ಮೊಹಿಯುದ್ದೀನ್ ಶಾಖಾದ್ರಿ ಅವರಿಗೆ ಅವಕಾಶ ನೀಡಬೇಕೆಂದು ಒಂದು ಗುಂಪು ಶಾಖಾದ್ರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಇತ್ತೀಚೆಗೆ ಮನವಿ ಮಾಡಿತ್ತು. ಆದರೆ ನ್ಯಾಯಾಲಯದ ಆದೇಶದಂತೆ ಹಾಗೂ ಸರಕಾರದ ನಿರ್ದೇಶನದಂತೆ ಉರೂಸ್‍ಅನ್ನು ಈ ಹಿಂದೆ ನಡೆದಂತೆಯೇ ನಡೆಯಬೇಕೆಂದು ತಿಳಿಸಿದ ಜಿಲ್ಲಾಧಿಕಾರಿಗಳು ಶಾಖಾದ್ರಿ ನೇತೃತ್ವದಲ್ಲಿ ಉರೂಸ್ ನಡೆಸಲು ಅವಕಾಶ ನೀಡಲಿಲ್ಲ. ಆಗ ಮೌಖಿಕ ಪ್ರತಿಭಟನೆ ಸಲ್ಲಿಸಿದ ಗುಂಪು ಶಾಖಾದ್ರಿಯೊಂದಿಗೆ ಉರೂಸ್‍ನಲ್ಲಿ ಭಾಗವಹಿಸದೆ ಹಿಂದಕ್ಕೆ ಹೋಯಿತು. 

ಕಳೆದ ವರ್ಷದಂತೆ ಮುಜಾವರ್ ಮೂಲಕ ಗುಹೆಯೊಳಗಿರುವ ಗೋರಿಗಳಿಗೆ ಗಂಧ ಹಚ್ಚುವ ಮತ್ತು ಹಸಿರು ಬಟ್ಟೆ ಹೊದಿಸುವ ಕಾರ್ಯ ಜಿಲ್ಲಾಡಳಿತ ನೇತೃತ್ವದಲ್ಲಿ ನಡೆಯಿತು. ಉರೂಸ್ ಕಾರ್ಯಕ್ರಮಕ್ಕೆ 4 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಶನಿವಾರ ಫಕೀರರ ಸಮ್ಮೇಳನ ನಡೆಯಲಿದ್ದು, ನಂತರ ಜನ್ನತ್ ನಗರದಲ್ಲಿ ಉರೂಸ್ ನಡೆಯಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಉರೂಸ್ ಆಚರಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಹರೀಶ್‍ ಪಾಂಡೆ, ಉಪವಿಭಾಗಾಧಿಕಾರಿ ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಕುಮಾರ್, ಮುಜುರಾಯಿ ಇಲಾಖೆ ಅಧಿಕಾರಿಗಳು ಹಾಗೂ ಮುಖಂಡರಾದ ದಾದಾಹಯ್ಯತ್ ಮೀರ್ ಖಲಂದರ್, ಉರೂಸ್ ಸಮಿತಿಯ ಕಾರ್ಯದರ್ಶಿ ಸಿ.ಎಸ್.ಖಲಂದರ್, ಸಿರಾಜ್, ಯೂಸುಫ್‍ ಹಾಜಿ, ಜಮ್‍ಶಿದ್‍ ಖಾನ್, ಚಾಂದ್‍ಪಾಷಾ, ಮುಬಾರಕ್, ನದೀಂ, ವಸೀಂ, ಶಾಹಿದ್, ನಾಸಿರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News