ಕಳಸ: ಮೆಸ್ಕಾಂ ಜನಸಂಪರ್ಕ ಸಭೆ ದಿಢೀರ್ ರದ್ದು; ಸಾರ್ವಜನಿಕರಿಂದ ಮೆಸ್ಕಾಂ ಅಧಿಕಾರಿಗಳಿಗೆ ತರಾಟೆ

Update: 2019-03-23 11:32 GMT

ಚಿಕ್ಕಮಗಳೂರು, ಮಾ.23: ಜಿಲ್ಲೆಯ ಕಳಸ ಪಟ್ಟಣದ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಕುಂದು ಕೊರತೆ ಆಲಿಸಲು ಸಭೆ ಕರೆದು ಸಾರ್ವಜನಿಕರಿಗೆ ಮಾಹಿತಿ ನೀಡದೇ ಸಭೆಯನ್ನು ದಿಢೀರ್ ರದ್ದು ಮಾಡಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದ ಘಟನೆ ಶನಿವಾರ ಪಟ್ಟಣದ ಕೆಇಬಿ ಆವರಣದಲ್ಲಿ ನಡೆದಿದೆ.

ಕಳಸ ಹೋಬಳಿ ವ್ಯಾಪ್ತಿಯ ಮೆಸ್ಕಾಂ ಕಚೇರಿಯ ಜೆಇ ಅವರು ಮಾ.23ರಂದು ಬೆಳಗ್ಗೆ 10ಕ್ಕೆ ಪಟ್ಟಣದಲ್ಲಿ ಮೆಸ್ಕಾಂ ಕಚೇರಿ ಆವರಣದಲ್ಲಿ ಜನಸಂಪರ್ಕ ಸಭೆ ಆಯೋಜಿಸಿರುವ ಬಗ್ಗೆ ಇತ್ತೀಚೆಗೆ ಪತ್ರಿಕೆಗಳಲ್ಲಿ ಪ್ರಕಟನೆ ಹೊರಡಿಸಿದ್ದರು. ಮೆಸ್ಕಾಂ ಜನಸಂಪರ್ಕ ಸಭೆ ಕರೆದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಹೋಬಳಿ ವ್ಯಾಪ್ತಿಯ ನೂರಾರು ಗ್ರಾಮಸ್ಥರು ತಮ್ಮ ಗ್ರಾಮಗಳ ವಿದ್ಯುತ್ ಸಮಸ್ಯೆಗಳನ್ನು ಹೇಳಿ ಪರಿಹಾರ ಪಡೆಯುವ ಸಲುವಾಗಿ ಪಟ್ಟಣದ ಮೆಸ್ಕಾಂ ಕಚೇರಿ ಆವರಣದಲ್ಲಿ ಜಮಾಯಿಸಿದ್ದರು. ಆದರೆ ಮೆಸ್ಕಾಂ ಕಚೇರಿ ಆವರಣದಲ್ಲಿ ಗಂಟೆ 11 ಆದರೂ ಜೆಇ ಸೇರಿದಂತೆ ಮೆಸ್ಕಾಂನ ಯಾವ ಅಧಿಕಾರಿಗಳು ಸ್ಥಳಕ್ಕೆ ಬಂದಿರಲಿಲ್ಲ. ಈ ಬಗ್ಗೆ ಕಚೇರಿಗೆ ವಿಚಾರಿಸಲು ಹೋದವರಿಗೆ ಶಾಕ್ ಕಾದಿತ್ತು. ಕಚೇರಿಯ ಗೋಡೆ ಮೇಲೆ "ಚುನಾವಣಾ ನೀತಿ ಸಂಹಿತೆ ಕಾರಣ ಸಭೆಯನ್ನು ರದ್ದು ಪಡಿಸಲಾಗಿದೆ" ಎಂಬ ಬರಹ ಕಂಡು ಸಾರ್ವಜನಿಕರು ದಂಗಾಗಿದ್ದಾರೆ.

ಇದೇ ವೇಳೆ ಕಚೇರಿ ಸಿಬ್ಬಂದಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಭೆಯನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದ್ದರಿಂದ ಅಧಿಕಾರಿಗಳು ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೇ ದಿಢೀರನೆ ಸಭೆ ರದ್ದು ಮಾಡಿದ ಕ್ರಮದಿಂದ ಆಕ್ರೋಶಗೊಂಡು ಕಚೇರಿ ಸಿಬ್ಬಂದಿಯೊಡನೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಪಟ್ಟಣದ ಕೆಲ ವರ್ತಕರು ಮೆಸ್ಕಾಂ ಜೆಇ ಅವರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಲು ಮುಂದಾದಾಗ ಜೆಇ ಅವರು ತಮ್ಮ ಮೊಬೈಲ್ ಸ್ವಿಚ್‍ಆಪ್ ಮಾಡಿಕೊಂಡರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮೆಸ್ಕಾಂ ಜನಸಂಪರ್ಕ ಸಭೆಯನ್ನು ಮೂರು ತಿಮಗಳಿಗೊಮ್ಮೆ ನಡೆಸಬೇಕೆಂದು ಸರಕಾರದ ಸುತ್ತೋಲೆ ಇದ್ದರೂ ಕಳಸ ಹೋಬಳಿ ವ್ಯಾಪ್ತಿಯಲ್ಲಿ ಇದುವರೆಗೂ ಒಂದೇ ಒಂದು ಸಭೆ ನಡೆಸಿಲ್ಲ. ಮೆಸ್ಕಾಂ ಅಧಿಕಾರಿಗಳು ಮಾ.23ರಂದು ಶನಿವಾರ ಜನಸಂಪರ್ಕ ಸಭೆ ನಡೆಸುವುದಾಗಿ ಪತ್ರಿಕೆಗಳಲ್ಲಿ ಪ್ರಕಟನೆ ಹೊರಡಿಸಿದ್ದರು. ಕಳಸ ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ಸಂಬಂಧಿ ಸಮಸ್ಯೆಗಳು ಹೆಚ್ಚಿರುವುದರಿಂದ ವಿವಿಧ ಗ್ರಾಮಗಳಿಂದ ಸಮಸ್ಯೆ ಹೇಳಿಕೊಳ್ಳುವ ಸಲುವಾಗಿ ನೂರಾರು ಗ್ರಾಮಸ್ಥರು ಪಟ್ಟಣಕ್ಕೆ ಆಗಮಿಸಿದ್ದಾರೆ. 

ಆದರೆ ಮೆಸ್ಕಾಂ ಅಧಿಕಾರಿಗಳು ಸಾರ್ವಜನಿಕರಿಗೆ ಯಾವುದೇ ಮುನ್ಸೂಚನೆ ನೀಡದೇ ಸಭೆಯನ್ನು ರದ್ದು ಮಾಡಿದ್ದಾರೆ. ಸಿಬ್ಬಂದಿಯನ್ನು ವಿಚಾರಿಸಿದರೆ ನೀತಿ ಸಂಹಿತೆ ನೆಪವೊಡ್ಡಿ ಸಭೆ ರದ್ದು ಮಾಡಿದ್ದಾರೆ ಎಂದು ಉಡಾಫೆಯ ಉತ್ತರ ನೀಡುತ್ತಾರೆ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕವೇ ಸಭೆ ಇರುವ ಬಗ್ಗೆ ಪ್ರಕಟನೆ ಹೊರಡಿಸಲಾಗಿದೆ. ನೀತಿ ಸಂಹಿತೆ ಇರುವುದು ಅಧಿಕಾರಿಗಳಿಗೆ ಮೊದಲೇ ಗೊತ್ತಿರಲಿಲ್ಲವೇ?, ಸಭೆ ರದ್ದಾಗಿರುವ ಬಗ್ಗೆಯೂ ಪತ್ರಿಕೆಗಳಲ್ಲಿ ಪ್ರಕಟನೆ ಕೊಡಬಹುದಿತ್ತಲ್ಲಾ ಎಂದು ಈ ವೇಳೆ ಮೆಸ್ಕಾಂ ಕಚೇರಿ ಎದುರು ಜಮಾಯಿಸಿದ್ದ ಗ್ರಾಪಂ ಸದಸ್ಯ ಹಿನಾರಿ ಸಂತೋಷ್, ವರ್ತಕ ಟಿಟ್ಟು ಥಾಮಸ್, ಕಾಂಗ್ರೆಸ್ ಮುಖಂಡ ರಿಝ್ವಾನ್ ಹಾಗೂ ನೂರಾರು ಗ್ರಾಮಸ್ಥರು ಸಿಬ್ಬಂದಿಯನ್ನು ತರಾಟೆಗೆ ಪಡೆದರು.

ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದ ವಿಷಯ ತಿಳಿದ ಮೆಸ್ಕಾಂ ಜೆಇ ಜೆಇ ದೂರವಾಣಿ ಮೂಲಕ ಮುಖಂಡರೊಂದಿಗೆ ಮಾತನಾಡಿ, ಚುನಾವಣೆ ಮುಗಿದ ಬಳಿಕ ಮೆಸ್ಕಾಂ ಜನಸಂಪರ್ಕ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆಂದು ಸಾರ್ವಜನಿಕರು ತಿಳಿಸಿದ್ದಾರೆ.

ಕಳಸ ಹೋಬಳಿ ವ್ಯಾಪ್ತಿಯಲ್ಲಿ ಬೆಟ್ಟದಷ್ಟು ವಿದ್ಯುತ್ ಸಮಸ್ಯೆಗಳಿವೆ. ಮೆಸ್ಕಾಂ ವತಿಯಿಂದ ಇದೇ ಮೊದಲ ಬಾರಿಗೆ ಜನಸಂಪರ್ಕ ಸಭೆ ನಡೆಸುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟನೆ ಹೊರಡಿಸಲಾಗಿದೆ. ಆದರೆ ಶನಿವಾರ ನಿಗದಿಯಾಗಿದ್ದ ಸಭೆಯನ್ನು ಅಧಿಕಾರಿಗಳು ಯಾವ ಮುನ್ಸೂಚನೆ ನೀಡದೇ ರದ್ದು ಮಾಡಿದ್ದಾರೆ. ಈ ಬಗ್ಗೆ ವಿಚಾರಿಸಲು ಮುಂದಾದರೆ ಜೆಇ ಅವರು ಕೈಗೆ ಸಿಗುತ್ತಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಕೆಲವರ ಮೊಬೈಲ್ ನಂಬರ್‍ಗಳನ್ನು ಬ್ಲಾಕ್ ಮಾಡಿ ನಾಪತ್ತೆಯಾಗಿದ್ದಾರೆ. ಸಭೆಯಲ್ಲಿ ಭಾಗವಹಿಸಲು ನೂರಾರು ಗ್ರಾಮಸ್ಥರು ತಮ್ಮ ಕೆಲಸ ಬಿಟ್ಟು ಬಂದಿದ್ದಾರೆ. ಅವರೆಲ್ಲರೂ ಬರಿಗೈಲಿ ಹಿಂದಿರುಗುವಂತಾಗಿದೆ. ಇಲ್ಲಿನ ಮೆಸ್ಕಾಂ ಅಧಿಕಾರಿಗಳು ಮನಸೋ ಇಚ್ಛೆ ಕಾರ್ಯನಿರ್ವಹಿಸುತ್ತಿದ್ದಾರೆ.
- ಟಿಟ್ಟು ಥಾಮಸ್, ವರ್ತಕ, ಕಳಸ ಪಟ್ಟಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News