ಯಡಿಯೂರಪ್ಪಗೆ ಡೈರಿ ಬರೆಯುವ ಅಭ್ಯಾಸವೇ ಇಲ್ಲ: ಪುತ್ರ ಬಿ.ವೈ.ರಾಘವೇಂದ್ರ

Update: 2019-03-23 12:11 GMT

ಶಿವಮೊಗ್ಗ, ಮಾ. 23: ಬಿ.ಎಸ್ ಯಡಿಯೂರಪ್ಪಗೆ ಡೈರಿ ಬರೆಯುವ ಅಭ್ಯಾಸವಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ. 

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಯಡಿಯೂರಪ್ಪರವರು ಬರೆದ ಡೈರಿ ಎಂದು ಕಾಂಗ್ರೆಸ್ ಪಕ್ಷ ಹೇಳಿರುವುದು ಕೀಳುಮಟ್ಟದ ಪ್ರಚಾರ ತಂತ್ರವಾಗಿದೆ. ಇದು ಕಾಂಗ್ರೆಸ್‍ನ ಭ್ರಷ್ಟತೆಗೆ ಸಾಕ್ಷಿಯಾಗಿದೆ. ಸುಳ್ಳು ಆರೋಪ ಮಾಡಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಲಾಗಿದೆ ಎಂದರು. 

2009ರ ನಕಲಿ ಡೈರಿಯನ್ನು ಇಟ್ಟುಕೊಂಡು ಕಾಂಗ್ರೆಸ್ ಮುಖಂಡರು ಯಡಿಯೂರಪ್ಪನವರ ಬಗ್ಗೆ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಚಾರಣೆಯಾಗಿ ಅದು ಮುಗಿದ ಅಧ್ಯಾಯವಾಗಿದೆ ಎಂದು ಹೇಳಿದರು. 

ಇದರಿಂದ ನಮಗೇನೂ ಮುಜುಗರವಾಗುವುದಿಲ್ಲ. ತಪ್ಪು ಮಾಡಿದ್ದರೆ ತಾನೇ ಮುಜುಗರವಾಗುವುದು. ಅವರಿಗೆ ಡೈರಿ ಬರೆಯುವ ಅಭ್ಯಾಸವೇ ಇರಲಿಲ್ಲ. ಯಾರಾದರೂ ಡೈರಿ ಬರೆಯುವವರು ಪ್ರತಿ ಪುಟದಲ್ಲೂ ಸಹಿ ಹಾಕುತ್ತಾರೆಯೇ ಎಂದು ಪ್ರಶ್ನೆ ಮಾಡಿದರು. 

ಗೆಲುವು: ಪ್ರಸ್ತುತ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಗೆಲುವು ನಿಶ್ಚಿತವಾಗಿದೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳು, ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಜನಪರ ಯೋಜನೆಗಳು, ಮತ್ತೊಮ್ಮೆ ಮೋದಿ ಪ್ರಧಾನಿ ಮಂತ್ರಿಯಾಗಬೇಕೆಂಬ ಆಶಯ ಇವೆಲ್ಲವೂ ತಮ್ಮ ಗೆಲುವಿಗೆ ಸಹಾಯಕವಾಗುತ್ತದೆ ಎಂದರು.

ತಾವು ಸಂಸದರಾಗಿದ್ದ ಅವಧಿಯಲ್ಲಿ ಹೊಸ ರೈಲುಗಳ ಪ್ರಾರಂಭಕ್ಕೆ ಹೆಚ್ಚು ಒತ್ತು  ನೀಡಿದ್ದು, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿಗಾಗಿ ಶ್ರಮಿಸಿದೆ. ಬಹುದಿನದ ಮಲೆನಾಡು ಜನರ ಕನಸಾಗಿರುವ ಸಿಗಂದೂರು ಸೇತುವೆ ನಿರ್ಮಾಣಕ್ಕೆ ಈಗಾಗಲೇ ಕೇಂದ್ರದ ಅನುಮತಿ ದೊರೆತಿದೆ. ಶಿವಮೊಗ್ಗಕ್ಕೆ ಇಎಸ್‍ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಂದಿದೆ. ಭದ್ರಾವತಿ ವಿಐಎಸ್‍ಎಲ್ ಕಾರ್ಖಾನೆಗೆ ಪ್ರತ್ಯೇಕ ಗಣಿ ನಿರ್ಮಿಸಲಾಗಿದೆ, ಉತ್ಪಾದನೆ ಆರಂಭವಾಗಿದೆ. ಸುಮಾರು 4 ಸಾವಿರ ಮನೆಗಳ ವಾಸಕ್ಕೆ ಲೈಸೆನ್ಸ್ ನವೀಕರಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News